[ಪೋಕ್ಸೊ ಪ್ರಕರಣ] ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು: ಆಘಾತ ವ್ಯಕ್ತಪಡಿಸಿದ ಹೈಕೋರ್ಟ್‌

“ಈ ರೀತಿಯ ಆದೇಶ ನೀಡಿರುವುದು ಆಘಾತಕಾರಿ. ನನಗೂ ಆಘಾತವಾಗಿದೆ. ಆದರೆ, ಅವರ ವಾದ ಆಲಿಸದೆ ಆದೇಶ ಮಾಡಲಾಗದು” ಎಂದು ನ್ಯಾ. ನಾಗಪ್ರಸನ್ನ.
Vachanananda Swamiji
Vachanananda Swamiji
Published on

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿ ದಾಖಲಾಗಿರುವ ಪ್ರಕರಣದಲ್ಲಿ ದಾವಣಗೆರೆ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ವಿಚಾರಣಾ ನ್ಯಾಯಾಲಯದ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಆಘಾತ ವ್ಯಕ್ತಪಡಿಸಿದೆ.

ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ 2026ರ ಮೇ 6ರಂದು ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna
Justice M Nagaprasanna

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಪೋಕ್ಸೊ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿತು. ಆದರೆ, ಜಾಮೀನು ಪಡೆದಿರುವ ಆರೋಪಿಯ ವಾದ ಆಲಿಸದೆ ಯಾವುದೇ ಆದೇಶ ಹೊರಡಿಸಲಾಗದು ಎಂದು ಅಭಿಪ್ರಾಯಪಟ್ಟು ಆರೋಪಿ ವಚನಾನಂದ ಸ್ವಾಮೀಜಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆನ್ನು ಜೂನ್ 23ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು,  ವಿಚಾರಣಾ ನ್ಯಾಯಾಲಯದ ಆಕ್ಷೇಪಾರ್ಹ ಜಾಮೀನು ಆದೇಶದ 14ನೇ ಪ್ಯಾರಾ ಗಮನಿಸಬೇಕು. ಜಾಮೀನು ಮಂಜೂರು ಮಾಡಿರುವ ವಿಧಾನ ನಿಜಕ್ಕೂ ಆಘಾತಕಾರಿಯಾಗಿದೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಪೀಠವು ಖಂಡಿತವಾಗಿಯೂ ಇದು ಆಘಾತಕಾರಿ. ಪೋಕ್ಸೊ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಈ ರೀತಿಯಾಗಬಾರದು, ನಿರೀಕ್ಷಣಾ ಜಾಮೀ‌ನು ನೀಡುವ ಪ್ರಶ್ನೆಯೇ ಇರುವುದಿಲ್ಲ ಎಂದು ಹೇಳಿತು.

ವಿಚಾರಣಾ ನ್ಯಾಯಾಲಯದ ಆದೇಶವನ್ನು ಓದಿದ ರವಿಶಂಕರ್, ಮಠದ ಟ್ರಸ್ಟಿಗಳು, ಅವರ ಸಹವರ್ತಿಗಳು, ಭಕ್ತರು, ಮಕ್ಕಳು ಅಥವಾ ಅವರ ಪೋಷಕರು ನೀಡುವ ಯಾವುದೇ ದೂರು ಅಥವಾ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 4, 6, 8, 10 ಮತ್ತು 12 ಅಥವಾ ಸಂಬಂಧಿತ ನಿಬಂಧನೆಗಳ ಅಡಿ ಎಫ್‌ಐಆರ್‌ ದಾಖಲಾಗಿ, ಸ್ವಾಮೀಜಿಯನ್ನು ಬಂಧಿಸಿದರೆ ಅವರಿಂದ 1 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಹಾಗೂ ಒಬ್ಬರ ಶ್ಯೂರಿಟಿ ಪಡೆದು ಬಿಡುಗಡೆ ಮಾಡಬೇಕು ಎಂದು ಆದೇಶಿಸಲಾಗಿದೆ ಎಂದು ಪೀಠದ ಗಮನಕ್ಕೆ ತಂದರು.

ಆಗ ಪೀಠವು ಅದು ಪ್ರತಿವಾದಿಯ (ವಚನಾನಂದ ಸ್ವಾಮೀಜಿ) ಪವರ್ ಸರ್ ಎಂದು ಲಘು ದಾಟಿಯಲ್ಲಿ ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಅದು ಪ್ರತಿವಾದಿಯ ಪವರ್ ಇರಬಹುದು. ಆದರೆ, ಅಂಥ ಆದೇಶ ನೀಡುವುದು ನ್ಯಾಯಾಲಯದ ಅಧಿಕಾರವಲ್ಲ ಎಂದರು. ಅದಕ್ಕೆ ನ್ಯಾಯಮೂರ್ತಿಗಳು, ಈ ರೀತಿಯ ಆದೇಶ ನೀಡಿರುವುದು ಆಘಾತಕಾರಿ. ನನಗೂ ಆಘಾತವಾಗಿದೆ. ಆದರೆ, ಅವರ ವಾದ ಆಲಿಸದೆ ಆದೇಶ ಮಾಡಲಾಗದು ಎಂದರು‌.

ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಆರೋಪಿಯ ವಿರುದ್ಧ ಪೋಕ್ಸೊ ಕಾಯಿದೆ ಅಡಿ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಇನ್ನಿತರ ಶಿಕ್ಷಾರ್ಹ ಅಪರಾಧವೆಸಗಿದ ಆರೋಪವಿದ್ದು, ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಆರೋಪಿಗೆ ಮಂಜೂರು ಮಾಡಿರುವುದು ಎಫ್ಐಆರ್ ಪೂರ್ವ ಜಾಮೀನಾಗಿದೆ. ಅಂದರೆ, ದೂರು ಹಾಗೂ ಎಫ್ಐಆರ್ ದಾಖಲಾಗುವ ಮುನ್ನ ಜಾಮೀನು ನೀಡಲಾಗಿದೆ. ಮೇಲ್ನೋಟಕ್ಕೆ, ಈ ರೀತಿ ಜಾಮೀನು ಮಂಜೂರು ಮಾಡಬಾರದಿತ್ತು. ಆದರೆ, ಜಾಮೀನು ಆದೇಶದ ಫಲಾನುಭವಿಯ ಅಹವಾಲು ಆಲಿಸದೆ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ, ಅರ್ಜಿಯ ಮುಂದಿನ ವಿಚಾರಣೆ ದಿನಾಂಕದೊಳಗೆ ಪೊಲೀಸರು ಆರೋಪಿಗೆ ನೋಟಿಸ್ ಜಾರಿಗೊಳಿಸಬೇಕು ಎಂದು ಆದೇಶಿಸಿದ ಪೀಠ, ವಿಚಾರಣೆಯನ್ನು ಮುಂದಿನ ಮಂಗಳವಾರಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2026ರ ಮೇ 7ರಂದು ದೂರು ನೀಡಲಾಗಿದ್ದು, ಮೇ 8ರಂದು ಎಫ್‌ಐಆರ್ ದಾಖಲಾಗಿದೆ. ಆದರೆ, ಅದಕ್ಕೂ ಮೊದಲೇ ಅಂದರೆ ಮೇ 6ರಂದೇ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ ಎಂದರು. ಆಗ ನ್ಯಾಯಪೀಠ, ದೂರು ದಾಖಲಾಗದೇ ಅಪರಾಧಗಳು ಹೇಗೆ ಬಂದವು ಎಂದು ಪ್ರಶ್ನಿಸಿತು.

ಪ್ರಕರಣದ ಹಿನ್ನೆಲೆ: ಸಂತ್ರಸ್ತ ಬಾಲಕನ ತಾಯಿ 2026ರ ಮೇ 7ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 8 ಮತ್ತು 12 ಹಾಗೂ ಐಪಿಸಿ ಸೆಕ್ಷನ್‌ಗಳಾದ 323 ಮತ್ತು 506ರ ಅಡಿ ಜೀರೋ ಎಫ್‌ಐಆರ್‌ ದಾಖಲಿಸಿದ್ದರು. ಕೃತ್ಯ ಹರಿಹರದಲ್ಲಿ ನಡೆದಿದ್ದರಿಂದ ದೂರನ್ನು ಅಲ್ಲಿನ ಠಾಣೆಗೆ ವರ್ಗಾಯಿಸಲಾಗಿತ್ತು. ದೂರು ಆಧರಿಸಿ ಹರಿಹರ ಗ್ರಾಮಾಂತರ ಪೊಲೀಸರು ಮೇ 8ರಂದು ಪ್ರಕರಣ ದಾಖಲಿಸಿದ್ದರು.

Also Read
ಪೋಕ್ಸೊ ಪ್ರಕರಣ: ಪಂಚಮಸಾಲಿ ಪೀಠದ ಪದಚ್ಯುತ ಪೀಠಾಧಿಪತಿ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು

ಸಂತ್ರಸ್ತ ಬಾಲಕನ ತಾಯಿ ನೀಡಿದ್ದ ದೂರಿನಲ್ಲಿ, 2021-2024ರ ಅವಧಿಯಲ್ಲಿ ಮಠದಲ್ಲಿ ಮಕ್ಕಳು ಶಾಲೆಗೆ ಹೋಗುವ ಮುನ್ನ ಮಠದ ಸ್ನಾನ ಗೃಹದಲ್ಲಿ ಮಕ್ಕಳ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ, ಸ್ವಾಮೀಜಿ ತಾವು ಸಹ ಬೆತ್ತಲೆಯಾಗಿ ಮಕ್ಕಳಿಂದ ತಮ್ಮ ದೇಹದ ಖಾಸಗಿ ಭಾಗ ಮಸಾಜ್‌ ಮಾಡಿಸಿಕೊಳ್ಳುವುದು ಹಾಗೂ ಮಕ್ಕಳ ಖಾಸಗಿ ಅಂಗಗಳನ್ನು ತಾವು ಮುಟ್ಟುತ್ತಾ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮಕ್ಕಳು ಪ್ರತಿರೋಧ ಮಾಡಿದಾಗ ಅವರಿಗೆ ಹೊಡೆದಿದ್ದು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿ, ಊಟ ನೀಡದೇ ಸತಾಯಿಸಿದ್ದಾರೆ ಎಂದು ಆರೋಪಿಸಿದ್ದರು. ಕೊನೆಯದಾಗಿ ದೂರುದಾರರ ಮಗ ಹಾಗೂ ಇತರರ ಮೇಲೆ 2024ರ ಮಾರ್ಚ್‌ 20ರಂದು ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

Kannada Bar & Bench
kannada.barandbench.com