ಪೋಕ್ಸೊ ಪ್ರಕರಣ: ಪಂಚಮಸಾಲಿ ಪೀಠದ ಪದಚ್ಯುತ ಪೀಠಾಧಿಪತಿ ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು

ದಾವಣಗೆರೆ ನ್ಯಾಯಾಲಯವು ಸ್ವಾಮೀಜಿಗೆ ಮೇ 2ರಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಮೇ 8ರಂದು ಹರಿಹರ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Vachanananda Swamiji
Vachanananda Swamiji
Published on

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪದಚ್ಯುತ ಪೀಠಾಧಿಪತಿ ವಚನಾನಂದ ಸ್ವಾಮೀಜಿಗೆ ದಾವಣಗೆರೆ ವಿಶೇಷ ನ್ಯಾಯಾಲಯವು ಈಚೆಗೆ ಪೋಕ್ಸೊ ಪ್ರಕರಣ ದಾಖಲಾಗುವುದಕ್ಕೂ ಮುನ್ನ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಪೋಕ್ಸೊ ಕಾಯಿದೆ ಅಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಮೇ 2ರಂದು ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದರು.

Judge Shriram Narayan Hegde
Judge Shriram Narayan Hegde

“ಮಾಧ್ಯಮಗಳ ವರದಿಯನ್ನು ನೋಡಿದರೆ ಮೇಲ್ನೋಟಕ್ಕೆ ಇಲ್ಲಿ ಒಂದು ಕಡೆ ಸ್ವಾಮೀಜಿ ಮತ್ತು ಭಕ್ತರು, ಇನ್ನೊಂದು ಕಡೆ ಪೀಠದ ಟ್ರಸ್ಟಿಗಳು ನಡುವೆ ವಿವಾದ ಇರುವಂತೆ ಕಾಣುತ್ತಿದೆ. ಆದಷ್ಟು ಬೇಗ ಸ್ವಾಮೀಜಿಯು ಪೀಠದಿಂದ ಹೊರ ಹೋಗಬೇಕು ಎಂದು ಟ್ರಸ್ಟಿಯೊಬ್ಬರು ಹೇಳಿದ್ದಾರೆ ಎಂಬುದು ಬಹಿರಂಗವಾಗಿದೆ. ಸ್ವಾಮೀಜಿಗೆ ಮಸಾಜ್‌ ಅಂದರೆ ಇಷ್ಟವಿದ್ದು, ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಬೇಕು ಎಂದು ಮತ್ತೊಮ್ಮ ಟ್ರಸ್ಟಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದನ್ನು ನೋಡಿದರೆ ಮೇಲ್ನೋಟಕ್ಕೆ ಇದು ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಪ್ರಕರಣವಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

“ಒಂದೊಮ್ಮೆ ಮಠದ ಟ್ರಸ್ಟಿಗಳು, ಅವರ ಸಹವರ್ತಿಗಳುಮ ಭಕ್ತರು, ಮಕ್ಕಳು ಅಥವಾ ಅವರ ಪೋಷಕರು ನೀಡುವ ಯಾವುದೇ ದೂರು ಅಥವಾ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 4, 6, 8, 10 ಮತ್ತು 12 ಅಥವಾ ಸಂಬಂಧಿತ ನಿಬಂಧನೆಗಳ ಅಡಿ ಎಫ್‌ಐಆರ್‌ ದಾಖಲಾಗಿ, ಸ್ವಾಮೀಜಿಯನ್ನು ಬಂಧಿಸಿದರೆ ಅವರಿಂದ ₹1 ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಒಬ್ಬರ ಭದ್ರತೆ ಪಡೆದು ಬಿಡುಗಡೆ ಮಾಡಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಅಲ್ಲದೇ, “ಸ್ವಾಮೀಜಿ ತನಿಖೆಗೆ ಸಹಕರಿಸಬೇಕು. ತನಿಖಾಧಿಕಾರಿ ಸೂಚಿಸಿದಾಗ ತನಿಖೆಗೆ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ಪ್ರಭಾವಿಸುವಂತಿಲ್ಲ” ಎಂಬ ಇತರೆ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠವನ್ನು 2008ರ ಫೆಬ್ರವರಿ 19ರಂದು ಸ್ಥಾಪಿಸಲಾಗಿದ್ದು, ಏಪ್ರಿಲ್‌ 10ರಂದು ಅದನ್ನು ನೋಂದಾಯಿಸಲಾಗಿತ್ತು. ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿಯು 2012ರ ಫೆಬ್ರವರಿ 4ರಂದು ನಿಧನರಾದ ಬಳಿಕ 2015ರಲ್ಲಿ ಸಿದ್ದಲಿಂಗ ಸ್ವಾಮೀಜಿಯನ್ನು ಪೀಠ ಮತ್ತು ಟ್ರಸ್ಟ್‌ನಿಂದ ಉಚ್ಚಾಟಿಸಲಾಗಿತ್ತು. ಆನಂತರ ವಚನಾನಂದ ಸ್ವಾಮೀಜಿಯನ್ನು ಪೀಠಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

