ಏನು ಸೇವಿಸುತ್ತಿದ್ದೇವೆ ಎಂಬುದನ್ನು ಅರಿಯುವ ಹಕ್ಕು ಎಲ್ಲರಿಗೂ ಇದೆ: ದೆಹಲಿ ಹೈಕೋರ್ಟ್‌

ಆಹಾರ ಉತ್ಪನ್ನಗಳಲ್ಲಿ ಬಳಸಲಾಗಿರುವ ಪದಾರ್ಥಗಳು ಸಸ್ಯಜನ್ಯವೇ, ಪ್ರಾಣಿಜನ್ಯವೇ ಅಥವಾ ರಾಸಾಯನಿಕ ಆಧಾರಿತವೇ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು ಎಂದು ಆದೇಶಿಸಿದ ದೆಹಲಿ ಹೈಕೋರ್ಟ್‌.
Delhi high court, food products
Delhi high court, food products

ಆಹಾರ ಉತ್ಪನ್ನಗಳನ್ನು ತಯಾರಿಸುವಾಗ ಬಳಸುವ ಎಲ್ಲಾ ಪದಾರ್ಥಗಳ ಮಾಹಿತಿ ಬಹಿರಂಗಪಡಿಸಬೇಕು. ವಿಶೇಷವಾಗಿ ಆಹಾರ ಪದಾರ್ಥಗಳಲ್ಲಿ ಬಳಸುವ ಸಾಮಗ್ರಿಗಳು ಸಸ್ಯಜನ್ಯವೇ, ಪ್ರಾಣಿಜನ್ಯವೇ ಅಥವಾ ರಾಸಾಯನಿಕ ಆಧಾರಿತವೇ ಎಂಬುದನ್ನು ವಿವರಿಸಬೇಕು ಎಂದು ದೆಹಲಿ ಹೈಕೋರ್ಟ್‌ ಆದೇಶಿಸಿದೆ.

ಸೇವನೆ ಮಾಡುವ ಆಹಾರ ಉತ್ಪನ್ನಗಳಲ್ಲಿ ಬಳಸಲಾಗುವ ಪದಾರ್ಥಗಳ ಮಾಹಿತಿಯನ್ನು ಆಹಾರ ಉತ್ಪನ್ನಗಳ ಪೊಟ್ಟಗಳ ಮೇಲೆ ಪ್ರಕಟಸುವ ಸಂಬಂಧ ಮಾರ್ಗಸೂಚಿ ರೂಪಿಸಲು ನಿರ್ದೇಶಿಸುವಂತೆ ಕೋರಿ ರಾಮ್ ಗೋ ರಕ್ಷಾ ದಳ ಎಂಬ ಟ್ರಸ್ಟ್ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ಜಸ್ಮೀತ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

“ಆಹಾರ ಉತ್ಪನ್ನ ತಯಾರಿಕೆಯಲಿ ಬಳಸಲ್ಪಡುವ ಎಲ್ಲಾ ಪದಾರ್ಥಗಳನ್ನು ಬಹಿರಂಗಪಡಿಸಬೇಕು. ತಾವು ಏನು ತಿನ್ನುತ್ತಿದ್ದೇವೆ ಎಂದು ತಿಳಿಯುವ ಹಕ್ಕು ಎಲ್ಲರಿಗೂ ಇದೆ. ಆಹಾರ ಉತ್ಪನ್ನಗಳಲ್ಲಿ ಬಳಸಲಾಗುತ್ತಿರುವ ಸಾಮಗ್ರಿ ಅಥವಾ ಅದರ ಮೂಲವನ್ನು ಮರೆಮಾಚಬಾರದು. ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗಿರುವ ಎಲ್ಲಾ ಪದಾರ್ಥಗಳನ್ನು ಬಹಿರಂಗ ಮಾಡುವುದನ್ನು ಖಾತರಿಪಡಿಸಿ. ಬರೀ ಅದರ ಸಂಕ್ಷಿಪ್ತ ಹೆಸರು ಅಥವಾ ಆಹಾರದ ಹೆಸರಿನಿಂದಲ್ಲ. ಬದಲಿಗೆ ಸಾಮಾನ್ಯ ಭಾಷೆಯಲ್ಲಿಯೂ ಅದನ್ನು ಬಹಿರಂಗಪಡಿಸಬೇಕು” ಎಂದು ಪೀಠ ಆದೇಶಿಸಿದೆ.

