ಹಿಜಾಬ್ ಪ್ರಕರಣದೊಂದಿಗೆ ಸಾಮಾನ್ಯ ವಸ್ತ್ರ ಸಂಹಿತೆ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ: ಪಿಐಎಲ್‌ ಕುರಿತು ಕಿವಿಮಾತು

ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದ ಹಿನ್ನೆಲೆಯಲ್ಲಿ ಎಲ್ಲಾ ನೋಂದಾಯಿತ ಮತ್ತು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸಾಮಾನ್ಯ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಅರ್ಜಿ ಕೋರಿತ್ತು.
Ashwini Kumar Upadhyay
Ashwini Kumar Upadhyay
Published on

ಹಿಜಾಬ್‌ ಪ್ರಕರಣದ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್‌ ಗುರುವಾರ ನಿರಾಕರಿಸಿದೆ.

ಇದೇ ವೇಳೆ ಪ್ರತಿಯೊಂದು ಪ್ರಕರಣದಲ್ಲಿಯೂ ಪಿಐಎಲ್‌ ಸಲ್ಲಿಸಬಾರದು ಬದಲಿಗೆ ಸಂಸತ್ತಿನಲ್ಲಿ ತಮ್ಮ ಅಹವಾಲುಗಳನ್ನು ಮಂಡಿಸುವಂತೆ ಅರ್ಜಿದಾರರ ಪರ ಹಾಜರಿದ್ದ ವಕೀಲ ಹಾಗೂ ಬಿಜೆಪಿ ವಕ್ತಾರ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರಿಗೆ ನ್ಯಾಯಾಲಯ ತಿಳಿಸಿತು.

Also Read
ಹಿಜಾಬ್ ವಿವಾದ: ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿಗಳ ವಿಚಾರಣೆ ಮುಂದಿನ ವಾರ ನಡೆಸಲಿರುವ ಸುಪ್ರೀಂ

ಉಪಾಧ್ಯಾಯ ಅವರು ಹಿಜಾಬ್ ಅರ್ಜಿಯೊಂದಿಗೆ ಪ್ರಸ್ತುತ ಮನವಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಕೋರಿದಾಗ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು “ಪ್ರತಿ ಪ್ರಕರಣದಲ್ಲೂ ನೀವು ಪಿಐಎಲ್‌ ಸಲ್ಲಿಸಬಾರದು. ನೀವು ಯಾವಾಗಲೂ ಇದೇ ರೀತಿ ಮಾಡುತ್ತೀರಿ ಏಕೆ? ಸಂಸತ್ತು ಕೆಲಸ ಮಾಡುತ್ತಿಲ್ಲವೇ?” ಎಂದು ಪ್ರಶ್ನಿಸಿದರು. ಬಹಳ ಹಿಂದೆಯೇ ಹಿಜಾಬ್‌ ಪ್ರಕರಣವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ಅದರೊಂದಿಗೆ ಈ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿತು.

Also Read
ಹಿಜಾಬ್‌ ಧರಿಸದಿದ್ದರೆ ಇಸ್ಲಾಂನಡಿ ಪಾಪಿಗಳಾಗುವುದಿಲ್ಲ: ಕರ್ನಾಟಕ ಹೈಕೋರ್ಟ್‌ ಹಿಜಾಬ್‌ ನಿಷೇಧ ಎತ್ತಿ ಹಿಡಿದಿದ್ದೇಕೆ?

ಸ್ಥಾನಮಾನದ ಸಮಾನತೆ, ಸಾಮಾಜಿಕ ಸಮಾನತೆ ಹಾಗೂ ಭ್ರಾತೃತ್ವ, ಘನತೆ, ಏಕತೆ, ರಾಷ್ಟ್ರೀಯ ಸಮಗ್ರತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಎಲ್ಲಾ ನೋಂದಾಯಿತ ಮತ್ತು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಸಾಮಾನ್ಯ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಕೋರಿ ಉಪಾಧ್ಯಾಯ ಅವರು ತಮ್ಮ ಮಗ ನಿಖಿಲ್ ಮೂಲಕ ಅರ್ಜಿ ಸಲ್ಲಿಸಿದ್ದರು.

ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧಿಸಿದ್ದನ್ನು ಪ್ರಶ್ನಿಸಿ ದೆಹಲಿಯ ಹಲವೆಡೆ ಪ್ರತಿಭಟನೆಗಳು ನಡೆದಿದ್ದರಿಂದ ಅರ್ಜಿ ಸಲ್ಲಿಸಲಾಯಿತು ಎಂದು ಉಪಾಧ್ಯಾಯ ಮನವಿಯಲ್ಲಿ ವಿವರಿಸಿದ್ದಾರೆ.

Kannada Bar & Bench
kannada.barandbench.com