ಪ್ರತಾಪ್‌ ಸಿಂಹ ವಿರುದ್ಧ ಮಾಧ್ಯಮಗೋಷ್ಠಿ ನಡೆಸದಂತೆ ಲಕ್ಷ್ಮಣ್‌ಗೆ ನಿರ್ಬಂಧಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶ ತೆರವು  

ಲಕ್ಷ್ಮಣ್‌ ಅಥವಾ ಅವರ ಬೆಂಬಲಿಗರು ತಮ್ಮ ವಿರುದ್ಧ ಮಾಧ್ಯಮಗೋಷ್ಠಿ ನಡೆಸದಂತೆ ಹಾಗೂ ಯಾವುದೇ ಮಾಹಿತಿಯನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದಕ್ಕೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ಪ್ರತಾಪ್‌ ಸಲ್ಲಿಸಿದ್ದ ಅರ್ಜಿ ವಜಾ ಮಾಡಲಾಗಿದೆ.
M Lakshman and Pratap Simha
M Lakshman and Pratap SimhaTwitter

“ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿರುವವರು ಟೀಕೆಯನ್ನು ಮುಕ್ತವಾಗಿ ಸ್ವೀಕರಿಸಬೇಕು. ಪ್ರತಿಬಂಧಕಾದೇಶ ಮೂಲಕ ವ್ಯಕ್ತಿಯೊಬ್ಬರನ್ನು ಮಾಧ್ಯಮಗಳ ಮುಂದೆ ಮಾತನಾಡದಂತೆ ತಡೆಯಲಾಗದು” ಎಂದಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್‌ ಅವರು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಮಾಧ್ಯಮ ಗೋಷ್ಠಿ ನಡೆಸದಂತೆ ನಿರ್ಬಂಧಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ಬುಧವಾರ ತೆರವುಗೊಳಿಸಿದೆ.

ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್‌ ಸಿಂಹ ಮತ್ತು ಲಕ್ಷ್ಮಣ್‌ ಅವರು ಸಲ್ಲಿಸಿದ್ದ ಮಧ್ಯಪ್ರವೇಶ ಅರ್ಜಿಗಳ ವಿಚಾರಣೆ ನಡೆಸಿದ ಬೆಂಗಳೂರಿನ 18ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎ ಹರೀಶ ಅವರು ಸಾಮಾನ್ಯ ಆದೇಶ (ಕಾಮನ್‌ ಆರ್ಡರ್‌) ಮಾಡಿದ್ದಾರೆ.

Hareesha A.
XXVII Addl City Civil and Sessions Judge
Hareesha A. XXVII Addl City Civil and Sessions Judge

“ಲಕ್ಷ್ಮಣ್‌ ಅಥವಾ ಅವರ ಬೆಂಬಲಿಗರು ತಮ್ಮ ವಿರುದ್ಧ ಮಾಧ್ಯಮಗೋಷ್ಠಿ ನಡೆಸದಂತೆ ಹಾಗೂ ಯಾವುದೇ ಮಾಹಿತಿಯನ್ನು ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದಕ್ಕೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡುವಂತೆ ಕೋರಿ ಪ್ರತಾಪ್‌ ಸಿಂಹ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾ ಮಾಡಲಾಗಿದೆ. ಅಂತೆಯೇ, 2024ರ ಜನವರಿ 29ರಂದು ನ್ಯಾಯಾಲಯವು ಮಾಡಿರುವ ಏಕಪಕ್ಷೀಯ ಮಧ್ಯಂತರ ಆದೇಶ ತೆರವು ಕೋರಿ ಲಕ್ಷ್ಮಣ್‌ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಫಿರ್ಯಾದಿ ಪ್ರತಾಪ್‌ ಸಿಂಹ ವರ್ಚಸ್ಸಿಗೆ ಹಾನಿ ಮಾಡಬಹುದು ಎಂಬ ಮಾತ್ರಕ್ಕೆ ಪ್ರಜೆಯೊಬ್ಬರು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಮಾಧ್ಯಮದ ಮುಂದೆ ಬರದಂತೆ ಪ್ರತಿಬಂಧಕಾದೇಶ ಮಾಡಬಾರದು ಎಂಬ ದೃಷ್ಟಿಕೋನವನ್ನು ನಾನು ಹೊಂದಿದ್ದೇನೆ. ಸಾಮಾಜಿಕ ಅಥವಾ ರಾಜಕೀಯ ಕ್ಷೇತ್ರದಲ್ಲಿರುವವರ ಬದುಕಿನಲ್ಲಿ ಇದು ಸತ್ಯವಾಗಿದ್ದು, ವಿರೋಧಿ ಪಕ್ಷದ ನಾಯಕರ ವಿರುದ್ಧ ಮಾಧ್ಯಮ ಗೋಷ್ಠಿ ನಡೆಸದಂತೆ ನಿರ್ಬಂಧಿಸುವುದು ಅವರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವಾಗ ಪ್ರತಿಯೊಬ್ಬ ವ್ಯಕ್ತಿಯೂ ಮಿತಿ ದಾಟದಂತೆ ಎಚ್ಚರಿಕೆಯಿಂದ ಇರಬೇಕಾದ ಜವಾಬ್ದಾರಿ ಹೊಂದಿರುತ್ತಾರೆ. ಆದರೆ, ಮೂಲಭೂತವಾಗಿ ವ್ಯಕ್ತಿಯೊಬ್ಬರನ್ನು ಮಾಧ್ಯಮಗಳ ಮುಂದೆ ಮಾತನಾಡದಂತೆ ಪ್ರತಿಬಂಧಕಾದೇಶ ಮಾಡುವ ಮೂಲಕ ಅವರ ಧ್ವನಿ ಅಡಗಿಸಲಾಗದು. ಆ ವ್ಯಕ್ತಿ ನೀಡಿದ ಹೇಳಿಕೆಯು ಮಾನಹಾನಿ/ಆಕ್ಷೇಪಾರ್ಹವಾಗಿದ್ದರೆ ಹಾನಿ ಕೋರಿ ಸಿವಿಲ್‌ ಅಥವಾ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ಗೆ ಕಾನೂನಿನಲ್ಲಿ ಅವಕಾಶವಿದೆ. ಈ ನಿಲುವು ಅಭಿವ್ಯಕ್ತಿ ಸ್ವಾತಂತ್ರ್ಯ ತತ್ವ ಎತ್ತಿ ಹಿಡಿಯುವುದರ ಮಹತ್ವ ಸಾರುತ್ತದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

