ಅಬಕಾರಿ ಹಗರಣ: ಸಿಸೋಡಿಯಾ, ವಿಜಯ್ ನಾಯರ್ ಸೇರಿ ನಾಲ್ವರಿಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ಕೆಲವು ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಅಬಕಾರಿ ನೀತಿ ತಿರುಚಲಾಗಿದ್ದು ಅದಕ್ಕೆ ಬದಲಾಗಿ ಕಿಕ್‌ಬ್ಯಾಕ್‌ ಪಡೆಯಲಾಗಿದೆ ಎಂದು ಆರೋಪಿಸಿ ಸಿಬಿಐ ದಾಖಲಿಸಿದ್ದ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.
Manish Sisodia
Manish Sisodia
Published on

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ಹೈಕೋರ್ಟ್ ಸೋಮವಾರ ಜಾಮೀನು ನಿರಾಕರಿಸಿದೆ.

ಎಎಪಿ ನಾಯಕ ವಿಜಯ್ ನಾಯರ್ ಹಾಗೂ ಹೈದರಾಬಾದ್ ಮೂಲದ ಉದ್ಯಮಿ ಅಭಿಷೇಕ್ ಬೋಯಿನಪಲ್ಲಿ ಮತ್ತು ಪೆರ್ನೋಡ್ ರಿಕಾರ್ಡ್‌ ಸಂಸ್ಥೆಯ ಉದ್ಯೋಗಿ ಬೆನೊಯ್ ಬಾಬು ಅವರಿಗೆ ಕೂಡ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರಿದ್ದ ಪೀಠ ಜಾಮೀನು ನಿರಾಕರಿಸಿತು.

ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ಈಗಾಗಲೇ ತಿರಸ್ಕರಿಸಿದ್ದು, ಈಗ ಜಾರಿ ನಿರ್ದೇಶನಾಲಯದ ದಾಖಲಿಸಿದ್ದ ಪ್ರಕರಣದಲ್ಲಿಯೂ ಜಾಮೀನು ತಿರಸ್ಕರಿಸಲಾಗಿದೆ.

Also Read
[ಅಬಕಾರಿ ನೀತಿ ಹಗರಣ] ಹಣದ ಜಾಡು ಪತ್ತೆಯಾಗಿಲ್ಲ, ನನ್ನನ್ನು ಮಾತ್ರ ಗುರಿಯಾಗಿಸಲಾಗಿದೆ: ದೆಹಲಿ ಮಾಜಿ ಡಿಸಿಎಂ ಸಿಸೋಡಿಯಾ

ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಸೋಡಿಯಾ, ನಾಯರ್, ಬೋಯಿನಪಲ್ಲಿ ಹಾಗೂ ಬಾಬು ಆರೋಪಿಗಳೆಂದು ಗುರುತಿಸಲಾಗಿತ್ತು.

ಜಾಮೀನು ನಿರಾಕರಿಸುವ ವೇಳೆ ಪೀಠವು ಇದೊಂದು ವಿಶೇಷ ಪ್ರಕರಣವಾಗಿದೆ. ಕೆಲ ಹೊರಗಿನವರ ಒತ್ತಾಸೆಯಂತೆ ಅವರಿಗೆ ಲಾಭವಾಗುವ ರೀತಿಯಲ್ಲಿ ಉಪ ಮುಖ್ಯಮಂತ್ರಿಯವರು ನೀತಿಯನ್ನು ರೂಪಿಸಿದ್ದಾರೆ ಎನ್ನುವ ಆರೋಪವಿದೆ.

"ಸರ್ಕಾರದ ಕಾರ್ಯನಿರ್ವಹಣೆಯು ಸಾಮಾನ್ಯವಾಗಿ ಗೋಪ್ಯವಾಗಿರುತ್ತದೆ. ನೀತಿ ನಿರೂಪಣೆಗಳನ್ನು ರೂಪಿಸುವ ವಿಚಾರದಲ್ಲಿ ಸಾರ್ವಜನಿಕರಿಗೆ ಪ್ರವೇಶಾಧಿಕಾರವಿರುವುದಿಲ್ಲ. ಹಿರಿಯ ಅಧಿಕಾರಿಗಳು ರಾಜಕೀಯ ನಾಯಕರ ಮೇಲುಸ್ತುವಾರಿಯಲ್ಲಿ ನೀತಿನಿರೂಪಣೆಗಳನ್ನು ಮಾಡುತ್ತಾರೆ," ಎಂದು ಪೀಠವು ಹೇಳಿತು.

ಕೆಲವು ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಅಬಕಾರಿ ನೀತಿ ತಿರುಚಲಾಗಿದ್ದು ಅದಕ್ಕೆ ಬದಲಾಗಿ ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಿ ಸಿಬಿಐ ದಾಖಲಿಸಿದ್ದ ಎಫ್‌ಐಆರ್‌ ಆಧರಿಸಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವರದಿ ಆಧರಿಸಿ ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ವಿ ಕೆ ಸಕ್ಸೇನಾ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ ನಂತರ ಇ ಡಿ ಮತ್ತು ಸಿಬಿಐ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದವು. ಸಿಸೋಡಿಯಾ ಅವರು ಕಾನೂನು ಉಲ್ಲಂಘಿಸಿದ್ದು ಗಣನೀಯ ಆರ್ಥಿಕ ಪರಿಣಾಮಗಳಿಗೆ ಕಾರಣವಾಗುವ ನೀತಿಯನ್ನು ಅನುಮೋದಿಸಿದ್ದಾರೆ ಎಂದು ವರದಿ ಹೇಳಿತ್ತು.

Kannada Bar & Bench
kannada.barandbench.com