ಗೆದ್ದ ರಾಷ್ಟ್ರವೂ ಸೇರಿದಂತೆ ಯುದ್ಧಾಪರಾಧಕ್ಕೆ ಕಾರಣರಾದ ಪ್ರತಿಯೊಬ್ಬರೂ ವಿಚಾರಣೆಗೊಳಪಡಬೇಕು: ನ್ಯಾ. ನಾರಿಮನ್

ಯುದ್ಧಾಪರಾಧಗಳಲ್ಲಿ ತೊಡಗುವ ಪ್ರತಿಯೊಬ್ಬ ವ್ಯಕ್ತಿಯ ವಿರುದ್ಧ ದೋಷಾರೋಪ ಮಾಡಿದಾಗಲಷ್ಟೇ ಸಾರ್ವತ್ರಿಕ ಶಾಂತಿ ಸಾಧ್ಯ ಎಂದು ನ್ಯಾ. ನಾರಿಮನ್ ತಿಳಿಸಿದ್ದಾರೆ.
Rohinton Nariman
Rohinton Nariman

ಕದನದಲ್ಲಿ ಗೆದ್ದ ದೇಶಕ್ಕೇ ಸೇರಿರಲಿ, ಸೋತವರೇ ಆಗಿರಲಿ ಯುದ್ಧಾಪರಾಧಗಳಿಗೆ ಜವಾಬ್ದಾರರಾಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಯುದ್ಧೋತ್ತರ ವಿಚಾರಣೆಗಳಲ್ಲಿ ಆರೋಪಿಗಳನ್ನಾಗಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಈಚೆಗೆ ಹೇಳಿದರು.

ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದಲ್ಲಿ  ಹೈಕೋರ್ಟ್ ವಕೀಲರ ಸಂಘ (ಎಚ್‌ಸಿಬಿಎ) ಹಿರಿಯ ವಕೀಲ ದಿವಂಗತ ವಿನೋದ್ ಬೋಬ್ಡೆ ಅವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  'ನ್ಯೂರೆಂಬರ್ಗ್  ಅಂಡ್‌ ಟೋಕಿಯೊ ಟ್ರಯಲ್ಸ್ - ದಿ ರೂಲ್ ಆಫ್ ಲಾ ವಿಂಡಿಕೇಟೆಡ್‌' ಎಂಬ ವಿಷಯದ ಕುರಿತು ಮಾತನಾಡುತ್ತಾ ಅವರು ಈ ವಿಚಾರ ತಿಳಿಸಿದರು.

Also Read
ಬಿಬಿಸಿ ಸಾಕ್ಷ್ಯಚಿತ್ರದ ಮೇಲಿನ ನಿಷೇಧ, ಐಟಿ ದಾಳಿ ಖಂಡಿಸಿದ ನಿವೃತ್ತ ನ್ಯಾ. ರೋಹಿಂಟನ್‌ ನಾರಿಮನ್‌

ಯುದ್ಧಾಪರಾಧಗಳಲ್ಲಿ ತೊಡಗುವ ಪ್ರತಿಯೊಬ್ಬ ವ್ಯಕ್ತಿಯ ವಿರುದ್ಧ ದೋಷಾರೋಪ ಮಾಡಿದಾಗಲಷ್ಟೇ ನಮ್ಮನ್ನು ಈವರೆಗೆ ರಕ್ಷಿಸಿದ, ಮುಂದೆಯೂ ರಕ್ಷಿಸಲಿರುವ ಸಾರ್ವತ್ರಿಕ ಶಾಂತಿ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ನ್ಯಾ. ರೋಹಿಂಟನ್‌ ನಾರಿಮನ್‌ ಉಪನ್ಯಾಸದ ಪ್ರಮುಖ ಮಾಹಿತಿ:

  • ಯುದ್ಧಾಪರಾಧಿಗಳನ್ನು ವಿಚಾರಣೆಗೊಳಪಡಿಸಲು ವಿಶ್ವಸಂಸ್ಥೆಯಂತಹ ತಟಸ್ಥ ಸಂಸ್ಥೆ ರೂಪಿಸಿದ ಸನ್ನದು ಮತ್ತು ನ್ಯಾಯಾಂಗ ಸಮಿತಿ ಇರಬೇಕು. ಆಗ ಸುಖೀರಾಜ್ಯ ಸಾಕಾರವಾಗುತ್ತದೆ.

  • ಹಾಗೆ ಮಾಡಿದಾಗ ಪೂರ್ವಾನ್ವಯವಾಗುವ ನಿದರ್ಶನಗಳೊಂದಿಗೆ ಯಾರೂ ನಿಮ್ಮತ್ತ ಬೆರಳು ತೋರುವುದಿಲ್ಲ.

  • ಯುದ್ಧಾಪರಾಧಗಳು ಯಾವುವು ಎಂಬುದನ್ನು ಸ್ಪಷ್ಟವಾಗಿ ವಿವರಿಸಬೇಕು.

