Arvind Kejriwal and CBI Logo
Arvind Kejriwal and CBI Logo Kejriwal image taken from Facebook

ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌ ಖುಲಾಸೆ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೊರೆ ಹೋದ ಸಿಬಿಐ: ಮಾ. 9ಕ್ಕೆ ವಿಚಾರಣೆ

ವಿಚಾರಣಾ ನ್ಯಾಯಾಲಯದ ತೀರ್ಪು ಆಘಾತಕಾರಿ ಮತ್ತು ಕಾನೂನುಬಾಹಿರ ಎಂದು 974 ಪುಟಗಳ ಅರ್ಜಿಯಲ್ಲಿ ಸಿಬಿಐ ತಿಳಿಸಿದ್ದು ಹೋಳಿ ರಜೆ ಬಳಿಕ ಮಾರ್ಚ್ 9ರಂದು ನ್ಯಾ. ಸ್ವರಣ ಕಾಂತ ಶರ್ಮಾ ಅರ್ಜಿ ಕೈಗೆತ್ತಿಕೊಳ್ಳಲಿದ್ದಾರೆ.
Published on

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹಾಗೂ ತೆಲಂಗಾಣ ಜಾಗೃತಿ ಪಕ್ಷದ ಅಧ್ಯಕ್ಷೆ ಕೆ ಕವಿತಾ ಸೇರಿ ಎಲ್ಲಾ 23 ಆರೋಪಿಗಳನ್ನು ದೆಹಲಿ ನ್ಯಾಯಾಲಯ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಿಬಿಐ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದೆ.

ತೀರ್ಪು ಪರಿಶೀಲಿಸುವಂತೆ ಕೋರಿ ಸಿಬಿಐ ಸಲ್ಲಿಸಿರುವ 974 ಪುಟಗಳ ಅರ್ಜಿಯನ್ನು ಹೋಳಿ ರಜೆ ಬಳಿಕ ಮಾರ್ಚ್ 9ರಂದು  ನ್ಯಾ. ಸ್ವರಣ ಕಾಂತ ಶರ್ಮಾ ಆಲಿಸಲಿದ್ದಾರೆ.

Also Read
ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌, ಸಿಸೋಡಿಯಾ ಸೇರಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ದೆಹಲಿ ನ್ಯಾಯಾಲಯ

ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಜಿತೇಂದ್ರ ಸಿಂಗ್‌ ಅವರು ನೀಡಿದ ತೀರ್ಪು ಸ್ಪಷ್ಟವಾಗಿ ಕಾನೂನುಬಾಹಿರ ಹಾಗೂ ಮೇಲ್ನೋಟಕ್ಕೆ ದೋಷಯುಕ್ತ ಎಂದು ಸಿಬಿಐ ಸಲ್ಲಿಸಿರುವ ಅರ್ಜಿ ತಿಳಿಸಿದೆ. ಆರೋಪಗಳನ್ನು ನಿಗದಿಪಡಿಸುವ ಹಂತದಲ್ಲಿಯೇ ನ್ಯಾಯಾಧೀಶರು ಸಾಕ್ಷ್ಯಗಳನ್ನು ಅತಿಯಾಗಿ ವಿಶ್ಲೇಷಿಸಿ ಕ್ಲುಪ್ತ ವಿಚಾರಣೆ ನಡೆಸಿದೆ ಎಂದಿತು.

ಸಂಚಿನ ಅಂಶವನ್ನು ಸಮಗ್ರವಾಗಿ ವಿಚಾರಣೆ ನಡೆಸದೆ ಅದರ ಭಿನ್ನ ಭಾಗಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ವಿಚಾರಣಾ ನ್ಯಾಯಾಲಯ ಎಡವಿದೆ. ಪ್ರತಿವಾದದ ಆಯ್ದ ಭಾಗವನ್ನು ಮಾತ್ರವನ್ನು ಓದಿ ಅಪರಾಧ ಎಸಗಿರುವಲ್ಲಿ ಆರೋಪಿಗಳ ಪಾತ್ರವನ್ನು ಹೇಳುವ ಪ್ರಮುಖ ಸಾಕ್ಷ್ಯಗಳನ್ನು ಕಡೆಗಣಿಸಲಾಗಿದೆ ಎಂದು ಅದು ಹೇಳಿದೆ.

Also Read
ದೆಹಲಿ ಅಬಕಾರಿ ನೀತಿ ಪ್ರಕರಣ: ಕೆಲ ಆರೋಪಿಗಳನ್ನು 'ಸೌತ್‌ ಗ್ರೂಪ್‌' ಎಂದ ಸಿಬಿಐಗೆ ದೆಹಲಿ ನ್ಯಾಯಾಲಯ ತೀವ್ರ ತರಾಟೆ

ಅರವಿಂದ್‌ ಕೇಜ್ರಿವಾಲ್‌ ಮತ್ತು ಮನೀಷ್‌ ಸಿಸೋಡಿಯಾ ಅವರ ಪಾತ್ರವನ್ನು ವಿಚಾರಣಾ ನ್ಯಾಯಾಲಯ ಸೂಕ್ತವಾಗಿ ವಿಶ್ಲೇಷಿಸಿಲ್ಲ ಎಂದಿರುವ ಅದು ತನಿಖೆ ನಡೆಸಿದ ಸಿಬಿಐ ಅಧಿಕಾರಿಯ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುವಂತೆ ನೀಡಿದ ನಿರ್ದೇಶನ ಆಘಾತಕಾರಿಯಾಗಿದೆ. ಹೀಗಾಗಿ ಈ ನಿರ್ದೇಶನಕ್ಕೆ ತಡೆ ನೀಡಬೇಕು ಎಂದು ಕೋರಲಾಗಿದೆ.

2021-22ರ ಅಬಕಾರಿ ನೀತಿ ಮದ್ಯ ವ್ಯಾಪಾರದಲ್ಲಿ ಏಕಸ್ವಾಮ್ಯಕ್ಕೆ ಸಹಕಾರಿಯಾಗಿದೆ ಎಂಬ ಆರೋಪದ ಮೇಲೆ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿತ್ತು. ಆಮ್ ಆದ್ಮಿ ಪಕ್ಷದ ನಾಯಕರು ಲಂಚ ಪಡೆದಿದ್ದಾರೆ ಎಂದೂ ಆರೋಪಿಸಲಾಗಿತ್ತು. ಬಳಿಕ ಇ ಡಿ ಕೂಡ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ ಪ್ರಕರಣ ದಾಖಲಿಸಿತ್ತು. ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗಿತ್ತು. ಬಳಿಕ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿತ್ತು.

Kannada Bar & Bench
kannada.barandbench.com