
ಸರ್ಕಾರದ ಎಲ್ಲಾ ಅಂಗಗಳು ಒಗ್ಗೂಡಿ ವಿಕಲಚೇತನರ ಹಕ್ಕುಗಳನ್ನು ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮನಮೋಹನ್ ಕರೆ ನೀಡಿದರು.
ನ್ಯಾಯಮೂರ್ತಿ ಸುನಂದಾ ಭಂಡಾರೆ ಪ್ರತಿಷ್ಠಾನ ಆಯೋಜಿಸಿದ್ದ ʼಸಮಾಜದಂಚಿನಲ್ಲಿರುವವರ, ವಿಕಲಚೇತನರ ಹಕ್ಕುಗಳ ಕುರಿತು ತೀರ್ಪು ನೀಡುವಿಕೆ ಮತ್ತು ವಕೀಲಿಕೆ ಹಾಗೂ ಅದರಾಚೆಗೆʼ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಅಂತಹ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು ಮತ್ತು ಎಲ್ಲಾ ಪಾಲುದಾರರಿಂದ ಸಂಘಟಿತ ಪ್ರಯತ್ನ ಸಾಧ್ಯವಾಗಬೇಕು ಎಂದು ಅವರು ಹೇಳಿದರು.
" ಸರ್ಕಾರದ ಎಲ್ಲಾ ಅಂಗಗಳು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಎಲ್ಲ ಹೊಣೆಯನ್ನೂ ನ್ಯಾಯಾಂಗಕ್ಕೇ ವಹಿಸಲು ಸಾಧ್ಯವಿಲ್ಲ . ನ್ಯಾಯಾಂಗ ಮಾತ್ರ ಈ ದೇಶದ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ನೀವು ಭಾವಿಸಿದರೆ, ಅದು ತಪ್ಪು. ನಾವು ಮುಂದಾಳತ್ವ ವಹಿಸಬಹುದು, ಆದರೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಅದು ತಳಮಟ್ಟದಲ್ಲಿ ಕಾರ್ಯರೂಪಕ್ಕೆ ಬರುತ್ತದೆ" ಎಂದರು.
ಜವಾಬ್ದಾರಿ ನ್ಯಾಯಾಂಗದ ಮೇಲಷ್ಟೇ ಅಲ್ಲ, ಶಾಸಕಾಂಗ ಮತ್ತು ಕಾರ್ಯಾಂಗದ ಮೇಲೂ ಇದೆ ಎಂದು ಅವರು ಹೇಳಿದರು.
ನಿರಂತರ ಆದೇಶ ನೀಡುವುದು ಆ ಹೊತ್ತಿನ ಅಗತ್ಯವಾಗಿದ್ದರೂ ನ್ಯಾಯಾಂಗಕ್ಕೆ ನಿರ್ಬಂಧಗಳಿದ್ದು ಅದಕ್ಕೆ ಅನುಗುಣವಾಗಿ ಸರ್ಕಾರ ಉಳಿದ ಅಂಗಗಳು ಸಂದರ್ಭಕ್ಕೆ ತಕ್ಕಂತೆ ಕೆಲಸ ಮಾಡುವಂತಾಗಬೇಕು. ನ್ಯಾಯಾಲಯಗಳು ದಾವೆಗಳಿಂದ ತುಂಬಿದ್ದು ಶಾಸಕಾಂಗ ಇದನ್ನು ಅರಿತು ಕೆಲ ಕಾರ್ಯವಿಧಾನಗಳನ್ನು ಜಾರಿಗೆ ತರಬೇಕಾಗುತ್ತದೆ. ನ್ಯಾಯಾಂಗ ನಿಂದನೆಯಾಗುತ್ತದೆ ಎಂಬ ನೋವಿನಲ್ಲಿ ಅದನ್ನು ಮಾಡಬಾರದು. ನ್ಯಾಯಾಂಗ ನಿಂದನೆ ಅಧಿಕಾರವನ್ನು ನ್ಯಾಯಾಲಯಗಳು ಪದೇ ಪದೇ ಬಳಸಲು ಶುರು ಮಾಡಿದರೆ ಅದು ಒಂದು ಹಂತದಲ್ಲಿ ನಿರುಪಯುಕ್ತವಾಗುತ್ತದೆ ಎಂದರು.
ಸರ್ಕಾರದ ಅಂಗಗಳು ಜನರ ಹಕ್ಕುಗಳನ್ನು ಒದಗಿಸುತ್ತಿದ್ದೇವೆ ಎಂಬ ಭಾವದಲ್ಲಿ ಕೆಲಸ ಮಾಡಬೇಕು ಬದಲಿಗೆ ದಾನ ನೀಡುವವರಂತೆ ವರ್ತಿಸಬಾರದು ಎಂದು ಅವರು ಕಿವಿಹಿಂಡಿದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಕೆ ಸಿಕ್ರಿ ಅವರು ಮಾತನಾಡಿ ಅಂಗವೈಕಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳು ಚುನಾಯಿಸುವ ಸಾಂವಿಧಾನಿಕ ಹಕ್ಕನ್ನು ಮತ್ತು ಶ್ರೇಷ್ಠತೆಯನ್ನು ಸಾಧಿಸುವ ಹಕ್ಕನ್ನು ಹೊಂದಿದ್ದಾರೆ ಎಂದರು.
"ನ್ಯಾಯಾಧೀಶರಿಗೆ ಸಂಬಂಧಿಸಿದಂತೆ ಈ ಹಂತದಲ್ಲಿ ಅಗತ್ಯವಿರುವ ಮೊದಲ ವಿಷಯವೆಂದರೆ ಅವರನ್ನು ಈ ವಿಚಾರಗಳಲ್ಲಿ ಸಂವೇದನಾಶೀಲರನ್ನಾಗಿಸುವುದು ಮತ್ತು ವಿಶೇಷವಾಗಿ ನ್ಯಾಯಾಂಗ ಅಕಾಡೆಮಿಯಲ್ಲಿ ಅಧೀನ ಮಟ್ಟದಲ್ಲಿ ಅರಿವು ಮೂಡಿಸುವುದಾಗಿದೆ" ಎಂದು ಅವರು ಹೇಳಿದರು.
ವಕೀಲ ರಾಹುಲ್ ಬಜಾಜ್ ಮತ್ತು ವಿಕಲಚೇತನರ ಉಪ ಮುಖ್ಯ ಆಯುಕ್ತ ಪ್ರವೀಣ್ ಪ್ರಕಾಶ್ ಅಂಬಾಷ್ಟ ಸಂವಾದದಲ್ಲಿ ಪಾಲ್ಗೊಂಡರು.