ಶಾಸಕಾಂಗ, ಕಾರ್ಯಾಂಗದಲ್ಲಿ ಹಸ್ತಕ್ಷೇಪ ನಡೆಸಿದ ಆರೋಪ ನ್ಯಾಯಂಗದ ಮೇಲಿದೆ: ನ್ಯಾ.ಗವಾಯಿ ಬೇಸರ

ಇನ್ನು ಕೆಲ ದಿನಗಳಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಲಿರುವ ಗವಾಯಿ ಅವರು ಎರಡು ಬೇರೆ ಬೇರೆ ಪ್ರಕರಣಗಳ ವಿಚಾರಣೆ ವೇಳೆ ಇದೇ ವಿಚಾರವಾಗಿ ಮೌಖಿಕ ಹೇಳಿಕೆ ನೀಡಿದರು.
Justice BR Gavai
Justice BR Gavai
Published on

ಶಾಸಕಾಂಗ ಕಾರ್ಯಾಂಗಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪವನ್ನು ಸುಪ್ರೀಂ ಕೋರ್ಟ್‌ ಸೋಮವಾರ ಅವಲೋಕಿಸಿತು.

ನೆಟ್‌ಫ್ಲಿಕ್ಸ್‌, ಅಮೆಜಾನ್ ಮತ್ತಿತರ ಒಟಿಟಿ ವೇದಿಕೆಗಳ ವಿರುದ್ಧ ಅಶ್ಲೀಲ ವಸ್ತುವಿಷಯಗಳನ್ನು ವಿತರಿಸಿದ್ದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಪಿಐಎಲ್‌ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಹಾಗೂ ಎ ಜಿ ಮಸಿಹ್ ಅವರನ್ನೊಳಗೊಂಡ ಪೀಠ ಈ ಹೇಳಿಕೆ ನೀಡಿತು.

Also Read
ಮುರ್ಷಿದಾಬಾದ್ ಹಿಂಸಾಚಾರ: ಅರೆಸೇನಾ ಪಡೆ ನಿಯೋಜನೆಗೆ ನಿರ್ದೇಶನ ನೀಡಲು ಸುಪ್ರೀಂ ನಕಾರ

ವಕೀಲ ವಿಷ್ಣು ಶಂಕರ್ ಜೈನ್ ಅವರು ಪೀಠದ ಮುಂದೆ ಪ್ರಕರಣ ಪ್ರಸ್ತಾಪಿಸಿದಾಗ ಇನ್ನು ಕೆಲ ದಿನಗಳಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಲಿರುವ ಗವಾಯಿ ಅವರು ವ್ಯಂಗ್ಯದ ಧಾಟಿಯಲ್ಲಿ “ಇಲ್ಲ, ಇಲ್ಲ… ಹಾಗೆ ಮಾಡಿದರೆ ನಾವು ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಹಸ್ತಕ್ಷೇಪ ಮಾಡಿದ ಆರೋಪಿಗಳಾಗುತ್ತೇವೆ” ಎಂದರು.

ವಿಚಾರಣೆಗಾಗಿ ಜೈನ್‌ ಅವರು ಪಟ್ಟು ಹಿಡಿದಾಗ ನ್ಯಾ. ಗವಾಯಿ “ಎರಡು ವಾರಗಳ ನಂತರ ಪಟ್ಟಿ ಮಾಡಿ ಅರ್ಜಿ ವಜಾಗೊಳಿಸಬೇಕು” ಎಂದರು. ಆಗ ನ್ಯಾಯಾಲಯದಲ್ಲಿ ನಗೆಯ ಅಲೆ ಎದ್ದಿತು.

ಅಂತಿಮವಾಗಿ, ಮುಂದಿನ ನಿಗದಿತ  ದಿನಾಂಕದಂದು ಪ್ರಕರಣ ಆಲಿಸಲು ನ್ಯಾಯಾಲಯ ಒಪ್ಪಿಕೊಂಡಿತು ಮತ್ತು ಅರ್ಜಿಯ ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುವಂತೆ ಜೈನ್‌ಗೆ ಸೂಚಿಸಿತು.  ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಯಲಿದೆ.

