ಹಿಜಾಬ್ ವಿವಾದ: ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿಗಳ ವಿಚಾರಣೆ ಮುಂದಿನ ವಾರ ನಡೆಸಲಿರುವ ಸುಪ್ರೀಂ

ಮೇಲ್ಮನವಿದಾರರ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರು ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರೆದುರು ಪ್ರಕರಣವನ್ನು ಪ್ರಸ್ತಾಪಿಸಿದರು.
ಹಿಜಾಬ್ ವಿವಾದ: ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧದ  ಮೇಲ್ಮನವಿಗಳ    ವಿಚಾರಣೆ ಮುಂದಿನ ವಾರ ನಡೆಸಲಿರುವ ಸುಪ್ರೀಂ
A1
Published on

ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದನ್ನು ನಿಷೇಧಿಸುವ ಶಿಕ್ಷಣ ಸಂಸ್ಥೆಗಳ ಹಕ್ಕು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್‌ ಮುಂದಿನ ವಾರ ವಿಚಾರಣೆ ನಡೆಸಲಿದೆ.

ಮೇಲ್ಮನವಿದಾರರ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರು ಇಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅವರೆದುರು ಪ್ರಕರಣವನ್ನು ಪ್ರಸ್ತಾಪಿಸಿದರು.

"ಹೆಣ್ಣುಮಕ್ಕಳು ವ್ಯಾಸಂಗದಿಂದ ವಂಚಿತರಾಗಿದ್ದಾರೆ. ಪ್ರಕರಣವನ್ನು ಬಹಳ ಹಿಂದೆಯೇ ದಾಖಲಿಸಲಾಗಿದೆ” ಎಂದು ಪ್ರಶಾಂತ್‌ ಭೂಷಣ್‌ ತಿಳಿಸಿದಾಗ ಸಿಜೆಐ “ಮುಂದಿನ ವಾರದಲ್ಲಿ ಯಾವಾಗಲಾದರೂ ವಿಚಾರಣೆಗೆ ಪಟ್ಟಿ ಮಾಡಲಾಗುವುದು” ಎಂದು ಪ್ರತಿಕ್ರಿಯಿಸಿದರು.

Also Read
ಹಿಜಾಬ್‌ ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ

ಮೇಲ್ಮನವಿಗಳ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಕಳೆದ ಮಾರ್ಚ್‌ನಲ್ಲಿ ನಿರಾಕರಿಸಿತ್ತು. ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದನ್ನು ನಿಷೇಧಿಸಲು ರಾಜ್ಯದ ಸರ್ಕಾರಿ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಪರಿಣಾಮಕಾರಿ ಅಧಿಕಾರ ನೀಡುವ ಕರ್ನಾಟಕ ಸರ್ಕಾರದ ಆದೇಶವನ್ನು ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು.

ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರಿದ್ದ ತ್ರಿಸದಸ್ಯ ಪೀಠ ಹೀಗೆ ನುಡಿದಿತ್ತು:

- ಹಿಜಾಬ್‌ ಧಾರಣೆಯು ಇಸ್ಲಾಂನಲ್ಲಿ ಅಗತ್ಯ ಧಾರ್ಮಿಕ ಆಚರಣೆಯಲ್ಲ.

- ಶಾಲಾ ಸಮವಸ್ತ್ರ ಸೂಚಿಸುವುದರಿಂದ ಅಭಿವ್ಯಕ್ತಿ ಮತ್ತು ಖಾಸಗಿ ಸ್ವಾತಂತ್ರ್ಯ ಉಲ್ಲಂಘನೆಯಾಗುವುದಿಲ್ಲ. ಅದು ಸಮಂಜಸ ನಿರ್ಬಂಧವಾಗಿದೆ.

- ಸರ್ಕಾರಿ ಆದೇಶ ರವಾನಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಸರ್ಕಾರದ ಆದೇಶ ಸಿಂಧುವಾಗಿದೆ.

ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸೇರಿದಂತೆ ಕನಿಷ್ಠ ಮೂರು ಮೇಲ್ಮನವಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ.

Kannada Bar & Bench
kannada.barandbench.com