ಅಬಕಾರಿ ನೀತಿ ಹಗರಣ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

ಫೆಬ್ರವರಿ 26ರಿಂದ ಸಿಸೋಡಿಯಾ ಜೈಲಿನಲ್ಲಿದ್ದಾರೆ. ಈ ಹಿಂದೆ ಮಾರ್ಚ್ 31ರಂದು ಸಿಬಿಐ ಪ್ರಕರಣದಲ್ಲಿ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.
Manish sisodia, Rouse Avenue court
Manish sisodia, Rouse Avenue court

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮನೀಶ್ ಸಿಸೋಡಿಯಾ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇ ಡಿ) ಹೂಡಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯ ಶುಕ್ರವಾರ ಜಾಮೀನು ನಿರಾಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರೌಸ್‌ ಅವೆನ್ಯೂ ನ್ಯಾಯಾಲಯ ಏಪ್ರಿಲ್ 18 ರಂದು ತೀರ್ಪು ಕಾಯ್ದಿರಿಸಿತ್ತು. ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಕೆ ನಾಗಪಾಲ್‌ ಅವರು ಇಂದು ಆದೇಶ ಪ್ರಕಟಿಸಿದರು.

Also Read
[ಅಬಕಾರಿ ನೀತಿ ಹಗರಣ] ಹಣದ ಜಾಡು ಪತ್ತೆಯಾಗಿಲ್ಲ, ನನ್ನನ್ನು ಮಾತ್ರ ಗುರಿಯಾಗಿಸಲಾಗಿದೆ: ದೆಹಲಿ ಮಾಜಿ ಡಿಸಿಎಂ ಸಿಸೋಡಿಯಾ

ಅಬಕಾರಿ ನೀತಿ ಹಗರಣದಲ್ಲಿ ಭಾಗಿಯಾದ ಆರೋಪದಡಿ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು ಸಿಬಿಐ ಪ್ರಕರಣದಲ್ಲಿಯೂ ಅವರಿಗೆ ಜಾಮೀನು ನಿರಾಕರಿಸಲಾಗಿದೆ.

ಸಿಬಿಐ ದಾಖಲಿಸಿದ್ದ ಪ್ರಕರಣ ಆಧರಿಸಿ ಇ ಡಿ ಪ್ರತ್ಯೇಕವಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಇತರ ಸದಸ್ಯರು ಲಂಚ ಪಡೆದು ಕೆಲವು ವ್ಯಾಪಾರಿಗಳಿಗೆ ಮದ್ಯದ ಪರವಾನಗಿ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.

ತನ್ನ 80 ಪುಟಗಳ ಆದೇಶದಲ್ಲಿ ನ್ಯಾಯಾಲಯವು ಹಗರಣದ ಕ್ರಿಮಿನಲ್‌ ಸಂಚಿನ ಮುಖ್ಯ ಸೂತ್ರಧಾರ ಸಿಸೋಡಿಯಾ ಆಗಿದ್ದಾರೆ. ಹೋಲ್‌ಸೇಲ್‌ ಮದ್ಯ ಮಾರಾಟದ ಅರ್ಹತಾ ಮಾನದಂಡವನ್ನು ಸಿಸೋಡಿಯಾ ಅವರು ಏಕಪಕ್ಷೀಯವಾಗಿ ಬದಲಾಯಿಸಿದ್ದಾರೆ. ಸಚಿವ ಸಮಿತಿಯ ಮುಂದೆ ಈ ವಿಚಾರವಾಗಿ ಚರ್ಚೆಯನ್ನು ಅವರು ನಡೆಸಿಲ್ಲ ಎಂದು ಹೇಳಿದೆ.

ಈ ಸಂಚಿನ ಭಾಗವಾಗಿ, ಅಕ್ರಮವಾಗಿ ರೂ.100 ಕೋಟಿ ಹಣವನ್ನು ಮುಂಗಡ ಕಿಕ್‌ ಬ್ಯಾಕ್‌ ಆಗಿ ದಕ್ಷಿಣದ ಮದ್ಯಮಾರಾಟಗಾರರ ಲಾಬಿಯು ವಿಜಯ್‌ ನಾಯರ್‌ ಅವರಿಗೆ ನೀಡಿತ್ತು. ಈ ಎಲ್ಲದಕ್ಕೂ ಸಿಸೋಡಿಯಾ ಅವರ ನಂಟಿದೆ ಎಂದು ನ್ಯಾಯಾಲಯ ಹೇಳಿದೆ.

ಬಹುಪ್ರಮುಖವಾಗಿ ಅಕ್ರಮ ಹಣ ವರ್ಗಾವಣೆಯಲ್ಲಿ ಸಿಸೋಡಿಯಾ ಅವರ ಪಾತ್ರವಿರುವುದನ್ನು ಜಾರಿ ನಿರ್ದೇಶನಾಲಯವು ನಂಬಲರ್ಹವಾದ, ಮೇಲ್ನೋಟಕ್ಕೆ ಗೋಚರಿಸುವ ಸಾಕ್ಷಿಗಳ ಮೂಲಕ ನಿರೂಪಿಸಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು. ಅಲ್ಲದೆ,"ಅಪರಾಧದ ಗಂಭೀರತೆ, ಅಪರಾಧಿಕ ಸ್ವರೂಪ, ಅಲ್ಲದೆ ಅರ್ಜಿದಾರರು (ಸಿಸೋಡಿಯಾ) ಹೊಂದಿರುವ ಪ್ರಭಾವ, ಅವರನ್ನು ಬಿಡುಗಡೆಗೊಳಿಸಿದರೆ ಸಮಾಜದ ಮೇಲೆ ಉಂಟಾಗುವ ಪರಿಣಾಮವನ್ನು ಮನಗಂಡು ಪ್ರಸಕ್ತ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಲಾಗದು" ಎಂದು ಹೇಳಿತು.

Related Stories

No stories found.
Kannada Bar & Bench
kannada.barandbench.com