ಹಬ್ಬ, ರಜಾದಿನಗಳಲ್ಲಿ ವಿಮಾನ ಟಿಕೆಟ್‌ ದರ ಏರಿಕೆ ಕಳವಳಕಾರಿ: ಸುಪ್ರೀಂ ಕೋರ್ಟ್‌

ಪ್ರಕರಣದಲ್ಲಿ ತನ್ನನ್ನು ಪಕ್ಷಕಾರನನ್ನಾಗಿ ಸೇರಿಸಿಕೊಳ್ಳುವಂತೆ ಭಾರತೀಯ ಏರ್‌ಲೈನ್ಸ್‌ ಒಕ್ಕೂಟ ಮಾಡಿದ ಮನವಿಯನ್ನು ಸದ್ಯಕ್ಕೆ ತಿರಸ್ಕರಿಸಿರುವುದಾಗಿ ತಿಳಿಸಿದ ಪೀಠ ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು ಎಂದಿತು.
Airlines
Airlines
Published on

ಹಬ್ಬಗಳು ಹಾಗೂ ರಜೆ ಸಂದರ್ಭದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳು ವಿಧಿಸುವ ಹೆಚ್ಚುವರಿ ಶುಲ್ಕ ಮತ್ತು ವಿಮಾನ ಟಿಕೆಟ್ ದರಗಳ ಏರಿಳಿತ ಗಂಭೀರ ಕಳವಳಕಾರಿ ವಿಚಾರ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ [ಎಸ್‌ ಲಕ್ಷ್ಮೀನಾರಾಯಣನ್‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ವಿಮಾನ ಟಿಕೆಟ್ ದರಗಳ ಅನಿರೀಕ್ಷಿತ ಏರಿಳಿತವನ್ನು ನಿಯಂತ್ರಿಸಲು ಮಾರ್ಗಸೂಚಿ ರೂಪಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಈ ವಿಚಾರ ತಿಳಿಸಿತು.

Also Read
ನನ್ನ ನ್ಯಾಯಾಂಗ ಸೇವೆಯ ಉಳಿದ ಅವಧಿಗೆ ಸನಾತನ ಧರ್ಮವೇ ಮಾರ್ಗದರ್ಶಿ: ನ್ಯಾ. ಜಿ ಆರ್ ಸ್ವಾಮಿನಾಥನ್

ಸರ್ಕಾರ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ಪರಿಶೀಲಿಸುತ್ತಿದ್ದು, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಲಾಗುವುದು ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಕೌಶಿಕ್ ಅವರು ತಿಳಿಸಿದರು.

“ಸಾಲಿಸಿಟರ್ ಜನರಲ್ ಸಭೆ ಕರೆದಿದ್ದಾರೆ. ವಿಷಯವನ್ನು ಉನ್ನತ ಹಂತಕ್ಕೆ ಒಯ್ದಿದ್ದೇವೆ.ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಯುತ್ತಿದೆ. ನಾಲ್ಕು ವಾರಗಳ ಕಾಲಾವಕಾಶ ನೀಡಿದರೆ, ಪ್ರತಿಕ್ರಿಯೆ ಸಲ್ಲಿಸುತ್ತೇವೆ,” ಎಂದು ಅವರು ಮನವಿ ಮಾಡಿದರು.

ಇದನ್ನು ದಾಖಲೆಯಲ್ಲಿ ಪರಿಗಣಿಸಿದ ನ್ಯಾಯಾಲಯ ಮಾರ್ಚ್ 23ಕ್ಕೆ ಪ್ರಕರಣ ಮುಂದೂಡಿತು. ಇದೇ ವೇಳೆ ಪ್ರಕರಣದಲ್ಲಿ ತನ್ನನ್ನು ಪಕ್ಷಕಾರನನ್ನಾಗಿ ಸೇರಿಸಿಕೊಳ್ಳುವಂತೆ ಭಾರತೀಯ ಏರ್‌ಲೈನ್ಸ್‌ ಒಕ್ಕೂಟ ಮಾಡಿದ ಮನವಿಯನ್ನು ಸದ್ಯಕ್ಕೆ ತಿರಸ್ಕರಿಸಿರುವುದಾಗಿ ತಿಳಿಸಿದ ಪೀಠ ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು ಎಂದಿತು.

Also Read
ಸಿದ್ಧತೆ ಮಾಡಿಕೊಳ್ಳದೆ ನ್ಯಾಯಾಲಯಕ್ಕೆ ಹಾಜರಾಗುವ ಸರ್ಕಾರದ ವಕೀಲರು ವಿಚಾರಣೆ ವೇಳೆ ಬಾಯಿ ಬಿಡಲ್ಲ: ಸಿಎಂ ಅಸಮಾಧಾನ

ವಿಮಾನ ಪ್ರಯಾಣ ಈಗ ಐಶಾರಾಮಿ ಸೇವೆಯಲ್ಲ; ತುರ್ತು ಪರಿಸ್ಥಿತಿಗಳು, ಹಬ್ಬಗಳು ಹಾಗೂ ರೈಲು–ರಸ್ತೆ ಸಾರಿಗೆ ಲಭ್ಯವಿಲ್ಲದ ಸಂದರ್ಭಗಳಲ್ಲಿ ಲಕ್ಷಾಂತರ ಜನರಿಗೆ ಅವಶ್ಯಕ ಎಂದು ಅರ್ಜಿ ವಾದಿಸಿತ್ತು. ಆದರೆ ವಿಮಾನಯಾನ ಸಂಸ್ಥೆಗಳು ಹಲವು ಬಾರಿ ದರಪಟ್ಟಿ ಬದಲಿಸುತ್ತಿದ್ದು ತುರ್ತು ಸಂದರ್ಭಗಳಲ್ಲಿ ಕೊನೆಯ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚು ಹೊರೆ ಆಗುತ್ತಿದೆ ಎಂದು ಅರ್ಜಿ ಆತಂಕ ವ್ಯಕ್ತಪಡಿಸಿತ್ತು.

ವಿಮಾನ ಸಾರಿಗೆ ಅಗತ್ಯ ಸೇವಾ ನಿರ್ವಹಣಾ ಕಾಯಿದೆ 1981ರ ಅಡಿಯಲ್ಲಿ ಬರಲಿದ್ದು ಅಗತ್ಯ ಸೇವೆಯ ಮಾನ್ಯತೆ ಇದ್ದರೂ, ದರ ನಿಗದಿಗೆ ಪರಿಣಾಮಕಾರಿ ನಿಯಂತ್ರಣ ವ್ಯವಸ್ಥೆ ಇಲ್ಲ. ಉಚಿತ ಸರಕು ಮಿತಿಯನ್ನು ಕಡಿಮೆ ಮಾಡಿ ಹೆಚ್ಚುವರಿ ಶುಲ್ಕ ವಿಧಿಸುವುದನ್ನೂ ಪ್ರಶ್ನಿಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ದರ ನಿಯಂತ್ರಣ ಮಾರ್ಗಸೂಚಿ ರೂಪಿಸಬೇಕು. ಸರ್ಜ್‌ ಪ್ರೈಸಿಂಗ್‌ಗೆ ಮಿತಿ ವಿಧಿಸಿ ಗ್ರಾಹಕರ ರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಲಾಗಿತ್ತು. ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯ ಕುಂಭಮೇಳದ ಹಿನ್ನೆಲೆಯಲ್ಲಿ ವಿಮಾನ ದರ ಹೆಚ್ಚಳ ಮಾಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.

Kannada Bar & Bench
kannada.barandbench.com