ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಸಾಲ ಮರುಪಾವತಿ ಮುಂದೂಡಿಕೆ ಸೌಲಭ್ಯವನ್ನು (ಮೊರಟೊರಿಯಂ) ಆರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ವಿಸ್ತರಿಸುವುದು ಅಸಮರ್ಥನೀಯ ಮತ್ತು ಇದರಿಂದ ಸಾಲ ನೀಡಿಕೆದಾರರಿಗೆ ಸಮಸ್ಯೆಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್‌ನಲ್ಲಿ ತಿಳಿಸಿದೆ.
ಮೊರಟೊರಿಯಂ ಅವಧಿಯನ್ನು ಆರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ವಿಸ್ತರಿಸಿದರೆ ಅದು ಒಟ್ಟಾರೆ ಸಾಲದ ಶಿಸ್ತಿಗೆ ಸಮಸ್ಯೆ ಉಂಟು ಮಾಡಲಿದೆ. ಅಲ್ಲದೇ, ಸುದೀರ್ಘ ಮೊರಟೊರಿಯಂ ಸಾಲಪಡೆಯುವವರಲ್ಲಿನ ಸಾಲದೆಡೆಗಿನ ವರ್ತನೆಯ ಮೇಲೆ ಪರಿಣಾಮ ಬೀರಬಹುದಾಗಿದೆ. ಇದು ಮುಂದೆ ನಿಗದಿತ ಸಾಲ ಪಾವತಿ ಪುನಾರಂಭವಾದಾಗ ಸಾಲ ಮರುಪಾವತಿಯಲ್ಲಿ ಅಪರಾಧಿಕ ಸವಾಲುಗಳು ಉದ್ಭವಿಸಲು ಕಾರಣವಾಗಬಹುದು. ಇದರ ಪರಿಣಾಮ ಸಣ್ಣ ಸಾಲಗಾರರ ಮೇಲಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ ಎಂದು ಅದು ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.
“ಒಟ್ಟಾರೆ ಸಾಲದ ಶಿಸ್ತಿಗೆ ಇದು ಸಮಸ್ಯೆ ಉಂಟು ಮಾಡಬಹುದಾಗಿದ್ದು, ಆರ್ಥಿಕತೆಯಲ್ಲಿ ಸಾಲ ಸೃಷ್ಟಿಯ ಪ್ರಕ್ರಿಯೆಯನ್ನು ಇದು ದುರ್ಬಲಗೊಳಿಸುತ್ತದೆ. ಇದರ ಪರಿಣಾಮವನ್ನು ಎದುರಿಸುವವರು ಸಣ್ಣ ಸಾಲಗಾರರಾಗಿರುತ್ತಾರೆ. ಏಕೆಂದರೆ ಸಾಂಪ್ರದಾಯಿಕ ಸಾಲ ವ್ಯವಸ್ಥೆಯೆಡೆಗಿನ ಅವರ ಅವಲಂಬನೆಯು ಸಾಲ ಸಂಸ್ಕೃತಿಯನ್ನು ಬಹುವಾಗಿ ಅವಲಂಬಿಸಿರುತ್ತದೆ," ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಮೊರಟೊರಿಯಂ ಸಕ್ರಿಯವಾಗಿಡುವುದರಿಂದ ಹಣದ ಹರಿವಿಗೆ ಸಂಬಂಧಿಸಿದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಗದು. ಬದಲಾಗಿ ಇದು ಸಾಲ ಪಡೆಯುವವರ ಸಮಸ್ಯೆ ಹೆಚ್ಚಿಸಲಿದೆ ಎಂದು ಆರ್‌ಬಿಐ ಹೇಳಿದೆ. ಈ ಹಿನ್ನೆಲೆಯಲ್ಲಿ ಸಾಲಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸುಸ್ಥಿರ ಮತ್ತು ದೀರ್ಘಾವಧಿಯ ಪರಿಹಾರ ಕಂಡುಕೊಳ್ಳುವುದು ಅಗತ್ಯ ಎಂದು ಆರ್‌ಬಿಐ ಹೇಳಿದೆ.
