ಎಲ್ಗಾರ್‌ ಪರಿಷತ್‌ ಪ್ರಕರಣ: ಫಾದರ್ ಸ್ಟ್ಯಾನ್‌ ಸ್ವಾಮಿಯವರ ಜಾಮೀನು ಮನವಿ ತಿರಸ್ಕರಿಸಿದ ಮುಂಬೈ ವಿಶೇಷ ನ್ಯಾಯಾಲಯ

2018ರಲ್ಲಿ ಭೀಮಾ ಕೋರೆಗಾಂವ್‌ನಲ್ಲಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸ್ವಾಮಿ ಅವರನ್ನು ರಾಂಚಿಯ ಅವರ ನಿವಾಸದಲ್ಲಿ ಅಕ್ಟೋಬರ್ 8ರಂದು ಬಂಧಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದ್ದು, ತಲೋಜಾ ಜೈಲಿಗೆ ವರ್ಗಾಯಿಸಲಾಯಿತು.
Father Stan Swamy
Father Stan Swamy

2018ರಲ್ಲಿ ನಡೆದಿದ್ದ ಭೀಮಾ ಕೋರೆಗಾಂವ್‌ ಗಲಭೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಸ್ಟ್ಯಾನ್‌ ಸ್ವಾಮಿ ಅವರಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸುವ ಪ್ರಕರಣಗಳ ವಿಚಾರಣೆ ಮಾಡುವ ವಿಶೇಷ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ.

ಭೀಮಾ ಕೋರೆಗಾಂವ್‌ ನಲ್ಲಿ ಗಲಭೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಸ್ವಾಮಿ ಅವರನ್ನು ರಾಂಚಿಯ ಅವರ ನಿವಾಸದಲ್ಲಿ ಅಕ್ಟೋಬರ್ 8ರಂದು ಬಂಧಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದ್ದು, ತಲೋಜಾ ಜೈಲಿಗೆ ವರ್ಗಾಯಿಸಲಾಗಿದೆ. ವೈದ್ಯಕೀಯ ಕಾರಣಗಳು ಹಾಗೂ ಪ್ರಕರಣದ ಅರ್ಹತೆಯ ಆಧಾರದ ಮೇಲೆ ಸ್ವಾಮಿ ಅವರು ಜಾಮೀನು ಕೋರಿದ್ದರು.

80 ವರ್ಷದವರಾದ ಸ್ವಾಮಿ ಅವರು ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದು, ಜೈಲಿನ ಆಸ್ಪತ್ರೆಯಿಂದ ಹೇಗೆ ಅವರನ್ನು ಸ್ಥಳಾಂತರಿಸಬೇಕಾಯಿತು ಎಂಬುದನ್ನು ಸ್ವಾಮಿ ಅವರ ವಕೀಲ ಶರೀಫ್‌ ಶೇಖ್‌ ನ್ಯಾಯಾಲಯಕ್ಕೆ ವಿವರಿಸಿದರು. ಜಾಮೀನು ಷರತ್ತುಗಳನ್ನು ಉಲ್ಲಂಘಿಸುವುದಿಲ್ಲ, ತಾನು ದೇಶ ತೊರೆಯುವ ಸ್ಥಿತಿಯಲ್ಲಿ ಇಲ್ಲ ಎಂದು ಸ್ವಾಮಿ ಹೇಳಿದ್ದಾರೆ. ಮೂಲ ಎಫ್‌ಐಆರ್‌ ನಲ್ಲಿ ತನ್ನ ಹೆಸರು ಇರಲಿಲ್ಲ. ಬಳಿಕ 2018 ರ ರಿಮ್ಯಾಂಡ್ ಮನವಿಯಲ್ಲಿ ಶಂಕಿತ ಆರೋಪಿ ಎಂದು ಪೊಲೀಸರು ತನ್ನ ಹೆಸರು ಸೇರಿಸಿದ್ದಾರೆ ಎಂದು ಸ್ವಾಮಿ ಅವರ ವಕೀಲರು ವಾದಿಸಿದರು.

