ಅಸ್ಸಾಂ ಸಿಎಂ ಹಿಮಂತ ಶರ್ಮಾ ವಿರುದ್ಧ ಸಿಪಿಎಂ ಅರ್ಜಿ: ನ್ಯಾಯಾಲಯ ಚುನಾವಣಾ ಅಖಾಡವಾಗುತ್ತಿದೆ ಎಂದು ಸುಪ್ರೀಂ ಅಸಮಾಧಾನ

ಜನವರಿ 27ರಂದು ಮುಖ್ಯಮಂತ್ರಿ ಶರ್ಮಾ ಮಾಡಿದ ಸಾರ್ವಜನಿಕ ಭಾಷಣಕ್ಕೆ ಸಿಪಿಎಂ ನಾಯಕಿ ಆನಿ ರಾಜಾ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದರು.
Himanta Biswa Sarma
Himanta Biswa Sarmafacebook
Published on

ಅನೇಕ ಸಂದರ್ಭಗಳಲ್ಲಿ ರಾಜಕೀಯ ಹೋರಾಟಗಳು ನ್ಯಾಯಾಲಯಗಳಲ್ಲಿ ನಡೆಯುತ್ತಿವೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ದ್ವೇಷ ಭಾಷಣದ ಆರೋಪ ಮಾಡಿದ್ದ ಎರಡು ಅರ್ಜಿಗಳನ್ನು ಅರ್ಜಿದಾರರಲ್ಲೊಬ್ಬರ ಪರ ವಕೀಲ ನಿಜಾಮ್‌ ಪಾಷಾ ಅವರು ಉಲ್ಲೇಖಿಸಿದಾಗ ಸಿಜೆಐ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ಎನ್‌ ವಿ ಅಂಜಾರಿಯಾ ಅವರಿದ್ದ ಪೀಠ ಮೇಲಿನಂತೆ ಪ್ರತಿಕ್ರಿಯಿಸಿತು.

Also Read
ಅನಿಲ್ ಅಂಬಾನಿ-ಆರ್‌ಕಾಮ್‌ ಬ್ಯಾಂಕ್ ವಂಚನೆ ಪ್ರಕರಣ: ತನಿಖೆಯ ಸ್ಥಿತಿಗತಿ ವರದಿ ಕೇಳಿದ ಸುಪ್ರೀಂ

ಸಮಸ್ಯೆ ಏನೆಂದರೆ ಚುನಾವಣೆ ಬಂದಾಗ ನ್ಯಾಯಲಯವೇ ಅವುಗಳಿಗೆ ಅಖಾಡವಾಗುವುದನ್ನು ತಾವು ಕಂಡಿರುವುದಾಗಿ ಪೀಠವು ಹೇಳಿತು.

ಜನವರಿ 27ರಂದು ಮುಖ್ಯಮಂತ್ರಿ ಶರ್ಮಾ ಮಾಡಿದ ಸಾರ್ವಜನಿಕ ಭಾಷಣಕ್ಕೆ ಸಿಪಿಎಂ ನಾಯಕಿ ಆನಿ ರಾಜಾ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದರು. “ನಾಲ್ಕು–ಐದು ಲಕ್ಷ ಮಿಯಾ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ” ಮತ್ತು “ಬಿಜೆಪಿ ಹಾಗೂ ನಾನು ಮಿಯಾರ ವಿರುದ್ಧ” ಎಂದು ಶರ್ಮಾ ಹೇಳಿರುವುದಕ್ಕೆ ಆನಿ ಆಕ್ಷೇಪಿಸಿದ್ದರು. ಮಿಯಾ” ಪದವನ್ನು ಮುಸ್ಲಿಮರ ವಿರುದ್ಧ ಅವಮಾನಕಾರಿ ಅರ್ಥದಲ್ಲಿ ಬಳಸಲಾಗಿದೆ ಎಂದಿದ್ದರು.

