ಸಿಬಿಐ ಮತ್ತು ಇ ಡಿ ಪ್ರಕರಣಗಳಲ್ಲಿ ಬಿಆರ್‌ಎಸ್ ನಾಯಕಿ ಕೆ ಕವಿತಾಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

ದೆಹಲಿಯ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ಮಾರ್ಚ್ 15ರಂದು ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ಬಂಧಿಸಿತ್ತು.
ಸಿಬಿಐ ಮತ್ತು ಇ ಡಿ ಪ್ರಕರಣಗಳಲ್ಲಿ ಬಿಆರ್‌ಎಸ್ ನಾಯಕಿ ಕೆ ಕವಿತಾಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ಇ ಡಿ)  ಪ್ರಕರಣಗಳಲ್ಲಿ ಕವಿತಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು  ರೌಸ್ ಅವೆನ್ಯೂ ನ್ಯಾಯಾಲಯಗಳ ವಿಶೇಷ ನ್ಯಾಯಾಧೀಶೆ (ಪಿಸಿ ಕಾಯಿದೆ) ಕಾವೇರಿ ಬವೇಜಾ ತಿರಸ್ಕರಿಸಿದರು.

ದೆಹಲಿಯ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್‌ನಲ್ಲಿ ಮಾರ್ಚ್ 15ರಂದು ಜಾರಿ ನಿರ್ದೇಶನಾಲಯ (ಇಡಿ) ಅವರನ್ನು ಬಂಧಿಸಿತ್ತು. ಏಪ್ರಿಲ್ 11 ರಂದು ಕವಿತಾ ಅವರನ್ನು ಸಿಬಿಐ ತನಿಖೆಗಾಗಿ ವಶಕ್ಕೆ ಪಡೆದಿತ್ತು.

2021-22ರ ದೆಹಲಿ ಅಬಕಾರಿ ನೀತಿಯನ್ನು ಸಗಟು ಮತ್ತು ಚಿಲ್ಲರೆ ಮದ್ಯದ ಏಕಸ್ವಾಮ್ಯಕ್ಕೆ ಅನುಕೂಲವಾಗುವಂತೆ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಸಿಬಿಐ  2022ರಲ್ಲಿ ಎಫ್‌ಐಆರ್ ದಾಖಲಿಸಿತ್ತು.

ಸಿಬಿಐ ಮತ್ತು ಇ ಡಿ ಪ್ರಕಾರ, ದಕ್ಷಿಣ ಭಾರತದ ಕೆಲವು ವ್ಯಕ್ತಿಗಳು, ಗುಂಪು ಈ ಪ್ರಕ್ರಿಯೆಯಲ್ಲಿ ಲಾಭ ಪಡೆದಿದ್ದು  ಲಾಭಾಂಶವನ್ನು  ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ನೀಡಲಾಗಿತ್ತು. ಅದು ಈ ಹಣವನ್ನು ಗೋವಾ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಬಳಸಿತು ಎಂದು ದೂರಲಾಗಿತ್ತು.

ಭ್ರಷ್ಟಾಚಾರ ನಿಗ್ರಹ (ಪಿಸಿ) ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಮಧ್ಯೆ, ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆ ಇಡಿ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ. ಇ ಡಿ ಪ್ರಕರಣದಲ್ಲಿ ಈ ಹಿಂದೆ ನ್ಯಾಯಾಲಯ ಮಧ್ಯಂತರ ಜಾಮೀನು ನಿರಾಕರಿಸಿತ್ತು.

Kannada Bar & Bench
kannada.barandbench.com