ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿ ವಿಧಾನಸಭೆಗೆ ಚುನಾವಣೆ ನಡೆಯಲು ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಸರ್ಕಾರೇತರ ಸಂಸ್ಥೆಯಾದ ಅಸೋಶಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು, ಚುನಾವಣಾ ಬಾಂಡ್ ಮಾರಾಟಕ್ಕೆ ನಿಷೇಧ ಹೇರುವಂತೆ ನಿರ್ದೇಶಿಸಲು ಕೋರಿದೆ.
2017ರಲ್ಲಿ ಚುನಾವಣಾ ಬಾಂಡ್ ಯೋಜನೆ ಪ್ರಶ್ನಿಸಿ ತಾನು ಸಲ್ಲಿಸಿರುವ ರಿಟ್ ಮನವಿಯನ್ನು ಮಾಸಾಂತ್ಯಕ್ಕೆ ವಿಚಾರಣೆಗೆ ನಿಗದಿಗೊಳಿಸುವಂತೆ ಎಡಿಆರ್ ಕೋರಿದೆ.
ಪಂಚರಾಜ್ಯಗಳಲ್ಲಿ ಶೀಘ್ರದಲ್ಲೇ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡುವುದಕ್ಕೆ ಅವಕಾಶ ಮಾಡಿಕೊಡುವುದರಿಂದ ಶೆಲ್ ಕಂಪನಿಗಳ ಮೂಲಕ ರಾಜಕೀಯ ಪಕ್ಷಗಳಿಗೆ ಅಕ್ರಮ, ಅನೈತಿಕ ಹಣ ವರ್ಗಾವಣೆ ಹೆಚ್ಚಲಿದೆ ಎಂದು ಮನವಿಯಲ್ಲಿ ಗಂಭೀರ ಆತಂಕ ವ್ಯಕ್ತಪಡಿಸಲಾಗಿದೆ.
“ರಿಟ್ ಮನವಿ ವಿಚಾರಣೆಗೆ ಬಾಕಿ ಇರುವಾಗ ಚುನಾವಣಾ ಬಾಂಡ್‌ಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅರ್ಜಿದಾರರು ಕೋರಿದ್ದಾರೆ” ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷದ ಜನವರಿಯಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಆ ಬಳಿಕ ಡಿಸೆಂಬರ್ 27ರಲ್ಲಿ ಇದೇ ತೆರನಾದ ಮನವಿ ಸಲ್ಲಿಸುವ ಮೂಲಕ ತುರ್ತು ವಿಚಾರಣೆ ಕೋರಿದ್ದರೂ ಪ್ರಕರಣವನ್ನು ವಿಚಾರಣೆಗೆ ನಿಗದಿಗೊಳಿಸಲಾಗಿಲ್ಲ.
ಚುನಾವಣಾ ಬಾಂಡ್ ಎಂಬುದು ಭರವಸೆಯ ಪತ್ರದ ರೂಪದಲ್ಲಿದ್ದು, ಅದನ್ನು ಯಾವುದೇ ವ್ಯಕ್ತಿ, ಕಂಪೆನಿ, ಸಂಸ್ಥೆ ಅಥವಾ ಸಂಘಟನೆಯ ವ್ಯಕ್ತಿಗಳು ಖರೀದಿಸಬಹುದಾಗಿದೆ. ಆ ವ್ಯಕ್ತಿ ಅಥವಾ ಸಂಸ್ಥೆಯು ಭಾರತೀಯತೆಯನ್ನು ಹೊಂದಿರಬೇಕಷ್ಟೆ. ಚುನಾವಣಾ ಬಾಂಡ್ ವಿಭಿನ್ನ ಬಗೆಯಲ್ಲಿದ್ದು, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ನಿರ್ದಿಷ್ಟ ಉದ್ದೇಶಕ್ಕಾಗಿ ಅವುಗಳನ್ನು ನೀಡಲಾಗುತ್ತದೆ.