ಇದಲ್ಲದೆ, ಫೆಬ್ರವರಿ 7ರಂದು ಬಿಜೆಪಿ ಅಸ್ಸಾಂ ಘಟಕದ ವಿಡಿಯೋ ಒಂದನ್ನು ಹಂಚಿಕೊಂಡಿತ್ತು. ಅದರಲ್ಲಿ ಮುಖ್ಯಮಂತ್ರಿ ಶರ್ಮಾ ಇಬ್ಬರು ಮುಸ್ಲಿಂ ಪುರುಷರ ಅನಿಮೇಟೆಡ್ ಚಿತ್ರಗಳತ್ತ ಬಂದೂಕಿನಿಂದ ಗುಂಡು ಹಾರಿಸುವ ದೃಶ್ಯವಿತ್ತು, “ದಯೆ ಇಲ್ಲ” ಮುಂತಾದ ಪದಗಳನ್ನು ಸೇರಿಸಲಾಗಿತ್ತು. ಈ ವಿಡಿಯೋ ಬಗ್ಗೆ ಬಳಿಕ ತೀವ್ರ ಟೀಕೆ ವ್ಯಕ್ತವಾದ ಕಾರಣ ಅದನ್ನು ಬಿಜೆಪಿಯ ಅಧಿಕೃತ ಖಾತೆಯಿಂದ ತೆಗೆದುಹಾಕಲಾಯಿತು. ಆದರೆ ಬೇರೆಡೆಗಳಲ್ಲಿ ಅದು ಇನ್ನೂ ಹರಡುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Also Read
ಶಿಕ್ಷೆಯ ಪ್ರಮಾಣ ಹೆಚ್ಚಿಸಲು ಸರ್ಕಾರಿ ಅಭಿಯೋಜಕರು, ನ್ಯಾಯಾಧೀಶರು, ತನಿಖಾಧಿಕಾರಿಗಳ ಸಭೆ ನಡೆಸಿ: ನ್ಯಾ. ಸಂದೇಶ್‌ ಸಲಹೆ

ಇಂತಹ ಭಾಷಣಗಳು ಮತ್ತು ದೃಶ್ಯಗಳು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷ, ಭೀತಿ ಮತ್ತು ಬಹಿಷ್ಕಾರದ ವಾತಾವರಣವನ್ನು ಉಂಟುಮಾಡುತ್ತವೆ. ಕೇಂದ್ರ ಹಾಗೂ ರಾಜ್ಯದ ಸಚಿವರ ಮೇಲೆ ಸಂವಿಧಾನವು ರಾಷ್ಟ್ರೀಯ ಏಕತೆ ಮತ್ತು ಸಹೋದರತ್ವ ಕಾಪಾಡುವ ಕರ್ತವ್ಯ ವಿಧಿಸಿದ್ದು, ಸಮುದಾಯ ದ್ವೇಷಕ್ಕೆ ಕಾರಣವಾಗುವ ನಡೆಗಳು ಸಂವಿಧಾನಾತ್ಮಕ ಎಲ್ಲೆಯನ್ನು ಮೀರಿದ್ದಾಗಿವೆ ಎಂದು ಅರ್ಜಿ ಹೇಳಿತ್ತು. ಆದ್ದರಿಂದ ಶರ್ಮಾ ವಿರುದ್ಧ ಎಫ್‌ಐಆರ್‌ ದಾಖಲಿಸಿ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುವಂತೆ ಮನವಿ ಮಾಡಲಾಗಿತ್ತು.

ಈ ಹಿಂದೆ ಜಮಾಯಿತ್ ಉಲೇಮಾ- ಎ-ಹಿಂದ್ ಕೂಡ ಶರ್ಮಾ ಅವರ ಭಾಷಣದ ವಿರುದ್ಧ ಅರ್ಜಿ ಸಲ್ಲಿಸಿತ್ತು. ಧಾರ್ಮಿಕ ಸಮುದಾಯಗಳನ್ನು ಗುರಿಯಾಗಿಸಿಕೊಂಡ ದ್ವೇಷ ಭಾಷಣ ಗಂಭೀರ ಸಂವಿಧಾನಾತ್ಮಕ ಲೋಪವಾಗಿದ್ದು, ಸಾರ್ವಜನಿಕ ಶಾಂತಿ ಮತ್ತು ಸಮಾಜದ ನೈತಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿತ್ತು.

Kannada Bar & Bench
kannada.barandbench.com