ನ್ಯಾಯಾಲಯಗಳಿಂದ ಜೈಲಿಗೆ ಜಾಮೀನು ಆದೇಶಗಳನ್ನು ತಡೆರಹಿತವಾಗಿ ವರ್ಗಾಯಿಸಲು ಅನುಕೂಲವಾಗಿಸುವ ನಿಟ್ಟಿನಲ್ಲಿ ಪ್ರತಿಯೊಂದು ಜೈಲಿನಲ್ಲಿ ಸಾಕಷ್ಟು ವೇಗದ ಇಂಟರ್ನೆಟ್ ಸೌಲಭ್ಯ ಕಲ್ಪಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ.
ಸುಪ್ರೀಂ ಕೋರ್ಟ್ ಜಾಮೀನು ಆದೇಶಗಳನ್ನು ಜಾರಿಗೊಳಿಸಿದರೂ ಸಂವಹನ ವಿಳಂಬದಿಂದಾಗಿ ಬಿಡುಗಡೆಯಾಗದ ಕೈದಿಗಳ ದುಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಸೂರ್ಯಕಾಂತ್ ಅವರಿದ್ದ ತ್ರಿಸದಸ್ಯ ಪೀಠವು ಮೇಲಿನ ಆದೇಶ ಮಾಡಿದೆ.
“ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿಗಳು ಪ್ರತಿ ಜೈಲಿನಲ್ಲಿ ಅತ್ಯಂತ ವೇಗದ ಇಂಟರ್‌ನೆಟ್ ಸೌಲಭ್ಯದ ವ್ಯವಸ್ಥೆ ಮಾಡಬೇಕು. ಎಲ್ಲಿ ವೇಗದ ಇಂಟರ್ನೆಟ್ ಸೌಲಭ್ಯ ಇಲ್ಲವೋ ಅಲ್ಲಿ ತುರ್ತಾಗಿ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಮಹಾನಿರ್ದೇಶಕರು, ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಗೃಹ ಕಾರ್ಯದರ್ಶಿ, ಬಂಧೀಖಾನೆ ಮಹಾನಿರ್ದೇಶಕರುಗಳು ಸುಲಲಿತ ಮತ್ತು ಯಶಸ್ವಿಯಾಗಿ ಫಾಸ್ಟರ್ (ವೇಗ ಮತ್ತು ಸುರಕ್ಷಿತವಾಗಿ ಎಲೆಕ್ಟ್ರಾನಿಕ್ ದಾಖಲೆಗಳ ವರ್ಗಾವಣೆ) ವ್ಯವಸ್ಥೆ ಜಾರಿಯಾಗಲು ಕ್ರಮವಹಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ.
ಜಾಮೀನು ದೊರೆತರೂ ಕೈದಿಯನ್ನು ಬಿಡುಗಡೆ ಮಾಡದ ಕುರಿತಾದ ಮಾಧ್ಯಮ ವರದಿಯನ್ನು ಆಧರಿಸಿ ಜುಲೈ 16ರಂದು ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸದಂತೆ ನೋಡಿಕೊಳ್ಳಲು ವೇಗದಿಂದ ಕೂಡಿರುವ ವಿಧಾನವನ್ನು ಅಳವಡಿಸಿಕೊಳ್ಳುವ ಬಗ್ಗೆ ನ್ಯಾಯಾಲಯ ಯೋಚಿಸಿತ್ತು. ಫಾಸ್ಟರ್ ವ್ಯವಸ್ಥೆಯನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಒಳಗೊಂಡ ಪ್ರಸ್ತಾಪ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿತ್ತು.
ಅಲ್ಲದೇ, ಈ ಸಂಬಂಧ ಅಮಿಕಸ್ ಕ್ಯೂರಿ ದುಷ್ಯಂತ್ ದವೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ ಮತ್ತು ಇತರೆ ಸರ್ಕಾರಿ ಪ್ರಾಧಿಕಾರಗಳ ಸಲಹೆ ಪಡೆಯುವಂತೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನವನ್ನು ನ್ಯಾಯಾಲಯ ನೀಡಿತ್ತು. ಪೀಠದ ಆದೇಶದಂತೆ ಫಾಸ್ಟರ್ ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ಒಳಗೊಂಡ ಪ್ರಸ್ತಾಪವನ್ನು ಪ್ರಧಾನ ಕಾರ್ಯದರ್ಶಿ ಸಂಜೀವ್ ಕಲಗೋವಂಕರ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯದ ಇ-ವಿಧಾನದ ಮೂಲಕ ರುಜುವಾತುಪಡಿಸಿದ ಆದೇಶಗಳನ್ನು ಸಂಬಂಧಪಟ್ಟವರ ಸಹಿಗಳನ್ನು ಒಳಗೊಂಡು