ಚಕ್ರಬಡ್ಡಿಯ ಮನ್ನಾಕ್ಕೆ ಒಪ್ಪಿಗೆ ಸೂಚಿಸಿದರೆ ಬ್ಯಾಂಕ್‌ಗಳು ಈ ಸಮಸ್ಯೆಯನ್ನು ಪರಿಹರಿಸಲಾಗದ ಸ್ಥಿತಿ ತಲುಪಲಿವೆ. ಬ್ಯಾಂಕ್‌ಗಳು ಹಣಕಾಸು ವಹಿವಾಟಿನ ಹೊಂದಾಣಿಕೆಗೆ ಮುಂದಾಗುವುದರಿಂದ ಠೇವಣಿದಾರರು ಮತ್ತು ವಿಸ್ತೃತ ಆರ್ಥಿಕ ಸ್ಥಿರತೆಯ ಮೇಲೆ ಅಗಾಧ ಪರಿಣಾಮ ಬೀರಲಿದೆ ಎಂದು ಆರ್‌ಬಿಐ ಹೇಳಿದೆ.
“ವಿಸ್ತೃತ ವಿಧಾನದ ಮೂಲಕ ಸಮಸ್ಯೆ ಪರಿಹರಿಸುವುದಕ್ಕೆ ಬದಲಾಗಿ ಅವಶ್ಯಕತೆಗೆ ತಕ್ಕಂತೆ ಪ್ರತಿಯೊಬ್ಬ ಸಾಲಗಾರನ ನಿರ್ದಿಷ್ಟ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಬ್ಯಾಂಕುಗಳು ಪ್ರಯತ್ನಿಸಬಹುದು” ಎಂದು ಆರ್‌ಬಿಐ ಹೇಳಿದ್ದು ಪರೋಕ್ಷವಾಗಿ ಇದು ವಲಯವಾರು ಪರಿಹಾರ ಕೋರಿದ್ದ ಅರ್ಜಿಗಳ ಪ್ರಶ್ನೆಗೆ ಉತ್ತರದಂತಿದೆ.
ಅಲ್ಲದೆ, ಸಾಂಕ್ರಾಮಿಕ ಪೂರ್ವ ಹಾಗೂ ಸಾಂಕ್ರಾಮಿಕತೆಯ ನಂತರ ತೊಂದರೆಗೆ ಸಿಲುಕಿರುವ ಸಾಲಗಾರರ ನಡುವಿನ ವ್ಯತ್ಯಾಸದೆಡೆಗೂ ಆರ್‌ಬಿಐ ತನ್ನ ಅಫಿಡವಿಟ್‌ನಲ್ಲಿ ಬೆರಳು ಮಾಡಿದೆ. "ಈ ಮುಂಚೆಯೇ ಆರ್ಥಿಕ ಒತ್ತಡಕ್ಕೆ ತುತ್ತಾಗಿದ್ದ ಹಾಗೂ ಸಾಂಕ್ರಾಮಿಕತೆಯ ಸಂಕಷ್ಟದ ಪರಿಣಾಮಕ್ಕೂ ಈಡಾದ ಖಾತೆ ಹಾಗೂ ಕೇವಲ ಈ ಹಿಂದೆ ಯಾವುದೇ ಆರ್ಥಿಕ ಒತ್ತಡವಿರದ ಆದರೆ ಸಾಂಕ್ರಾಮಿಕತೆಯ ಪರಿಣಾಮಕ್ಕೆ ತುತ್ತಾದ ಖಾತೆ ಇವೆರಡರ ಋಣಚಿತ್ರಣ ಬೇರೆಯದೇ ಅಗಿರುತ್ತದೆ. ಈ ಇಬ್ಬರು ಸಾಲಗಾರರನ್ನೂ ಏಕರೂಪವಾಗಿ ಕಾಣುವುದು ಆರ್ಥಿಕ ಸಂವೇದನೆಯನ್ನು ಪೂರ್ಣವಾಗಿ ಬದಿಗೆ ಸರಿಸಿದಂತೆ." ಎಂದು ಅದು ತಿಳಿಸಿದೆ.