“ಹಂದಿಯ ಕೊಬ್ಬಿನ ಅಂಶದಿಂದ ಹೇಗೆ ಆಹಾರ ಉತ್ಪನ್ನಗಳನ್ನು ಸಿದ್ಧಪಡಿಸಲಾಗಿರುತ್ತದೆ ಎಂಬುದು ಕೆಲವೊಮ್ಮೆ ಸರಳವಾಗಿ ಗೂಗಲ್‌ ಸರ್ಚ್‌ ಮಾಡುವ ಮೂಲಕವೇ ತಿಳಿಯುತ್ತದೆ. ಹೀಗಿದ್ದರೂ ಆಹಾರ ಉತ್ಪನ್ನಗಳ ತಯಾರಕರು ಅವುಗಳ ಮೂಲವನ್ನು ಬಹಿರಂಗಪಡಿಸುತ್ತಿಲ್ಲ. ಮಾಂಸಾಹಾರಿ ಪದಾರ್ಥಗಳನ್ನು ಆಹಾರ ಉತ್ಪನ್ನಗಳಲ್ಲಿ ಬಳಸುವುದು ಸಂಪೂರ್ಣ ಶಾಖಾಹಾರಿಗಳ ಸಂವೇದನೆಗೆ ನೋವುಂಟು ಮಾಡಬಹುದು” ಎಂದು ನ್ಯಾಯಾಲಯ ಹೇಳಿದೆ.

“ಆಹಾರ ಸಂರಕ್ಷಣೆ ಮತ್ತು ಗುಣಮಟ್ಟ ಕಾಯಿದೆ 2006ರ ಪ್ರಕಾರ ಆಹಾರ ಉತ್ಪಾದನೆ ಉದ್ಯಮದಲ್ಲಿರುವವರು ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾದ ಪದಾರ್ಥಗಳ ಮೂಲವನ್ನು ಬಹಿರಂಗಪಡಿಸಬೇಕು ಎಂದು ನಿರ್ದಿಷ್ಟವಾಗಿ ಹೇಳುವುದಿಲ್ಲ. ಪದಾರ್ಥವು ಸಸ್ಯಜನ್ಯವೇ, ಪ್ರಾಣಿಜನ್ಯವೇ ಅಥವಾ ರಾಸಾಯನಿಕ ಆಧಾರಿತವೇ ಎಂಬುದನ್ನು ಸ್ಪಷ್ಟವಾಗಿ ಹೇಳಬೇಕು. ಎಲ್ಲವನ್ನೂ ಪೊಟ್ಟಣದ ಮೇಲೆ ವಿವರಿಸಬೇಕು” ಎಂದು ಪೀಠ ಸ್ಪಷ್ಟಪಡಿಸಿದೆ.

Also Read
[ಮಾಂಸಾಹಾರ ಅಂಗಡಿಗಳ ಜಪ್ತಿ ಪ್ರಕರಣ] ಜನ ತಮ್ಮಿಷ್ಟದ್ದು ತಿನ್ನುವುದನ್ನು ಹೇಗೆ ತಡೆಯುತ್ತೀರಿ ಎಂದ ಗುಜರಾತ್ ಹೈಕೋರ್ಟ್

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಚೇತನ್‌ ಶರ್ಮಾ ಅವರು “ಸಚಿವಾಲಯಗಳ ನಡುವೆ ಸಮನ್ವಯ ಸಾಧಿಸಬೇಕಿರುವುದರಿಂದ ನಮಗೆ ಸ್ವಲ್ಪ ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ರಾಕೇಶ್‌ ಚೌಧರಿ ಅವರು “ಪದಾರ್ಥಗಳ ಮೂಲಕ್ಕೆ ಸಂಬಂಧಿಸಿದ ಮಾಹಿತಿಯನ್ನು ಜನಸಾಮಾನ್ಯರಿಗೆ ತಿಳಿಯುವ ರೀತಿ ಪ್ರಕಟಿಸಬೇಕು. ಈ ಸಂಬಂಧ ನಿರ್ದೇಶನ ನೀಡಬೇಕು” ಎಂದು ನ್ಯಾಯಾಲಯವನ್ನು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com