2026ರ ಜನವರಿಯಲ್ಲಿ ಪಂಚಮಸಾಲಿ ಸಮುದಾಯದ ನಾಯಕರು ಮಠದ ಆಸ್ತಿ ಮತ್ತು ಟ್ರಸ್ಟಿನ ಹಣದಲ್ಲಿ ಅಕ್ರಮವಾಗಿದ್ದು, ಹೊಣಗಾರಿಕೆ ಜವಾಬ್ದಾರಿ ನಿಗದಿಪಡಿಸಲು ನೇತೃತ್ವ ವಹಿಸುವಂತೆ ಸ್ವಾಮೀಜಿಯನ್ನು ಸಂಪರ್ಕಿಸಿದ್ದರು. ಇದಕ್ಕೆ ಒಪ್ಪಿದ್ದ ಸ್ವಾಮೀಜಿಯು ಸಮುದಾಯದ ನಾಯಕರು, ಭಕ್ತರ ಜೊತೆ ಈ ಕೆಲಸ ಆರಂಭಿಸಿದ್ದರಿಂದ ಟ್ರಸ್ಟಿಗಳು ಮತ್ತು ಸ್ವಾಮೀಜಿಯ ನಡುವೆ ಸಂಘರ್ಷ ಏರ್ಪಟ್ಟಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಆನಂತರ, 2026ರ ಏಪ್ರಿಲ್‌ 13ರಂದು ಟ್ರಸ್ಟ್‌ ಸ್ವಾಮೀಜಿಯನ್ನು ಪದಚ್ಯತಗೊಳಿಸುವ ನಿರ್ಣಯ ಕೈಗೊಂಡಿತ್ತು. ಇದನ್ನು ವಿರೋಧಿಸಿದ್ದ ಭಕ್ತರು ಮತ್ತು ಸಮುದಾಯದ ನಾಯಕರು ಸ್ವಾಮೀಜಿಯನ್ನೇ ಪೀಠಾಧ್ಯಕ್ಷರನ್ನಾಗಿ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದರು ಎಂದು ಸ್ವಾಮೀಜಿಯ ಜಾಮೀನು ಕೋರಿಕೆ ಅರ್ಜಿಯಲ್ಲಿ ವಿವರಿಸಲಾಗಿದೆ.

ಮಾಧ್ಯಮಗಳ ಜೊತೆ ಮಾತನಾಡುವಾಗ ಟ್ರಸ್ಟಿಯೊಬ್ಬರು ಮಠದಲ್ಲಿ ಓದುತ್ತಿರುವ ಮಕ್ಕಳ ಮೂಲಕ ಸ್ವಾಮೀಜಿಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು. ಕೆಲವು ಟ್ರಸ್ಟಿಗಳು ಮಕ್ಕಳ ಪೋಷಕರನ್ನು ಸಂಪರ್ಕಿಸಿ, ಸುಳ್ಳು ಪ್ರಕರಣ ದಾಖಲಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದಲ್ಲದೇ, ಸ್ವಾಮೀಜಿಯು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಿಸುವ ಸಂಬಂಧದ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಇದು ಕೆಲವು ರಾಜಕಾರಣಿಗಳ ಕಣ್ಣು ಕೆಂಪಗಾಗಿಸಿತ್ತು. ಸ್ವಾಮೀಜಿಯ ಘನತೆ ಕುಗ್ಗಿಸಿ, ಪೀಠದಿಂದ ಅವರನ್ನು ಕಿತ್ತೊಗೆಯುವ ಸಂಚನ್ನು ರೂಪಿಸಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೆ ಆಕ್ಷೇಪಿಸಿದ್ದ ಪ್ರಾಸಿಕ್ಯೂಷನ್‌ “ಮುಂದೆ ದಾಖಲಾಗಬಹುದಾದ ಪೋಕ್ಸೊ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದು ಸರಿಯಲ್ಲ. ಪೋಕ್ಸೊ ಪ್ರಕರಣವು ಮಕ್ಕಳು ಮತ್ತು ಸಮಾಜದ ವಿರುದ್ಧದ ಹೀನಕೃತ್ಯವಾಗಿದ್ದು, ಲಕ್ಷಾಂತರ ಭಕ್ತರನ್ನು ಹೊಂದಿರುವ ಪ್ರಭಾವಿಯಾದ ಸ್ವಾಮೀಜಿಯು ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು” ಎಂದು ವಿರೋಧಿಸಿತ್ತು.

