ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ಡಾ. ಅಂಬೇಡ್ಕರ್‌ ಪುತ್ಥಳಿ ನಿರ್ಮಾಣವು ಮಹಾನ್‌ ವ್ಯಕ್ತಿಗೆ ಅಗೌರವ ಸೂಚಕ: ಹೈಕೋರ್ಟ್‌

ಅಗತ್ಯ ಅನುಮತಿ ಪಡೆಯದೇ ಬಸ್‌ ನಿಲ್ದಾಣಕ್ಕೆ ಸೇರಿಕೊಂಡಂತಿರುವ ಸರ್ಕಾರಿ ಸ್ಥಳದಲ್ಲಿ ಯುವ ಸಂಘಟನೆಯೊಂದು 2019ರ ನವೆಂಬರ್‌ನಲ್ಲಿ ಡಾ. ಅಂಬೇಡ್ಕರ್‌ ಅವರ ಪುತ್ಥಳಿ ಅನಾವರಣಗೊಳಿಸಿತ್ತು.
Ambedkar and Karnataka HC
Ambedkar and Karnataka HC

ದಾವಣಗೆರೆ ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುವ ಡಾ. ಅಂಬೇಡ್ಕರ್‌ ಪುತ್ಥಳಿಯನ್ನು ನಾಲ್ಕು ತಿಂಗಳೊಳಗೆ ಪರ್ಯಾಯ ಜಾಗಕ್ಕೆ ಸ್ಥಳಾಂತರಿಸುವ ಸಂಬಂಧ ಯುವ ಸಂಘಟನೆಯೊಂದು ಸಲ್ಲಿಸಿರುವ ಮುಚ್ಚಳಿಕೆಯನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಒಪ್ಪಿಕೊಂಡಿದೆ.

ಮಹಾನ್‌ ಪುರುಷನ ಹೆಸರಿನಲ್ಲಿ ಪ್ರತಿವಾದಿಗಳು ದೊಡ್ಡ ಕಾನೂನುಬಾಹಿರ ಕೃತ್ಯ ಎಸಗಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ಅವರಿದ್ದ ವಿಭಾಗೀಯ ಪೀಠ ಹೇಳಿದ್ದು, ಡಾ. ಬಿ ಆರ್‌ ಅಂಬೇಡ್ಕರ್‌ ಯುವ ಸಂಘಟನೆಯ ಅಧ್ಯಕ್ಷ ರೇವಣ ಸಿದ್ದಪ್ಪ ಸಲ್ಲಿಸಿರುವ ಮುಚ್ಚಳಿಕೆಗೆ ಸಹಮತಿಸಿದೆ.

“ನ್ಯಾಯ ಪರಿಪಾಲನೆಯನ್ನು ಅದಮ್ಯವಾಗಿ ನಂಬಿದ್ದ, ಭಾರತ ಸಂವಿಧಾನದ ಕರ್ತೃ ಮಾತ್ರವಲ್ಲದೇ ಮಹಾನ್‌ ಮಾನವತಾವಾದಿಯಾಗಿದ್ದ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಹೆಸರಿನಲ್ಲಿ ಪ್ರತಿವಾದಿಗಳು ಕಾನೂನುಬಾಹಿರ ಕೃತ್ಯ ಎಸಗಿದ್ದಾರೆ” ಎಂದು ಪೀಠ ಹೇಳಿದೆ.

ಮಹಾನ್‌ ವ್ಯಕ್ತಿಯ ಅಪೂರ್ಣವಾದ ಪುತ್ಥಳಿ ನಿರ್ಮಿಸುವುದು ಅವರನ್ನು ಅಗೌರವಿಸುವುದಕ್ಕೆ ಸಮನಾಗಿದೆ. “ಅಂಬೇಡ್ಕರ್‌ ಹೆಸರಿನಲ್ಲಿ ಕಾನೂನುಬಾಹಿರ ಕೆಲಸ ಮಾಡುವ ಮೂಲಕ ಮಹಾನ್‌ ವ್ಯಕ್ತಿಗೆ ಯುವ ಸಂಘಟನೆ ಅಗೌರವ ತೋರಿದೆ. ಪ್ರತಿವಾದಿಗಳು ಸಾರ್ವಜನಿಕ ಸ್ಥಳದಲ್ಲಿ ಮಹಾನ್‌ ವ್ಯಕ್ತಿಯ ಅಪೂರ್ಣ ಪುತ್ಥಳಿ ನಿರ್ಮಿಸಿದ್ದಾರೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