  • ಯುದ್ಧಾಪರಾಧಗಳ ವಿಚಾರಣೆಗಾಗಿ ವಿಶ್ವಸಂಸ್ಥೆ ತಟಸ್ಥ ದೇಶಗಳ ನ್ಯಾಯಾಧೀಶರ ಸಮಿತಿಯನ್ನು ರಚಿಸಬೇಕು.

  • ಗ್ರೇಟ್ ಬ್ರಿಟನ್, ಸೋವಿಯತ್ ಒಕ್ಕೂಟ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನ (ಯುಎಸ್ಎ) ಸೇರಿದಂತೆ ಯುದ್ಧ ಗೆದ್ದ ರಾಷ್ಟ್ರಗಳಿಗೆ ಸೇರಿದ ಎರಡು ಪ್ರತ್ಯೇಕ ನ್ಯಾಯಾಧೀಶರ ಸಮಿತಿಗಳು ದ್ವಿತೀಯ ಮಹಾಯುದ್ಧದ ಅಂತ್ಯದ ವೇಳೆಗೆ ಯುದ್ಧಾಪರಾಧಿಗಳ ವಿಚಾರಣೆ ನಡೆಸಿದವು. ಆದರೆ ಸಮಿತಿಯ ನ್ಯಾಯಮೂರ್ತಿಗಳು ವ್ಯತಿರಿಕ್ತ ತೀರ್ಪು ನೀಡಿದ್ದರಿಂದ ವಿಚಾರಣೆ ಅನಿಯಂತ್ರಿತವಾಯಿತು. ಇಟಾಲಿಯನ್ನರು ಜರ್ಮನರಂತೆಯೇ ಯುದ್ಧದಲ್ಲಿ ಪಾಲ್ಗೊಂಡರೂ ಅವರನ್ನು ಆರೋಪಿಗಳೆಂದು ಪರಿಗಣಿಸಲಿಲ್ಲ.

  • ಜಪಾನ್‌ ತನ್ನ ರಕ್ಷಣೆಯ ದೇಶವಾಗಬೇಕೆಂದು ಅಮೆರಿಕ ಸಂಯುಕ್ತ ಸಂಸ್ಥಾನ ಬಯಸಿದ್ದರಿಂದ ಜಪಾನ್‌ ಚಕ್ರವರ್ತಿ ಹಿರೋಹಿಟೊ ವಿಚಾರಣೆಗೊಳಪಡಲಿಲ್ಲ. ಚಕ್ರವರ್ತಿಯಾಗಿ ಹಿರೋಹಿಟೊ ಮುಂದುವರೆಯಬೇಕೆಂದು ಅಮೆರಿಕ ಬಯಸಿತ್ತು. ಆದರೆ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ ಜೀವಂತವಾಗಿದ್ದರೆ ಅವರಿಗೆ ಈ ವಿನಾಯಿತಿ ದೊರೆಯುತ್ತಿರಲಿಲ್ಲ.

  •  ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಎರಡು ಪರಮಾಣು ಬಾಂಬ್‌ಗಳನ್ನು ಬೀಳಿಸುವ ಮೂಲಕ ಅಮೆರಿಕ ಎಸಗಿದ ಅಪರಾಧವನ್ನು  ಎಂದಿಗೂ ಗಮನಿಸಲಿಲ್ಲ. ಏಕೆಂದರೆ ವಿಚಾರಣಾ ಸಮಿತಿಯಲ್ಲಿದ್ದದ್ದು ಯುದ್ಧ ಗೆದ್ದ ದೇಶಗಳು.

  • ಎಲ್ಲಾ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಟೋಕಿಯೊ ವಿಚಾರಣಾ ನ್ಯಾಯಮಂಡಳಿಯ ನ್ಯಾಯಮೂರ್ತಿಯಾಗಿದ್ದ ಭಾರತೀಯರಾದ ರಾಧಾ ಬಿನೋದ್‌ ಪಾಲ್‌ ಅವರು ನೀಡಿದ ಭಿನ್ನ ತೀರ್ಪು ಆಸಕ್ತಿಕರವಾದುದು.

  • ಬಾಂಬ್‌ ದಾಳಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನರನ್ನು ಕೊಂದ ಪ್ರಕರಣದಲ್ಲಿ ವಿಜಯಶಾಲಿ ದೇಶಗಳ ವಿರುದ್ಧವೂ ದೋಷಾರೋಪ ಮಾಡಬೇಕು ಎಂದು ನ್ಯಾ. ಪಾಲ್‌ ತಮ್ಮ 1,200 ಪುಟಗಳ ವ್ಯತಿರಿಕ್ತ ತೀರ್ಪಿನಲ್ಲಿ ತಿಳಿಸಿದ್ದರು.

  • ವಿಜಯಿ ದೇಶ ತನ್ನದೇ ಆದ ನ್ಯಾಯ ನೀಡಿದರೆ ನ್ಯಾಯ ಎಲ್ಲಿರುತ್ತದೆ? ಕಾನೂನು ಆಡಳಿತ ಹೇಗೆ ಅಸ್ತಿತ್ವದಲ್ಲಿರುತ್ತದೆ?

Related Stories

No stories found.
Kannada Bar & Bench
kannada.barandbench.com