

ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವೇಷ ಕೊನೆಗೊಳ್ಳಬೇಕು ಎಂದು ಬಯಸುವುದು ದೇಶದ್ರೋಹದ ಅಪರಾಧವಾಗದು ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಅಭಿಷೇಕ್ ಮತ್ತು ಹಿಮಾಚಲ ಪ್ರದೇಶ ಸರ್ಕಾರ ನಡುವಣ ಪ್ರಕರಣ]
ಫೇಸ್‌ಬುಕ್‌ನಲ್ಲಿ ನಿಷೇಧಿತ ಶಸ್ತ್ರಾಸ್ತ್ರಗಳ ಚಿತ್ರಗಳು, ಪಾಕಿಸ್ತಾನದ ಧ್ವಜ ಹಾಗೂ ವಿವಾದಾಸ್ಪದ ಪೋಸ್ಟ್‌ಗಳನ್ನು ಪ್ರಕಟಿಸಿದ ಆರೋಪ ಎದುರಿಸುತ್ತಿದ್ದ ಅಭಿಷೇಕ್ ಸಿಂಗ್ ಭಾರದ್ವಾಜ್ ಅವರಿಗೆ ಜಾಮೀನು ನೀಡುವ ವೇಳೆ ನ್ಯಾಯಮೂರ್ತಿ ರಾಕೇಶ್ ಕೈಂತ್ಲಾ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಆರೋಪಿ ಅಭಿಷೇಕ್ ಸಿಂಗ್ ಭಾರದ್ವಾಜ್ ಮೇಲೆ ಪಾಕಿಸ್ತಾನಿ ಪ್ರಜೆಯೊಂದಿಗೆ ಸಂವಹನ ನಡೆಸಿದ್ದು ಕಳೆದ ವರ್ಷ ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ದಾಳಿ ನಂತರ ಭಾರತ ಆರಂಭಿಸಿದ್ದ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆಯನ್ನು ಟೀಕಿಸಿದ ಆರೋಪವೂ ಆತನ ಮೇಲಿತ್ತು.
ಆದರೆ ಆತ ಭಾರತ ಸರ್ಕಾರದ ವಿರುದ್ಧ ದ್ವೇಷ ಅಥವಾ ಅಸಮಾಧಾನ ವ್ಯಕ್ತಪಡಿಸಿದ ಆರೋಪ ಎಫ್‌ಐಆರ್‌ನಲ್ಲಿ ಇಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು.
“ಚಿತ್ರಗಳು ಮತ್ತು ವಿಡಿಯೋಗಳನ್ನು ಹೊಂದಿದ್ದ ಪೆನ್ ಡ್ರೈವ್‌ನ್ನು ನಾನು ಸಹ ಪರಿಶೀಲಿಸಿದ್ದೇನೆ. ಪ್ರಾಥಮಿಕವಾಗಿ, ಅರ್ಜಿದಾರನು ಯಾರೋ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸಿದ್ದು ಇಬ್ಬರೂ ಭಾರತ–ಪಾಕಿಸ್ತಾನ ನಡುವಿನ ದ್ವೇಷವನ್ನು ಟೀಕಿಸಿದ್ದಾರೆ ಎಂಬುದು ಆ ಸಂದೇಶಗಳಿಂದ ತಿಳಿದುಬರುತ್ತದೆ. ಧರ್ಮವನ್ನು ಲೆಕ್ಕಿಸದೆ ಎಲ್ಲರೂ ಒಟ್ಟಾಗಿ ಬದುಕಬೇಕು ಹಾಗೂ ಯುದ್ಧ ಯಾವುದೇ ಫಲಪ್ರದ ಉದ್ದೇಶ ಈಡೇರಿಸದು ಎಂದು ಅವರು ವಾದಿಸಿದ್ದಾರೆ. ದ್ವೇಷ ಕೊನೆಗಾಣಿಸಿ ಶಾಂತಿಯತ್ತ ಮರಳಬೇಕೆಂಬ ಆಶಯ ಹೇಗೆ ದೇಶದ್ರೋಹವಾಗುತ್ತದೆ ಎನ್ನುವುದು ಅರ್ಥವಾಗದ ವಿಚಾರ” ಎಂದು ನ್ಯಾಯಾಲಯ ಸರ್ಕಾರದ ಕಿವಿ ಹಿಂಡಿದೆ.