ಇದಕ್ಕೂ ಮುನ್ನು ಸೋಮವಾರ ಬೆಳಗ್ಗೆ ಕೂಡ ನ್ಯಾ, ಗವಾಯಿ ಅವರು ನ್ಯಾಯಾಂಗ ಹಸ್ತಕ್ಷೇಪ ಆರೋಪದ ಕುರಿತು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ವಕ್ಫ್ (ತಿದ್ದುಪಡಿ) ಕಾಯಿದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಅರೆಸೇನಾ ಪಡೆ ನಿಯೋಜಿಸುವಂತೆ ನಿರ್ದೇಶನ ನೀಡಲು ನಿರಾಕರಿಸಿದ ವೇಳೆ ಅವರು "ಇದನ್ನು ಹೇರಲು (355ನೇ ವಿಧಿ) ನಾವು ರಾಷ್ಟ್ರಪತಿಗಳಿಗೆ ರಿಟ್ ಮ್ಯಾಂಡಮಸ್‌ ಹೊರಡಿಸಬೇಕೆಂದು ಬಯಸುತ್ತೀರಾ? ಈಗಾಗಲೇ ಕಾರ್ಯಾಂಗವನ್ನು ಅತಿಕ್ರಮಿಸಿದ ಆರೋಪ ಎದುರಿಸುತ್ತಿದ್ದೇವೆ” ಎಂದರು.

ಆದರೆ ನಿನ್ನೆ ಸಂಜೆ ಜಾಲತಾಣದಲ್ಲಿ ಪ್ರಕಟಿಸಲಾದ ಆದೇಶದಲ್ಲಿ ಇಂದು (ಏಪ್ರಿಲ್ 22ರ ಮಂಗಳವಾರ) ಪ್ರಕರಣದ ವಿಚಾರಣೆ ನಡೆಸುವ ವಿವರ ನೀಡಲಾಗಿದೆ.

ಕಾರ್ಯಾಂಗದ ನಿರ್ಧಾರವನ್ನು ನ್ಯಾಯಾಂಗ ತೆಗೆದುಕೊಳ್ಳುತ್ತಿದೆ. ನ್ಯಾಯಾಂಗ ಆದೇಶಗಳ ಮೂಲಕ ಕಾಯಿದೆ ಬರೆಯಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯ ಕೆಲ ನಾಯಕರು ಹಾಗೂ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ನ್ಯಾಯಂಗದ ವಿರುದ್ಧ ಆರೋಪ ಮಾಡಿದ ಹಿನ್ನೆಲೆಯಲ್ಲಿ ನ್ಯಾ ಗವಾಯಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ  ಜಗದೀಪ್ ಧನಕರ್‌, ದೇಶದಲ್ಲಿ ನ್ಯಾಯಾಧೀಶರಿಗೆ ಯಾವುದೇ ಹೊಣೆಗಾರಿಕೆ ಇಲ್ಲ ಮತ್ತು ದೇಶದ ಕಾನೂನು ಅವರಿಗೆ ಅನ್ವಯಿಸುವುದಿಲ್ಲ ಎಂದು ಟೀಕಿಸಿದ್ದರು.

Also Read
ಬಿಜೆಪಿ ಸಂಸದನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ: ಎಜಿ ಅನುಮತಿ ಪಡೆಯುವಂತೆ ಸೂಚಿಸಿದ ಸುಪ್ರೀಂ

ರಾಜ್ಯ ಶಾಸಕಾಂಗಗಳು ಜಾರಿಗೆ ತಂದ ಮಸೂದೆಗಳ ಅಂಗೀಕಾರಕ್ಕೆ ಸಂಬಂಧಿಸಿದಂತೆ ಭಾರತದ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಅಧಿಕಾರಗಳ ವ್ಯಾಖ್ಯಾನದ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ನಂತರ ಧನಕರ್‌ ನ್ಯಾಯಾಂಗದ ವಿರುದ್ಧ ಹರಿಹಾಯ್ದಿದ್ದರು.

ವಕ್ಫ್ ತಿದ್ದುಪಡಿ ಕಾಯಿದೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಅಂತರ್ಯುದ್ಧಗಳಿಗೆ ಸಿಜೆಐ ಸಂಜೀವ್‌ ಖನ್ನಾ ಕಾರಣವಾಗಲಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಆರೋಪಿಸಿದ್ದರು.

Kannada Bar & Bench
kannada.barandbench.com