ಪತಿಯ ಅತಿಯಾದ ಕುಡಿತದ ಚಟ ಪತ್ನಿ, ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡುತ್ತದೆ: ಛತ್ತೀಸ್‌ಗಢ ಹೈಕೋರ್ಟ್

ಪ್ರಕರಣದಲ್ಲಿ ಪತಿ ತನ್ನ ಇಬ್ಬರು ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಿಲ್ಲ ಮತ್ತು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಪತ್ನಿ ಹಣ ಕೇಳಿದಾಗ ಆಕೆಯನ್ನು ನಿಂದಿಸಿ ಹಲ್ಲೆ ನಡೆಸುತ್ತಿದ್ದ ಎಂದು ಪೀಠ ಗಮನಿಸಿತು.
ಪತಿಯ ಅತಿಯಾದ ಕುಡಿತದ ಚಟ ಪತ್ನಿ, ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡುತ್ತದೆ: ಛತ್ತೀಸ್‌ಗಢ ಹೈಕೋರ್ಟ್

ಪತಿ ತನ್ನ ಕರ್ತವ್ಯ ಮರೆತು ಎಲ್ಲೆ ಮೀರಿ ಮದ್ಯಪಾನದಲ್ಲಿ ತೊಡಗಿದರೆ ಅದು ಆತನ ಮಕ್ಕಳು, ಹೆಂಡತಿ ಸೇರಿದಂತೆ ಕುಟುಂಬಕ್ಕೆ ಮಾನಸಿಕ ಕ್ರೌರ್ಯ ಉಂಟು ಮಾಡುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಪಾಯಲ್‌ ಶರ್ಮಾ ಮತ್ತು ಉಮೇಶ್‌ ಶರ್ಮಾ ನಡುವಣ ಪ್ರಕರಣ].

ಕ್ರೌರ್ಯದ ಆಧಾರದ ಮೇಲೆ ತನ್ನ ವಿವಾಹ ವಿಸರ್ಜಿಸಲು ಕೋರಿದ್ದ ಪತ್ನಿಯ ಅರ್ಜಿಯನ್ನು ಪುರಸ್ಕರಿಸುವಾಗ ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ಸಂಜಯ್ ಅಗರವಾಲ್ ಅವರು ಈ ವಿಚಾರ ತಿಳಿಸಿದರು.

ಪತ್ನಿ ಉದ್ಯೋಗಿಯಲ್ಲದೇ ಇದ್ದರೂ ಪತಿ ತನ್ನ ಇಬ್ಬರು ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸಿಲ್ಲ ಮತ್ತು ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಪತ್ನಿ ಹಣ ಕೇಳಿದಾಗ ಆಕೆಯನ್ನು ನಿಂದಿಸಿ ಹಲ್ಲೆ ನಡೆಸುತ್ತಿದ್ದ ಎಂಬ ಅಂಶವನ್ನು ಪೀಠ ಗಮನಿಸಿತು.

Also Read
ಪತಿಯನ್ನು ಕಪ್ಪು ಬಣ್ಣದ ಚರ್ಮ ಹೊಂದಿದವ ಎಂದು ಕರೆಯುವುದು ಕ್ರೌರ್ಯ: ವಿಚ್ಛೇದನ ಅರ್ಜಿ ಪುರಸ್ಕರಿಸಿದ ಹೈಕೋರ್ಟ್‌

“ಹೆಂಡತಿಯು ತನ್ನ ಮನೆಯ ಅಗತ್ಯಗಳಿಗಾಗಿ ಮತ್ತು ತನ್ನ ಮಕ್ಕಳನ್ನು ಉತ್ತಮ ಶಿಕ್ಷಣ ಒದಗಿಸಲು ಮತ್ತು ಬದುಕು ಕಟ್ಟಿಕೊಡಲು ಗಂಡನ ಮೇಲೆ ಅವಲಂಬಿತರಾಗಿರುವುದು ತುಂಬಾ ಸಹಜ. ಪತಿ ತನ್ನ ಜವಾಬ್ದಾರಿ ನಿರ್ವಹಿಸುವ ಬದಲು ಮಿತಿಮೀರಿದ ಕುಡಿತದ ಚಟ ರೂಢಿಸಿಕೊಂಡರೆ, ಅದು ಕುಟುಂಬವನ್ನು ಹದಗೆಡಿಸುತ್ತದೆ. ಈ ಸ್ಥಿತಿಯು ಸಹಜವಾಗಿಯೇ ಹೆಂಡತಿ ಮತ್ತು ಮಕ್ಕಳು ಸೇರಿದಂತೆ ಇಡೀ ಕುಟುಂಬದ ಮೇಲೆ ಮಾನಸಿಕ ಕ್ರೌರ್ಯ ಉಂಟುಮಾಡುತ್ತದೆ ”ಎಂದು ಪೀಠ ಹೇಳಿತು.

ಹೆಂಡತಿ ಮಾಡಿದ ಆರೋಪಗಳನ್ನು ಗಂಡ ಪಾಟೀಸವಾಲಿಗೆ ಒಳಪಡಿಸದ ಕಾರಣ ಈ ಆರೋಪಗಳನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಭಾವಿಸಬೇಕಾಗುತ್ತದೆ ಎಂದು ಹೈಕೋರ್ಟ್‌ ನುಡಿಯಿತು.

ಈ ಅವಲೋಕನಗಳೊಂದಿಗೆ, ಪೀಠ ಫೆಬ್ರವರಿ 2, 2006 ರಲ್ಲಿ ಹಸೆಮಣೆ ಏರಿದ್ದ ದಂಪತಿಯ ವಿವಾಹವನ್ನು ವಿಸರ್ಜಿಸಿತು. ಜೀವನಾಂಶವಾಗಿ ಪತ್ನಿಗೆ ಮಾಸಿಕ ₹15,000 ನೀಡಬೇಕು ಎಂದು ಕೂಡ ಪತಿಗೆ ಅದು ಆದೇಶಿಸಿತು.

Attachment
PDF
Payal_Sharma_vs_Umesh_Sharma.pdf
Preview

Related Stories

No stories found.
Kannada Bar & Bench
kannada.barandbench.com