1949ರ ನವೆಂಬರ್‌ 25ರಂದು ಸಂವಿಧಾನ ರಚನಾ ಸಭೆಯಲ್ಲಿ ಡಾ. ಅಂಬೇಡ್ಕರ್‌ ಅವರು ಮಾಡಿದ ಐತಿಹಾಸಿಕ ಭಾಷಣವನ್ನೂ ಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಸರ್ಕಾರಿ ಅಧಿಕಾರಿಗಳು ಮತ್ತು ಯುವ ಸಂಘಟನೆ ಪದಾಧಿಕಾರಿಗಳ ಸಹಕಾರದಿಂದ ಗ್ರಾಮದಲ್ಲಿ ಶಾಂತಿ-ಸುವ್ಯವಸ್ಥೆ ನೆಲೆಸುವಂತೆ ಮಾಡಬೇಕು. ಯಾವುದೇ ತೆರೆನಾದ ದುಷ್ಕೃತ್ಯಕ್ಕೆ ಎಡೆಮಾಡಿಕೊಡಬಾರದು ಎಂದು ಪೀಠ ಹೇಳಿದೆ.

ಅಗತ್ಯ ಅನುಮತಿ ಪಡೆಯದೇ ಬಸ್‌ ನಿಲ್ದಾಣಕ್ಕೆ ಸೇರಿಕೊಂಡಂತಿರುವ ಸರ್ಕಾರಿ ಸ್ಥಳದಲ್ಲಿ ಯುವ ಸಂಘಟನೆಯೊಂದು 2019ರ ನವೆಂಬರ್‌ನಲ್ಲಿ ಡಾ. ಅಂಬೇಡ್ಕರ್‌ ಅವರ ಪುತ್ಥಳಿ ಅನಾವರಣಗೊಳಿಸಿತ್ತು. ಇದಕ್ಕೆ ಗ್ರಾಮಸ್ಥರು ಆಕ್ಷೇಪಿಸಿದ್ದು, ದೂರು ದಾಖಲಿಸಲಾಗಿತ್ತು. ಇದನ್ನು ಆಧರಿಸಿ 2020ರ ಮಾರ್ಚ್‌ 5ರಂದು ಗ್ರಾಮ ಪಂಚಾಯಿತಿಯು ಗೊತ್ತುವಳಿ ಅಂಗೀಕರಿಸಿತ್ತು.

ಪುತ್ಥಳಿಯ ವಿಚಾರವನ್ನು ಗೊತ್ತುವಳಿಯಲ್ಲಿ ಚರ್ಚಿಸಿ, ಅದನ್ನು ಸ್ಥಳಾಂತರಿಸುವ ಸಂಬಂಧ ದಾವಣಗೆರೆಯ ಹಿರೇಮೇಗಲಗೆರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗೆ (ಪಿಡಿಒ) ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿತ್ತು. 2020ರ ಫೆಬ್ರುವರಿ 29ರಂದು ಪುತ್ಥಳಿ ತೆರವು ಮಾಡಲು ಪಿಡಿಒ ಆದೇಶಿಸಿದ್ದರು.

ಪಿಡಿಒ ಆದೇಶವನ್ನು ಆಧರಿಸಿ ಅರ್ಜಿದಾರ ನೀಲಪ್ಪ ಮತ್ತು ಇತರರು ನ್ಯಾಯಾಲಯದ ಮೆಟ್ಟಿಲೇರಿದ್ದರು. 2020ರ ಆಗಸ್ಟ್‌ 10ರಂದು ಪುತ್ಥಳಿ ಸ್ಥಾಪನೆಯ ಕ್ರಮದ ಕಾನೂನು ಮತ್ತು ಸಿಂಧುತ್ವ ಪರಿಶೀಲಿಸುವ ಸಂಬಂಧ ಸಹಾಯಕ ಆಯುಕ್ತರ ಶ್ರೇಣಿಯ ಅಧಿಕಾರಿಯನ್ನು ನೇಮಿಸುವಂತೆ ಜಿಲ್ಲಾಧಿಕಾರಿಗೆ ಪೀಠ ಆದೇಶಿಸಿತ್ತು. ಇದರ ಅನ್ವಯ ಸಹಾಯ ಆಯುಕ್ತರು ವರದಿ ಸಲ್ಲಿಸಿದ್ದರು.