ಆರೋಪಿಯ ಮನೆ ಶೋಧಿಸಿದ್ದ ಪೊಲೀಸರಿಗೆ ಅಕ್ರಮ ವಸ್ತುಗಳು ಕಂಡುಬಂದಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ಗಳು ಮತ್ತು ಸಂದೇಶಗಳ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್ 152ರ ಅಡಿಯಲ್ಲಿ (ಐಪಿಸಿಯಲ್ಲಿದ್ದ ದೇಶದ್ರೋಹ ಕಲಂಗೆ ಬದಲಿಗೆ ಜಾರಿಗೆ ಬಂದಿರುವ ಸೆಕ್ಷನ್) ಪ್ರಕರಣ ದಾಖಲಿಸಲಾಗಿತ್ತು.
ವ್ಯಕ್ತಿಯ ಹೆಸರಿನೊಂದಿಗೆ ನಿಷೇಧಿತ ಶಸ್ತ್ರಾಸ್ತ್ರಗಳನ್ನು ತೋರಿಸುವ ವಿಷಯವನ್ನು ಕೇವಲ ಪೋಸ್ಟ್ ಮಾಡಿದ ಮಾತ್ರಕ್ಕೆ ದೇಶದ್ರೋಹದ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯ ಜನವರಿ 1ರಂದು ನೀಡಿದ ಜಾಮೀನು ಆದೇಶದಲ್ಲಿ ತಿಳಿಸಿದೆ.
ಆರೋಪಿ ‘ಖಾಲಿಸ್ತಾನ್ ಜಿಂದಾಬಾದ್ʼ ಎಂಬ ಘೋಷಣೆ ಕೂಗಿದ್ದಾನೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಲಯ ಫೋನ್‌ನಲ್ಲಿ ದೊರೆತ ಮಾಹಿತಿಯಲ್ಲಿ ಅಂತಹ ಯಾವುದೇ ಘೋಷಣೆ ಪತ್ತೆಯಾಗಿಲ್ಲ ಎಂದಿದೆ. 'ಖಲಿಸ್ತಾನ್ ಜಿಂದಾಬಾದ್' ನಂತಹ ಘೋಷಣೆಗಳನ್ನು ಪೋಸ್ಟ್ ಮಾಡುವುದು ಮೇಲ್ನೋಟಕ್ಕೆ ಯಾವುದೇ ಅಪರಾಧವಾಗದು ಎಂತಲೂ ಅದು ಹೇಳಿದೆ.
ಘೋಷಣೆಗಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸುವ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗಿದೆ ಅಥವಾ ದ್ವೇಷಕ್ಕೆ ಕುಮ್ಮಕ್ಕು ನೀಡಲಾಗಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಸಾಕ್ಷ್ಯವಿಲ್ಲ. ಆದ್ದರಿಂದ, ಕೇವಲ ಘೋಷಣೆಗಳನ್ನು ಪ್ರಕಟಿಸಿದ ಮಾತ್ರಕ್ಕೆ ಮೇಲ್ನೋಟಕ್ಕೆ ಅಪರಾಧವಾಗುವುದಿಲ್ಲ ಎಂದು ಅದು ತಿಳಿಸಿತು. ಪ್ರಕರಣದಲ್ಲಿ ಈಗಾಗಲೇ ಆರೋಪಪಟ್ಟಿ ಸಲ್ಲಿಕೆಯಾಗಿರುವುದನ್ನು ಪರಿಗಣಿಸಿದ ಪೀಠ ಆರೋಪಿಯನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು.
[ತೀರ್ಪಿನ ಪ್ರತಿ]