ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡದಿರಲು ಕಾರ್ಯಕಾರಿ ಮಂಡಳಿ ನಿರ್ಧಾರ: ಎನ್‌ಎಲ್‌ಎಸ್‌ಐಯು ಆಕ್ಷೇಪಣೆಯಲ್ಲಿ ಉಲ್ಲೇಖ

ಉತ್ತರ ನೀಡಲು ರಾಜ್ಯ ಸರ್ಕಾರಕ್ಕೆ ಒಂದು ವಾರ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿದ ನ್ಯಾಯಮೂರ್ತಿ ಅಶೋಕ್ ಎ.ಕಿಣಗಿ ಅವರ ಏಕಸದಸ್ಯ ಪೀಠ.
NLSIU
NLSIU
Published on

ಪ್ರಸಕ್ತ ಶೈಕ್ಷಣಿಕ ಸಾಲಿನ ಮೂರು ವರ್ಷದ ಕಾನೂನು ಪದವಿ (ಎಲ್‌ಎಲ್‌ಬಿ) ಪ್ರವೇಶಾತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ (ತೃತೀಯ ಲಿಂಗಿಗಳಿಗೆ) ಮೀಸಲಾತಿ ಕಲ್ಪಿಸದಿರಲು ತನ್ನ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ ಎಂದು ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು (ಎನ್‌ಎಲ್‌ಎಸ್‌ಐಯು) ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ತಮಗೆ ಕಾನೂನು ಪದವಿ ಪ್ರವೇಶಾತಿ ನಿರಾಕರಿಸಿರುವ ಎನ್‌ಎಲ್‌ಎಸ್‌ಯು ಕ್ರಮ ಪ್ರಶ್ನಿಸಿ ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿ ಮುಗಿಲ್ ಅನ್ಬು ವಸಂತ್ ಅವರು ಸಲ್ಲಿಸಿರುವ ಅರ್ಜಿಗೆ ಎನ್‌ಎಲ್‌ಎಸ್‌ಯು ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಈ ವಿಚಾರ ಬಹಿರಂಗಪಡಿಸಿದೆ.

ಎನ್‌ಎಲ್‌ಎಸ್‌ಯು ಮೀಸಲಾತಿ ಪ್ರಕಾರ, ಪರಿಶಿಷ್ಟ ಜಾತಿಯವರೆಗೆ ಶೇ.15ರಷ್ಟು, ಪರಿಶಿಷ್ಟ ಪಂಗಂಡದವರಿಗೆ ಶೇ.7.5ರಷ್ಟು, ಹಿಂದುಳಿದ ವರ್ಗದವರಿಗೆ ಶೇ.27ರಷ್ಟು, ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು, ಶೇ.5ರಷ್ಟು ವಿಕಲ ಚೇತನರಿಗೆ ಶೇ.30ರಷ್ಟು ಮಹಿಳೆಗೆ ಮತ್ತು ಶೇ.25ರಷ್ಟು ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲಾಗುತ್ತಿದೆ. ಹೀಗಾಗಿ, ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸದಿರಲು ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿ ನಿರ್ಧರಿಸಿದೆ. ಮೇಲಾಗಿ, ಮೀಸಲಾತಿಯನ್ನು ಸೂಚಿಸುವುದು ಮತ್ತು ಅನುಷ್ಠಾನಗೊಳಿಸುವುದು ವಿಶ್ವವಿದ್ಯಾಲಯದ ಪರಾಮಾಧಿಕಾರ ಎಂದು ಕರ್ನಾಟಕ ಹೈಕೋರ್ಟ್ ಪ್ರಕರಣವೊಂದರಲ್ಲಿ ಆದೇಶಿಸಿದೆ ಎಂದು ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ.

Also Read
ವಕೀಲಿಕೆ ಮಾಡಿದರೂ ತಾರತಮ್ಯ ಮುಂದುವರೆಯುತ್ತದೇನೋ ಎಂಬ ಅಳುಕಿದೆ: ತೃತೀಯ ಲಿಂಗಿ ಕಾನೂನು ವಿದ್ಯಾರ್ಥಿ ಶಶಿ

ಅಲ್ಲದೇ, ಅರ್ಜಿದಾರರ ಯಾವುದೇ ಹಕ್ಕನ್ನು ವಿಶ್ವವಿದ್ಯಾಲಯವು ಉಲ್ಲಂಘನೆ ಮಾಡಿಲ್ಲ. ಅವರ ವಿಚಾರದಲ್ಲಿ ತಾರತಮ್ಯ ನೀತಿ ಸಹ ಅನುಸರಿಸಿಲ್ಲ. ಎನ್‌ಎಲ್‌ಎಸ್‌ಟಿ-ಎಲ್‌ಎಲ್‌ಬಿ 2023ರ ಮಾರ್ಗಸೂಚಿಯಲ್ಲಿ ಕಾನೂನು ಪದವಿ ಪ್ರವೇಶಾತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲು ಒದಗಿಸುವ ಬಾಧ್ಯತೆ ಹೊಂದಿಲ್ಲ. ಲೈಂಗಿಕ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ಕಾಯಿದೆ-2019 ಮತ್ತು ಲೈಂಗಿಕ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ಅಧಿನಿಯಮಗಳು-2020ರ ಪ್ರಕಾರ ತೃತೀಯ ಲಿಂಗಕ್ಕೆ ಸೇರಿದ ವ್ಯಕ್ತಿಗಳಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವುದಿಲ್ಲ. ಆದರೆ ಅವರ ಪ್ರವೇಶ, ಒಳಗೊಳ್ಳುವಿಕೆ ಮತ್ತು ಖಚಿತಪಡಿಸಿಕೊಳ್ಳಲು ವಿವಿಧ ಕ್ರಮಗಳನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಬೆಂಬಲಿಸಲು ‘ಪ್ರಗತಿಪರವಾದ ಲಿಂಗ ನೀತಿ’ ಜಾರಿಗೆ ತಂದಿದೆ ಎಂದು ಹೇಳಿಕೊಂಡಿದೆ.

ಈ ಆಕ್ಷೇಪಣೆ ಹೇಳಿಕೆ ದಾಖಲಿಸಿಕೊಂಡ ನ್ಯಾಯಮೂರ್ತಿ ಅಶೋಕ್ ಎ.ಕಿಣಗಿ ಅವರ ನೇತೃತ್ವದ ಏಕಸದಸ್ಯ ಪೀಠವು ಪ್ರಕರಣ ಸಂಬಂಧ ಉತ್ತರ ನೀಡಲು ರಾಜ್ಯ ಸರ್ಕಾರಕ್ಕೆ ಒಂದು ವಾರ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿದೆ.

Kannada Bar & Bench
kannada.barandbench.com