ವಚನಾನಂದ ಸ್ವಾಮೀಜಿಯು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯ ಮೆಟ್ಟಿಲೇರಿದ್ದಾಗ ಅವರ ವಿರುದ್ಧ ಯಾವುದೇ ಪೋಕ್ಸೊ ಪ್ರಕರಣ ದಾಖಲಾಗಿರಲಿಲ್ಲ. ಮುಂದೆ ದಾಖಲಾಗಬಹುದಾದ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಅವರು ಕೋರಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿತ್ತು.

2026ರ ಮೇ 7ರಂದು ಸಂತ್ರಸ್ತ ಬಾಲಕನ ತಾಯಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 8 ಮತ್ತು 12 ಹಾಗೂ ಐಪಿಸಿ ಸೆಕ್ಷನ್‌ಗಳಾದ 323 ಮತ್ತು 506ರ ಅಡಿ ಜೀರೋ ಎಫ್‌ಐಆರ್‌ ದಾಖಲಿಸಿದ್ದರು. ಕೃತ್ಯವು ಹರಿಹರದಲ್ಲಿ ನಡೆದಿದ್ದರಿಂದ ಪೊಲೀಸರು ಅಲ್ಲಿಗೆ ದೂರು ವರ್ಗಾಯಿಸಿದ್ದರು. ಇದನ್ನು ಆಧರಿಸಿ ಹರಿಹರ ಗ್ರಾಮಾಂತರ ಪೊಲೀಸರು ಮೇ 8ರಂದು ಪ್ರಕರಣ ದಾಖಲಿಸಿದ್ದರು.

ದೂರಿನಲ್ಲಿ ಸಂತ್ರಸ್ತ ಬಾಲಕನ ತಾಯಿಯು 2021-2024ರ ಅವಧಿಯಲ್ಲಿ ಮಠದಲ್ಲಿ ಮಕ್ಕಳು ಶಾಲೆಗೆ ಹೋಗುವ ಮುನ್ನ ಮಠದ ಸ್ನಾನ ಗೃಹದಲ್ಲಿ ಮಕ್ಕಳ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ, ಸ್ವಾಮೀಜಿ ತಾವು ಸಹ ಬೆತ್ತಲೆಯಾಗಿ ಮಕ್ಕಳಿಂದ ತಮ್ಮ ಗುಪ್ತಾಂಗ, ದೇಹದ ಖಾಸಗಿ ಭಾಗ ಮಸಾಜ್‌ ಮಾಡಿಸಿಕೊಳ್ಳುವುದು ಹಾಗೂ ಮಕ್ಕಳ ಶಿಶ್ನ ಹಾಗೂ ಗುಪ್ತಾಂಗವನ್ನು ತಾವು ಮುಟ್ಟುವುದು ಮಾಡುತ್ತಾ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮಕ್ಕಳು ಪ್ರತಿರೋಧ ಮಾಡಿದಾಗ ಅವರಿಗೆ ಹೊಡೆದಿದ್ದು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿ, ಊಟ ನೀಡದೇ ಸತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೊನೆಯದಾಗಿ ದೂರುದಾರರ ಮಗ ಮತ್ತು ಇತರರ ಮೇಲೆ 2024ರ ಮಾರ್ಚ್‌ 20ರಂದು ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ನಡುವೆ, ಮೇ 19ರಂದು ಸ್ವಾಮೀಜಿ ವಿರುದ್ಧದ ಪೋಕ್ಸೊ ಪ್ರಕರಣ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಎಲ್ಲದರ ನಡುವೆ ಮತ್ತೆ ಮೂವರು ಮಕ್ಕಳು ವಚನಾನಂದ ಸ್ವಾಮೀಜಿಯು ಮಠದಲ್ಲಿ ತಮ್ಮ ಮೇಲೂ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದು, ಮಕ್ಕಳ ಕಲ್ಯಾಣ ಸಮಿತಿಯು ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದೆ ಎನ್ನಲಾಗಿದೆ.

Kannada Bar & Bench
kannada.barandbench.com