Also Read
ಅಂಬೇಡ್ಕರ್‌ ತಾವು ಪಡೆದ ಶಿಕ್ಷಣವನ್ನು ಕೇವಲ ತಮ್ಮ ಏಳಿಗೆಗೆ ಮಾತ್ರವೇ ಬಳಸಲಿಲ್ಲ: ನ್ಯಾ. ಡಿ ವೈ ಚಂದ್ರಚೂಡ್

ಖಾಸಗಿ ವ್ಯಕ್ತಿಗಳು ಸ್ಥಳ ನೀಡಲು ಮುಂದಾದರೆ ಅಲ್ಲಿ ಅಂಬೇಡ್ಕರ್‌ ಪುತ್ಥಳಿ ನಿರ್ಮಿಸಲು ಒಪ್ಪಿಗೆ ಇದೆ ಎಂದು ಪ್ರತಿವಾದಿಗಳು ಒಪ್ಪಿಕೊಂಡಿದ್ದರು. ಅಲ್ಲದೇ, ಅಗತ್ಯ ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ನಿರ್ಮಿಸಲಾಗಿದೆ ಎಂದು ಅಧಿಕಾರಿ ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖಿಸಲಾಗಿದೆ. 2020 ನವೆಂಬರ್‌ನಲ್ಲಿ ಸಂಬಂಧಪಟ್ಟ ಎಲ್ಲರನ್ನೂ ಒಳಗೊಂಡು ಸಭೆ ನಡೆಸಿ, ಪುತ್ಥಳಿ ಸ್ಥಳಾಂತರಿಸಲು ಖಾಸಗಿ ಸ್ಥಳ ಸಿಕ್ಕರೆ ಅದನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಪೀಠ ಆದೇಶಿಸಿತ್ತು. ಆದರೆ, ಯಾರೂ ಭೂಮಿ ದಾನ ಮಾಡಲು ಮುಂದಾಗಿರಲಿಲ್ಲ.

ಕಾನೂನುಬಾಹಿರವಾಗಿ ಪುತ್ಥಳಿ ನಿರ್ಮಿಸಿದ್ದಕ್ಕೆ ಕ್ಷಮೆ ಕೋರಿ, ಪುತ್ಥಳಿ ಸ್ಥಾಪಿಸಲು ಸ್ಥಳ ಮಂಜೂರು ಮಾಡುವಂತೆ ಸರ್ಕಾರಕ್ಕೆ ಕೋರಿ ಯುವ ಸಂಘಟನೆಯು ಜೂನ್‌ 9ರಂದು ಅಫಿಡವಿಟ್‌ ಸಲ್ಲಿಸಿತ್ತು. ಸರ್ಕಾರವು ಸ್ಥಳ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪುತ್ಥಳಿ ಸ್ಥಳಾಂತರಿಸುವ ಸಂಬಂಧ ಮುಚ್ಚಳಿಕೆ ಬರೆದುಕೊಡಲು ಸಂಘಟನೆ ಸಿದ್ಧವಿದೆಯೇ ಎಂದು ಜುಲೈ 21ರ ಆದೇಶದಲ್ಲಿ ನ್ಯಾಯಾಲಯ ಕಾಲಾವಕಾಶ ನೀಡಿತ್ತು. ಅಫಿಡವಿಟ್‌ ಸಲ್ಲಿಸಿದ ದಿನಾಂಕದಿಂದ ನಾಲ್ಕು ತಿಂಗಳಲ್ಲಿ ಪರ್ಯಾಯ ಸ್ಥಳಕ್ಕೆ ಪುತ್ಥಳಿ ಸ್ಥಳಾಂತರಿಸುವ ಸಂಬಂಧ ಸಂಘಟನೆಯ ಪ್ರತಿನಿಧಿಗಳು ಆಗಸ್ಟ್‌ 9ರಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಇದಕ್ಕೆ ಸಹಮತಿಸಿರುವ ನ್ಯಾಯಾಲಯವು ಪ್ರಕರಣವನ್ನು ವಿಲೇವಾರಿ ಮಾಡಿದೆ.

Related Stories

No stories found.
Kannada Bar & Bench
kannada.barandbench.com