ಕೆಲ ದೃಶ್ಯ ತೆಗೆದು 'ಎಮರ್ಜೆನ್ಸಿʼ ಬಿಡುಗಡೆ ಮಾಡಬಹುದು: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಸಿಬಿಎಫ್‌ಸಿ

ಸೆಪ್ಟೆಂಬರ್ 25 ರೊಳಗೆ ನಿರ್ಧಾರ ತಿಳಿಸುವಂತೆ 'ಪರಿಶೀಲನಾ ಸಮಿತಿ'ಗೆ ಈ ಹಿಂದೆ ನ್ಯಾಯಾಲಯ ಸೂಚಿಸಿತ್ತು.
emergency movie and Bombay High Court
emergency movie and Bombay High Court
Published on

ಚಲನಚಿತ್ರ ಪರಿಶೀಲನಾ ಸಮಿತಿ ಸೂಚಿಸಿದ ದೃಶ್ಯಗಳನ್ನು ತೆಗೆದು ನಟಿ ಮತ್ತು ಸಂಸದೆ ಕಂಗನಾ ರನೌತ್‌ ಅವರ ಅಭಿನಯದ ಚಿತ್ರ  'ಎಮೆರ್ಜೆನ್ಸಿ' ಬಿಡುಗಡೆ ಮಾಡಬಹುದು ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಗುರುವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಸಿಬಿಎಫ್‌ಸಿಯ ಪರವಾಗಿ ವಕೀಲ ಅಭಿನವ್ ಚಂದ್ರಚೂಡ್ ಅವರು ನ್ಯಾಯಮೂರ್ತಿಗಳಾದ ಬಿ ಪಿ ಕೊಲಬಾವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರ ಪೀಠದೆದುರು ಈ ವಿವರಣೆ ನೀಡಿದರು.

Also Read
ಸಿಖ್ಖರ ಮತ ಕಳೆದುಕೊಳ್ಳದಿರಲೆಂದು 'ಎಮರ್ಜೆನ್ಸಿʼ ಚಿತ್ರ ಬಿಡುಗಡೆಗೆ ಬಿಜೆಪಿಯಿಂದ ವಿಳಂಬ: ಜೀ಼ ಆರೋಪ

ಬಳಿಕ ಚಿತ್ರದ ಸಹ ನಿರ್ಮಾಣ ಸಂಸ್ಥೆಯಾದ ಜೀ಼ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್ ಪರ ವಾದ ಮಂಡಿಸಿದ ಹಿರಿಯ ವಕೀಲ ಶರಣ್ ಜಗ್ತಿಯಾನಿ ಅವರು ದೃಶ್ಯ ತೆಗೆಯುವ ಕುರಿತು ಸಂಸ್ಥೆಯಿಂದ ವಿವರಣೆ ಪಡೆಯುವುದಾಗಿ ತಿಳಿಸಿದರು. ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಬರುವ ವಾರಕ್ಕೆ ಮುಂದೂಡಿತು.

ಚಿತ್ರಕ್ಕೆ ಸೆನ್ಸಾರ್‌ ಪ್ರಮಾಣಪತ್ರ ನೀಡಲು ಸಿಬಿಎಫ್‌ಸಿಗೆ ಸೂಚಿಸುವಂತೆ ಕೋರಿ ಜೀ಼ ನ್ಯಾಯಾಲಯದ ಮೊರೆ ಹೋಗಿತ್ತು.  ಸಿಖ್ಖರನ್ನು ಚಿತ್ರದಲ್ಲಿ ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬ ವಿವಾದದ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಲಾಗಿತ್ತು.   

Also Read
ಕಂಗನಾ ರನೌತ್‌ ಆಯ್ಕೆ ಪ್ರಶ್ನಿಸಿದ್ದ ಅರ್ಜಿ: ಸಂಸದೆಯ ಪ್ರತಿಕ್ರಿಯೆ ಕೇಳಿದ ಹಿಮಾಚಲ ಪ್ರದೇಶ ಹೈಕೋರ್ಟ್

ಬಾಲಿವುಡ್‌ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ಅಭಿನಯದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ವಿಧಿಸಲಾಗಿದ್ದ 1975ರ ತುರ್ತು ಪರಿಸ್ಥಿತಿಯನ್ನು ಹಿನ್ನೆಲೆಯಾಗಿರಿಸಿಕೊಂಡು ʼಎಮೆರ್ಜೆನ್ಸಿʼ ಚಿತ್ರವನ್ನು ನಿರ್ಮಿಸಲಾಗಿದೆ.

ಜಬಲ್‌ಪುರ್‌ ಸಿಖ್‌ ಸಂಘಟನೆಯು ಚಿತ್ರದ ಬಗ್ಗೆ ಎತ್ತಿರುವ ಆಕ್ಷೇಪಗಳನ್ನು ಪರಿಹರಿಸುವಂತೆ ತಾನು ಸೂಚಿಸಿದ್ದರೂ ಈ ಬಗ್ಗೆ ಗಮನಹರಿಸಲು ವಿಫಲವಾದ ಸಿಬಿಎಫ್‌ಸಿಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಸಿಬಿಎಫ್‌ಸಿ ವಿಳಂಬ ಧೋರಣೆ ಮುಂದುವರೆಸುತ್ತಿರುವ ಕುರಿತಂತೆ ಕಳವಳ ವ್ಯಕ್ತಪಡಿಸಿದ್ದ ನ್ಯಾಯಾಲಯ ಸೆಪ್ಟೆಂಬರ್ 25 ರೊಳಗೆ ನಿರ್ಧಾರ ತಿಳಿಸುವಂತೆ 'ಪರಿಶೀಲನಾ ಸಮಿತಿ'ಗೆ ಸೂಚಿಸಿತ್ತು.

Kannada Bar & Bench
kannada.barandbench.com