ಕಾನೂನು ಶಾಲೆಗಳಲ್ಲಿ ಕಲಿಯುತ್ತಿರುವ ಮಧ್ಯಂತರ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಅಂತಿಮ ಪರೀಕ್ಷೆಗಳನ್ನು ನಡೆಸಬೇಕು ಎಂಬ ಉನ್ನತಮಟ್ಟದ ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ಭಾರತೀಯ ವಕೀಲರ ಪರಿಷತ್ (ಬಿಸಿಐ) ಒಪ್ಪಿಕೊಂಡಿದೆ.
ಪರೀಕ್ಷಾ ವಿಧಾನಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವುದನ್ನು ವಿಶ್ವವಿದ್ಯಾಲಯಗಳ ವಿವೇಚನೆಗೆ ಬಿಡಲಾಗಿದೆ. ಆನ್‌ಲೈನ್, ಆಫ್‌ಲೈನ್, ಎರಡೂ ಒಳಗೊಂಡ, ಆನ್‌ಲೈನ್‌ನಲ್ಲಿ ನಿರ್ದಿಷ್ಟ ಕಾಲಮಿತಿಯಲ್ಲಿ ನಡೆಸಲಾಗುವ ಪರೀಕ್ಷೆಗಳು, ಮೌಲ್ಯಮಾಪನ ಆಧಾರಿತ ಅಥವಾ ಸಂಶೋಧನಾ ವರದಿಗಳನ್ನು ಆಧರಿಸಿದ ಮೌಲ್ಯಮಾಪನಕ್ಕೆ ಸಮಿತಿ ಅನುಮತಿಸಿದೆ.
ಸಮಿತಿಯ ವರದಿಯಲ್ಲಿ ಈ ಹಿಂದೆ, “27.05.2020, 06.09.2020, 05.10.2020 ಮತ್ತು 01.11.2020ರಂದು ಬಿಸಿಐ ಕೈಗೊಂಡಿರುವ ಗೊತ್ತುವಳಿಗಳನ್ನು ಸಮಿತಿ ಗಣನೆಗೆ ತೆಗೆದುಕೊಂಡಿದೆ. ಎಲ್ಲಾ ಸೆಮಿಸ್ಟರ್‌ಗಳಿಗೆ ನಿಗದಿತ ಪರೀಕ್ಷೆಗಳು ಮತ್ತು ಇದರಲ್ಲಿ ಪರೀಕ್ಷೆ / ಮೌಲ್ಯಮಾಪನ ನಡೆಸುವ ರೀತಿಯ ಬಗ್ಗೆ ಮಾರ್ಗಸೂಚಿಗಳನ್ನು ಆ ಗೊತ್ತುವಳಿಗಳಲ್ಲಿ ನೀಡಲಾಗಿತ್ತು. ಮುಂದಿನ ತರಗತಿಗೆ ಬಡ್ತಿಗಾಗಿ ಮತ್ತು ಕಾನೂನು ಪದವಿ ನೀಡುವುದಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಮೌಲ್ಯಮಾಪನ / ಪರೀಕ್ಷೆಯ ವಿಧಾನವನ್ನು ನಿರ್ಧರಿಸಲು ವಿಶ್ವವಿದ್ಯಾಲಯ / ಕಾನೂನು ಶಿಕ್ಷಣ ಕೇಂದ್ರಗಳಿಗೆ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಗಿತ್ತು” ಎಂದು ಉಲ್ಲೇಖಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಕಾನೂನು ವಿದ್ಯಾರ್ಥಿಗಳು ಅಹವಾಲು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಇದಕ್ಕೂ ಮುನ್ನ ಬಿಸಿಐಯು ಮಧ್ಯಂತರ ಸೆಮಿಸ್ಟರ್ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಏಕಪಕ್ಷೀಯವಾಗಿ ಪರೀಕ್ಷೆ ನಡೆಸುವ ಸಂಬಂಧ ಮಾರ್ಗಸೂಚಿ ಹೊರಡಿಸುವುದಿಲ್ಲ ಎಂದು ನಿರ್ಧರಿಸಿತ್ತು.
ಅಲಾಹಾಬಾದ್ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥೂರ್ ಸಮಿತಿಯ ನೇತೃತ್ವ ವಹಿಸಿದ್ದರು. ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀಕೃಷ್ಣ ದೇವ ರಾವ್, ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಕಾನೂನು ಸಂಸ್ಥೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿ ವಿಜಯಕುಮಾರ್, ನಾಗಪುರ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜೇಂದ್ರ ಕುಮಾರ್, ಬೆಂಗಳೂರಿನಲ್ಲಿರುವ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ, ಸೋನಿಪತ್‌ನಲ್ಲಿರುವ ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ ರಾಜಕುಮಾರ್ ಮತ್ತಿತರರು ಸಮಿತಿಯಲ್ಲಿದ್ದರು.
ಪರೀಕ್ಷೆಗಳು ಮತ್ತು ಬಡ್ತಿಗೆ ಸಬಂಧಿಸಿದಂತೆ ಸಾವಿರಾರು ವಿದ್ಯಾರ್ಥಿಗಳು ಬಿಸಿಐಗೆ ಪತ್ರ ಬರೆದಿದ್ದರು. ಅಲ್ಲದೇ ಹಲವು ಸಂಸ್ಥೆಗಳ ಮುಖ್ಯಸ್ಥರು ಬಿಸಿಐ ಮಾರ್ಗದರ್ಶನವನ್ನು ಕೋರಿದ್ದರು. ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಪರ್ಯಾಯ ವಿಧಾನದ ಮೂಲಕ ಮೌಲ್ಯಮಾಪನ ನಡೆಸುವಂತೆ ಬಹುತೇಕ ವಿದ್ಯಾರ್ಥಿಗಳು ಕೋರಿದ್ದರು.
ಹಿಂದಿನ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ದೆಹಲಿ ವಿಶ್ವವಿದ್ಯಾಲಯದ ಕಾನೂನು ಬೋಧಕರು ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದ ಬೆನ್ನಿಗೇ ವರದಿ ಬಹಿರಂಗವಾಗಿದೆ. ಅಸೈನ್‌ಮೆಂಟ್ ಆಧಾರಿತ ಮೌಲ್ಯಮಾಪನ ಜಾರಿಗೊಳಿಸುವಂತೆ ಕೋರಿ ವಿದ್ಯಾರ್ಥಿಗಳು ತಜ್ಞರ ಸಮಿತಿಗೆ ಮನವಿ ಮಾಡಿದ್ದರು.