ನ್ಯಾಯದಾನ ವ್ಯವಸ್ಥೆಯಲ್ಲಿ ಕರ್ತವ್ಯ ನಿರತರಿಗೆ ವರ್ಗಾವಣೆ ಮಾಡಬೇಕು ಎಂದು ಫಾಸ್ಟರ್ ವ್ಯವಸ್ಥೆಯ ಕುರಿತಾದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಫಾಸ್ಟರ್ ವ್ಯವಸ್ಥೆಯು ಕರ್ತವ್ಯ ನಿರತರ ನಡುವೆ ಸುರಕ್ಷಿತ ಸಂವಹನ ವಾಹಕದ ಬಗ್ಗೆ ಪ್ರಸ್ತಾಪಿಸುತ್ತದೆ. ಎರಡು ಅಂಶಗಳ ದೃಢೀಕರಣವು ಇಮೇಲ್ ಡೊಮೇನ್‌ನಲ್ಲಿ ಅಧಿಕೃತ ಬಳಕೆದಾರರ ಪ್ರವೇಶವನ್ನು ಮತ್ತಷ್ಟು ಖಚಿತಪಡಿಸುತ್ತದೆ. ಸ್ವಯಂಚಾಲಿತ ವಿತರಣಾ ಅಧಿಸೂಚನೆಯು ಇಮೇಲ್ ಅನ್ನು ಸ್ವೀಕರಿಸುವವರಿಗೆ ಸರಿಯಾಗಿ ತಲುಪಿಸಲಾಗಿದೆಯೆ ಎಂದು ಖಾತರಿಪಡಿಸುತ್ತದೆ. ದೃಢೀಕೃತ ವ್ಯವಸ್ಥೆಯನ್ನು ಸೃಷ್ಟಿಸುವ ದೃಷ್ಟಿಯಿಂದ ವಿಶಿಷ್ಟವಾದ ಕ್ಯುಆರ್ ಕೋಡ್ ಅನ್ನು ನ್ಯಾಯಿಕ ದಾಖಲೆಯ ಪ್ರತಿ ಪುಟದಲ್ಲಿ ಬರುವಂತೆ ಮಾಡಲು ಪ್ರಸ್ತಾಪಿಸಲಾಗಿದೆ. ಹೀಗೆ ಮಾಡುವುದರಿಂದ ಬಳಕೆದಾರರನ್ನು ಪರಿಶೀಲನೆಗಾಗಿ ಸಂಬಂಧಪಟ್ಟ ಆದೇಶಗಳನ್ನು ಅಪ್‌ಲೋಡ್ ಮಾಡಲಾಗುವ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ಗೆ ಕರೆದೊಯ್ಯಲಿದೆ.
“ಫಾಸ್ಟರ್ ವ್ಯವಸ್ಥೆಯ ಮೂಲಕ ಇ-ವಿಧಾನದ ಮೂಲಕ ಖಾತರಿಪಡಿಸಿದ ಮಧ್ಯಂತರ ಆದೇಶ, ತಡೆಯಾಜ್ಞೆ, ಜಾಮೀನು ಆದೇಶ ಮತ್ತು ಕಲಾಪದ ದಾಖಲೆಗಳನ್ನು ಪಾಲಿಸುವ ಸಂಬಂಧ ಕರ್ತವ್ಯ ನಿರತರಿಗೆ ವರ್ಗಾಯಿಸಲಾಗುತ್ತದೆ. ಸುರಕ್ಷಿತವಾದ ಎಲೆಕ್ಟ್ರಾನಿಕ್ ಸಂಹವನ ವಾಹಕದ ಮೂಲಕ ಇದನ್ನು ಜಾರಿಗೊಳಿಸಲಾಗುವುದು” ಎಂದು ಪೀಠ ಆದೇಶದಲ್ಲಿ ಹೇಳಿದೆ.
ಜೈಲಿನಲ್ಲಿ ಇಂಟರ್‌ನೆಟ್ ಸೌಲಭ್ಯ ಇರುವುದರ ಕುರಿತು ಹತ್ತೊಂಭತ್ತು ರಾಜ್ಯಗಳು ಅನುಪಾಲನಾ ವರದಿಯನ್ನು ಸಲ್ಲಿಸಿವೆ. “ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಅಸ್ಸಾಂ ಮತ್ತು ವಿಜೊರಾಂ ರಾಜ್ಯಗಳು ಇಂಟರ್‌ನೆಟ್ ಸೌಲಭ್ಯ ಇಲ್ಲದಿರುವುದು/ ಭಾಗಶಃ ಸೌಲಭ್ಯ ಹೊಂದಿರುವುದಾಗಿ ತಿಳಿಸಿವೆ. ಉಳಿದ ರಾಜ್ಯಗಳು ಈ ಸಂಬಂಧ ಯಾವುದೇ ಅಫಿಡವಿಟ್ ಸಲ್ಲಿಸಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಎಲ್ಲಾ ಜೈಲುಗಳಲ್ಲಿ ಇಂಟರ್ನೆಟ್ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಇದಕ್ಕೆ ಅಗತ್ಯವಾದ ನಿಯಮಗಳು ಮತ್ತು ಕಾರ್ಯವಿಧಾನದಲ್ಲಿನ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್‌ನ ಆಡಳಿತಾತ್ಮಕ ವಿಭಾಗ ಕೈಗೆತ್ತುಕೊಳ್ಳಲಿದೆ ಎಂದು ಪೀಠ ಹೇಳಿದೆ. ಆದ್ದರಿಂದ, ಎಲ್ಲಾ ಕರ್ತವ್ಯ ನಿರತರು ತಮ್ಮ ನಿಯಮಗಳು/ ಕಾರ್ಯವಿಧಾನ/ ಅಭ್ಯಾಸ/ ನಿರ್ದೇಶನಗಳನ್ನು ತಕ್ಷಣ ತಿದ್ದುಪಡಿ ಮಾಡುವಂತೆ, ಸುಪ್ರೀಂ ಕೋರ್ಟ್ ಆದೇಶದ ಇ-ದೃಢೀಕೃತ ಪ್ರತಿಯನ್ನು ಫಾಸ್ಟರ್ ಸಿಸ್ಟಮ್ ಮೂಲಕ ಅವರಿಗೆ ತಲುಪಿಸುವಂತೆ ನ್ಯಾಯಾಲಯ ಆದೇಶ ಮಾಡಿದೆ.