“ಸಂಕಷ್ಟ ಸೂತ್ರಗಳು (ರೆಸಲ್ಯೂಷನ್ ಪ್ಲ್ಯಾನ್) ಅಂತಿಮವಾಗಿ ಸಾಲ ನೀಡುವ ಸಂಸ್ಥೆಗಳ ವಾಣಿಜ್ಯ ನಿರ್ಧಾರಗಳಾಗಿದ್ದು, ನಿಯಮಗಳ ಮೂಲಕ ಅವುಗಳನ್ನು ಆರ್‌ಬಿಐ ಕಡ್ಡಾಯಗೊಳಿಸಲಾಗದು” ಎಂದು ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದೆ.
ಬ್ಯಾಂಕಿಂಗ್ ನಿಯಂತ್ರಣಗಳ ಮೂಲಕ ವಿವಿಧ ಕ್ಷೇತ್ರಗಳಲ್ಲಿನ ರಾಚನಿಕ ಸಮಸ್ಯೆ ಮತ್ತು ಕುಂದುಕೊರತೆಗಳನ್ನು ಬಗೆಹರಿಸಲಾಗದು ಎಂದೂ ಆರ್‌ಬಿಐ ತನ್ನ ಅಫಿಡವಿಟ್‌ನಲ್ಲಿ ಸ್ಪಷ್ಟವಾಗಿ ಹೇಳಿದೆ.
ಮೊರಟೊರಿಯಂ ಕುರಿತ ವಿಚಾರಣೆ ವೇಳೆ ಸಾಲದ ಖಾತೆಗಳನ್ನು ಎನ್‌ಪಿಎ ಎಂದು ಪರಿಗಣಿಸದಂತೆ ಕೋರಿ ಅರ್ಜಿದಾರರು ಮಾಡಿದ್ದ ಮನವಿಗೆ ಸ್ಪಂದಿಸಿದ್ದ ನ್ಯಾಯಾಲಯವು ಈ ಸಂಬಂಧ ಯಾವುದೇ ಸಾಲದ ಖಾತೆಗಳನ್ನು ಎನ್‌ಪಿಎ (ಅನುತ್ಪಾದಕ) ಎಂದು ವರ್ಗೀಕರಿಸದಂತೆ ಬ್ಯಾಂಕುಗಳಿಗೆ ತಡೆ ನೀಡಿತ್ತು. ಈ ಬಗ್ಗೆಯೂ ಅಫಿಡವಿಟ್‌ನಲ್ಲಿ ಉಲ್ಲೇಖವಾಗಿದ್ದು, ಆರ್‌ಬಿಐ ಹೀಗೆ ಹೇಳಿದೆ:
“ಒಂದೊಮ್ಮೆ ತಡೆಯಾಜ್ಞೆಯನ್ನು ತೆರವುಗೊಳಿಸದೆ ಹೋದಲ್ಲಿ, ಅದು ರಿಸರ್ವ್ ಬ್ಯಾಂಕ್‌ನ ನಿಯಂತ್ರಣ ಅಧಿಕಾರವನ್ನು ಉಪೇಕ್ಷಿಸುವುದು ಮಾತ್ರವೇ ಅಲ್ಲದೆ, ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಅಗಾಧ ಪರಿಣಾಮವನ್ನು ಬೀರಲಿದೆ” ಎಂದಿದೆ.
ಮನವಿದಾರರ ಎಲ್ಲಾ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಪರಿಹಾರ ಕ್ರಮಕೈಗೊಂಡಿರುವುದರಿಂದ ಅರ್ಜಿಗಳು ವಜಾ ಮಾಡಲು ಅರ್ಹವಾಗಿದೆ ಎಂದು ಆರ್‌ಬಿಐ ಹೆಚ್ಚುವರಿ ಅಫಿಡವಿಟ್‌ನಲ್ಲಿ ಪ್ರತಿಪಾದಿಸಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಮುಂದಿನ ವಾರ ನಡೆಸಲಿದೆ.