“ಪ್ರತಾಪ್‌ ಸಿಂಹ ಅವರು ತಮ್ಮ ಬೆಂಬಲಿಗರ ಮೂಲಕ ಭ್ರಷ್ಟಾಚಾರದ ಹಣವನ್ನು ಉದ್ಯಮದಲ್ಲಿ ತೊಡಗಿಸಿ ಅಕ್ರಮ ಸಂಪಾದನೆ ಮಾಡಿದ್ದಾರೆ ಎಂದು ಲಕ್ಷ್ಮಣ್‌ ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿರುವವರು ಇಂಥ ಟೀಕೆಗಳಿಗೆ ಮುಕ್ತವಾಗಿರಬೇಕು. ಆರೋಪಕ್ಕೆ ಸಾಕ್ಷಿ ಇಲ್ಲದಿದ್ದರೆ ಅದರಿಂದ ಬಾಧಿತರಾದವರು ಮಾನಹಾನಿ ದಾವೆ ಅಥವಾ ಮಾನನಷ್ಟ ದಾವೆ ಹೂಡಬಹುದು. ನನ್ನ ವಿನಮ್ರ ಅಭಿಪ್ರಾಯದ ಪ್ರಕಾರ ಮಾಧ್ಯಮ ಗೋಷ್ಠಿ ನಡೆಸದಂತೆ ನಿರ್ಬಂಧಿಸಲಾಗದು. ಫಿರ್ಯಾದಿಯ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದರೆ ಎಂಬ ಏಕೈಕ ಕಾರಣ ನೀಡಿ ಅವರ ಮೂಲಭೂತ ಹಕ್ಕು ಕಸಿಯಲಾಗದು. ಈಗಾಗಲೇ ಸಾರ್ವಜನಿಕವಾಗಿರುವ ಮಾನಹಾನಿ ಹೇಳಿಕೆಯನ್ನು ಮತ್ತೆ ಪ್ರಸಾರ ಮಾಡದಂತೆ ಪ್ರತಿವಾದಿಗೆ ನಿರ್ಬಂಧಿಸುವ ಮೂಲಕ ಫಿರ್ಯಾದಿಯ ಘನತೆಯನ್ನು ಸಿವಿಲ್‌ ನ್ಯಾಯಾಲಯ ರಕ್ಷಿಸಬಹುದು. ಹಾಲಿ ಪ್ರಕರಣದಲ್ಲಿ ಫಿರ್ಯಾದಿ ಪ್ರತಾಪ್‌ ಸಿಂಹ ಅವರು ಲಕ್ಷ್ಮಣ್‌ ಅವರನ್ನು ಮಾಧ್ಯಮ ಗೋಷ್ಠಿ ನಡೆಸದಂತೆ ನಿರ್ಬಂಧಿಸಲು ಸೂಕ್ತ ಆಧಾರಗಳನ್ನು ಒದಗಿಸಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ಸ್ವತಂತ್ರ ದೇಶದಲ್ಲಿ ತಮ್ಮ ಪ್ರತಿನಿಧಿಯ ಬಗ್ಗೆ ತಿಳಿದುಕೊಳ್ಳುವುದು ಜನರ ಮೂಲಭೂತ ಹಕ್ಕಾಗಿದೆ. ಈ ನೆಲೆಯಲ್ಲಿ ಫಿರ್ಯಾದಿ ಪ್ರತಾಪ್‌ ಸಿಂಹ ಅವರು ಪ್ರತಿಬಂಧಕಾದೇಶ ಪಡೆಯಲು ಮೇಲ್ನೋಟಕ್ಕೆ ಪ್ರಕರಣವಿದೆ ಎಂಬುದನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ. ವಿಶೇಷವಾಗಿ ಸಾರ್ವಜನಿಕ ಕಳಕಳಿಯ ವಿಚಾರಗಳಾದ ಚುನಾಯಿತ ಪ್ರತಿನಿಧಿಗಳ ನಡತೆಯ ಕುರಿತಾದ ಪ್ರಕರಣಗಳ ಆರೋಪಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರುವ ಹಿನ್ನೆಲೆಯಲ್ಲಿ ವಿರೋಧಿ ಅಭಿಪ್ರಾಯದ ಅಭಿವ್ಯಕ್ತಿ ನಿರ್ಬಂಧಿಸಲು ಸೂಕ್ತವಾದ ಆಧಾರಗಳನ್ನು ನ್ಯಾಯಾಲಯ ಕಂಡಿಲ್ಲ. ಹೀಗಾಗಿ, ಪ್ರತಾಪ್‌ ಸಿಂಹ ಅವರ ಕೋರಿಕೆಯನ್ನು ತಿರಸ್ಕರಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

Attachment
PDF
Pratap Simha Vs Lakshmana IAs.pdf
Preview

Related Stories

No stories found.
Kannada Bar & Bench
kannada.barandbench.com