ಸುಪ್ರೀಂ ನ್ಯಾಯಮೂರ್ತಿಯಾಗಿ ನ್ಯಾ. ದೀಪಂಕರ್ ದತ್ತಾ ಪದೋನ್ನತಿಗೆ ಎಸ್‌ಸಿಬಿಎ ಅಧ್ಯಕ್ಷ ವಿಕಾಸ್‌ ಸಿಂಗ್ ಆಗ್ರಹ

ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರಿಗೆ ಪದೋನ್ನತಿ ನೀಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ವರ್ಷ ಸೆ. 26ರಂದು ಶಿಫಾರಸು ಮಾಡಿತ್ತು.
Dipankar Datta
Dipankar Datta
Published on

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತಾ ಅವರಿಗೆ ಪದೋನ್ನತಿ ನೀಡಬೇಕು ಎಂದು ಹಿರಿಯ ನ್ಯಾಯವಾದಿ ಹಾಗೂ ಸರ್ವೋಚ್ಚ ನ್ಯಾಯಾಲಯ ವಕೀಲರ ಸಂಘದ ಅಧ್ಯಕ್ಷ ವಿಕಾಸ್‌ ಸಿಂಗ್‌ ಅವರು ಸಿಜೆಐ ಡಿ ವೈ ಚಂದ್ರಚೂಡ್‌ ಅವರನ್ನು ಒತ್ತಾಯಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ನ್ಯಾ. ಡಿ ವೈ ಚಂದ್ರಚೂಡ್‌ ಅವರಿಗೆ ನವದೆಹಲಿಯಲ್ಲಿ ಸಂಘ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್‌ ಕೊಲಿಜಿಯಂನ ಸಂಯೋಜನೆಯಲ್ಲಿ ಬದಲಾವಣೆಯಾದ ಮಾತ್ರಕ್ಕೆ ಅದರ ನಿಲುವಿನಲ್ಲಿ ಬದಲಾವಣೆಯಾಗಬಾರದು ಎಂದರು.

"ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರನ್ನು (ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿಗೊಳಿಸಲು) ಆರು ವಾರಗಳ ಹಿಂದೆ ಶಿಫಾರಸು ಮಾಡಲಾಗಿತ್ತು. ಕೊಲಿಜಿಯಂ ಸಂಯೋಜನೆ ಬದಲಾಗಿರುವುದರಿಂದ ಆ ನಿರ್ಧಾರ ಈಗ ನೇಪಥ್ಯಕ್ಕೆ ಸರಿಯಬಾರದು. ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು” ಎಂದು ಅವರು ಒತ್ತಾಯಿಸಿದರು.

Also Read
ವಕೀಲರು ಮತ್ತು ದಾವೆದಾರರಿಗೆ ನ್ಯಾಯಾಲಯ ಪ್ರಕ್ರಿಯೆಯನ್ನು ಒತ್ತಡರಹಿತವಾಗಿಸಲು ಯತ್ನಿಸುವೆ: ಸಿಜೆಐ ಡಿ ವೈ ಚಂದ್ರಚೂಡ್

ಫೆಬ್ರವರಿ 9, 1965 ರಂದು ಜನಿಸಿದ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರು ಮೊದಲು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದರು. ಅವರ ಸೋದರ ಮಾವ ನ್ಯಾ. ಅಮಿತಾವ್‌ ರಾಯ್ ಅವರು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು.

ನವೆಂಬರ್ 16, 1989ರಂದು ವಕೀಲ ವೃತ್ತಿ ಆರಂಭಿಸಿದ ದತ್ತಾ ಜೂನ್ 22, 2006 ರಂದು ಕಲ್ಕತ್ತಾ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. 23 ಏಪ್ರಿಲ್ 2020ರಂದು, ಅವರು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ, ಅವರು ಕೋಲ್ಕತ್ತಾದಿಂದ ರಸ್ತೆಯ ಮೂಲಕ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಸುಪ್ರೀಂ ಕೋರ್ಟ್ ಕೊಲಿಜಿಯಂ ಕಳೆದ ಸೆಪ್ಟೆಂಬರ್ 26ರಂದು ಅವರ ಪದೋನ್ನತಿಗೆ ಶಿಫಾರಸು ಮಾಡಿತ್ತು.

Kannada Bar & Bench
kannada.barandbench.com