ಮಾವೋವಾದಿಗಳು ಎಂಬ ಹಣೆಪಟ್ಟಿ ಕಟ್ಟಿಸಿಕೊಂಡಿರುವ ಆದಿವಾಸಿಗಳು ಮತ್ತು ದಲಿತರಿಗೆ ಕಾನೂನು ನೆರವು ಕಲ್ಪಿಸುವ ಸ್ವಾಮಿ ಅವರ 'ಹಿಂಸೆಗೆ ಒಳಪಟ್ಟ ಕೈದಿಗಳ ಐಕ್ಯತಾ ಸಮಿತಿ (ಪಿಪಿಎಸ್‌ಸಿ)' ಜೊತೆ ಸಂಪರ್ಕ ಹೊಂದಿದ್ದು ನೆರವು ಕೋರಿರುವ ಜನರ ಹೇಳಿಕೆಗಳನ್ನು ಎನ್‌ಐಎ ಆಧರಿಸಿದೆ ಎಂದು ಸ್ವಾಮಿ ವಕೀಲರು ಹೇಳಿದ್ದಾರೆ. ಸ್ವಾಮಿ ಅವರ ನಿವಾಸದಲ್ಲಿ ಎರಡು ಬಾರಿ ಶೋಧ ನಡೆಸಿದಾಗಲೂ ಏನೂ ಪತ್ತೆಯಾಗಿಲ್ಲ. “ಸ್ವಾಮಿ ಅವರು ಆರೋಪಿ ಅಲ್ಲದೇ ಇರುವುದರಿಂದ ಅವರನ್ನು ಬಂಧಿಸುವ ಯಾವುದೇ ಚಿಂತನೆ ಇರಲಿಲ್ಲ” ಎಂಬ ಪುಣೆ ಪೊಲೀಸರ ಹೇಳಿಕೆಯನ್ನು ಬಾಂಬೆ ಹೈಕೋರ್ಟ್‌ ಗೆ ಸಲ್ಲಿಸಿದ್ದ ಮನವಿಯಲ್ಲಿ ಸ್ವಾಮಿ ಉಲ್ಲೇಖಿಸಿದ್ದರು.

ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) (ಮಾವೋವಾದಿ) ನಡೆಸಿರುವ ಚಟುವಟಿಕೆಗಳಲ್ಲಿ ಸ್ಟ್ಯಾನ್ ಸ್ವಾಮಿ ಭಾಗಿಯಾಗಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ನೀಡಬಾರದು ಎಂದು ಎನ್‌ಐಎ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರಕಾಶ್‌ ಶೆಟ್ಟಿ ವಾದಿಸಿದರು. ವಿಸ್ತಾಪನಾ ವಿರೋಧಿ ಜನ ವಿಕಾಸ್‌ ಆಂದೋಲನ ಮತ್ತು ನಾಗರಿಕ ಹಕ್ಕುಗಳ ಜನರ ಒಕ್ಕೂಟ ಹಾಗೂ ಸಿಪಿಐ (ಎಂ) ಸಂಘಟನೆಗಳನ್ನು ಸ್ವಾಮಿ ಬೆಂಬಲಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಸ್ವಾಮಿ ಅವರ ಲ್ಯಾಪ್‌ ಟಾಪ್‌ ನಿಂದ ಹಲವು ಪ್ರಚೋದನಕಾರಿ ಸಾಕ್ಷ್ಯಗಳು ಪತ್ತೆಯಾಗಿವೆ ಎಂದೂ ಅವರು ವಾದಿಸಿದರು.

Also Read
[ಭೀಮಾ ಕೋರೆಗಾಂವ್] ಫೊರೆನ್ಸಿಕ್ ವರದಿ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸಲು ಕೋರಿದ ರೋನಾ ವಿಲ್ಸನ್

ಸಿಪಿಐ (ಎಂ) ಜೊತೆ ನೇರ ಸಂಪರ್ಕ ಹೊಂದಿರುವುದಕ್ಕೆ ಸಂಬಂಧಿಸಿದಂತೆ ತಮ್ಮ ಇಲೆಕ್ಟ್ರಾನಿಕ್ ಸಾಧನಗಳಿಂದ ಸಾಕ್ಷಿಯನ್ನು ನಾಶಪಡಿಸಲು ಸ್ವಾಮಿ ಪ್ರಯತ್ನಿಸಿದ್ದಾರೆ. ಸ್ವಾಮಿ ಅವರು ಬಹುದೊಡ್ಡ ಪಿತೂರಿಯ ಭಾಗವಾಗಿದ್ದು, ನೇರವಾಗಿ ನಕ್ಸಲೀಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು ಎಂಬುದನ್ನು ಸಾಬೀತುಪಡಿಸಲು ಎನ್‌ಐಎ ಬಳಿ ಅಗತ್ಯ ಸಾಕ್ಷ್ಯಗಳಿವೆ ಎಂದು ವಾದಿಸಲಾಗಿದೆ.

ಕೋವಿಡ್‌ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ವೈದ್ಯಕೀಯ ತುರ್ತು ಉಲ್ಲೇಖಿಸಿ ಸಲ್ಲಿಸಿದ್ದ ಜಾಮೀನು ಮನವಿಯನ್ನು ಕಳೆದ ಅಕ್ಟೋಬರ್‌ ನಲ್ಲಿ ವಿಶೇಷ ನ್ಯಾಯಾಲಯ ವಜಾಗೊಳಿಸಿದ ಬಳಿಕ ಸ್ವಾಮಿ ಅವರು ಹೊಸ ಮನವಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com