ನ್ಯಾಯಾತಿರಿಕ್ತ ತಪ್ಪೊಪ್ಪಿಗೆ ಸಾಕ್ಷಿಯು ದುರ್ಬಲ ಸಾಕ್ಷ್ಯವಾಗಿದ್ದು ಅದರಲ್ಲಿಯೂ ಅದನ್ನು ವಿಚಾರಣೆ ವೇಳೆ ಹಿಂತೆಗೆದುಕೊಂಡರೆ ಅದು ಅತ್ಯಂತ ದುರ್ಬಲ ಸಾಕ್ಷಿಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ [ಇಂದ್ರಜಿತ್ ದಾಸ್ ಮತ್ತು ತ್ರಿಪುರ ಸರ್ಕಾರ ನಡುವಣ ಪ್ರಕರಣ].
ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾತಿರಿಕ್ತ ತಪ್ಪೊಪ್ಪಿಗೆ ಸಾಕ್ಷಿಯನ್ನು ಅವಲಂಬಿಸಬೇಕಾದರೆ ಅಂತಹ ಸಾಕ್ಷ್ಯವನ್ನು ದೃಢೀಕರಿಸಲು ಬಲವಾದ ಪುರಾವೆಗಳ ಅಗತ್ಯ ಇದೆ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ವಿಕ್ರಮ್ ನಾಥ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.
"ನ್ಯಾಯಾತಿರಿಕ್ತ ತಪ್ಪೊಪ್ಪಿಗೆ ಸಾಕ್ಷಿಯು, ಅದರಲ್ಲಿಯೂ ವಿಶೇಷವಾಗಿ ವಿಚಾರಣೆ ವೇಳೆ ಅದನ್ನು ಹಿಂಪಡೆದಂತಹ ಸಂದರ್ಭದಲ್ಲಿ ಅದು ದುರ್ಬಲ ಸಾಕ್ಷಿಯಾಗುತ್ತದೆ. ಅದನ್ನು ದೃಢೀಕರಿಸಲು ಬಲವಾದ ಪುರಾವೆಗಳ ಅಗತ್ಯವಿದ್ದು ಅದು ಸಂಪೂರ್ಣವಾಗಿ ಸ್ವಯಂಪ್ರೇರಿತ ಮತ್ತು ಸತ್ಯದಿಂದ ಕೂಡಿದೆ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ" ಎಂದು ತೀರ್ಪು ಹೇಳಿದೆ.
ಸ್ನೇಹಿತನ ಕೊಲೆ ಆರೋಪ ಹೊತ್ತಿದ್ದ ವ್ಯಕ್ತಿಯ ಶಿಕ್ಷೆಯನ್ನು ರದ್ದುಗೊಳಿಸುವಾಗ ನ್ಯಾಯಾಲಯ ಈ ವಿಚಾರ ತಿಳಿಸಿದೆ. ಆರೋಪಿ ದೋಷಿ ಎಂದು ವಿಚಾರಣಾ ನ್ಯಾಯಾಲಯ ಮತ್ತು ತ್ರಿಪುರಾ ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿದ್ದವು.
ಆದರೆ ಪ್ರಾಸಿಕ್ಯೂಷನ್ ಸಾಂದರ್ಭಿಕ ಸಾಕ್ಷಿಯನ್ನು ಅವಲಂಬಿಸಿತ್ತು. ಕೃತ್ಯವನ್ನು ಯಾವುದೇ ಸಾಕ್ಷಿಗಳು ನೇರವಾಗಿ ನೋಡಿರಲಿಲ್ಲ ಅಥವಾ ಮೃತ ವ್ಯಕ್ತಿಯ ದೇಹ ಪತ್ತೆಯಾಗಿರಲಿಲ್ಲ.
ಹಿಂದಿನ ದಿನ ಇಬ್ಬರು ಸ್ನೇಹಿತರೊಂದಿಗೆ ಬೈಕ್‌ನಲ್ಲಿ ತೆರಳಿದ್ದ ತನ್ನ ಸೋದರ ಸಂಬಂಧಿ ನಾಪತ್ತೆಯಾಗಿದ್ದಾನೆ ಎಂದು ಮೃತ ವ್ಯಕ್ತಿಯ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದರು. ಅದೇ ವೇಳೆ ರಸ್ತೆಯಲ್ಲಿ ಅಪಾರ ಪ್ರಮಾಣದ ರಕ್ತ ಚೆಲ್ಲಿದ್ದು, ಮೋಟಾರ್ ಸೈಕಲ್ ಹಿಂಬದಿಯ ಕನ್ನಡಿಯ ಛಿದ್ರಗೊಂಡ ಗಾಜು ಮತ್ತು ರಕ್ತಸಿಕ್ತ ಚಾಕುವೊಂದು ಪತ್ತೆಯಾಗಿತ್ತು.
ಬಳಿಕ ಪೊಲೀಸರು ಪ್ರಕರಣದ ಮೇಲ್ಮನವಿದಾರ ಹಾಗೂ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದರು. ಇದರಲ್ಲಿ ಬಾಲಕ ತಾನು ಮೃತ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಆತನ ವಸ್ತುಗಳನ್ನು ಹತ್ತಿರದ ಕಾಡಿನಲ್ಲಿ ಎಸೆದು, ಮೃತದೇಹ ಹಾಗೂ ಮೋಟರ್ ಸೈಕಲ್ ಅನ್ನು ನದಿಯಲ್ಲಿ ಎಸೆದು ಬಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದ ಎನ್ನಲಾಗಿತ್ತು.
ಮೇಲ್ಮನವಿದಾರರ ವಿರುದ್ಧ ಪ್ರಕರಣವನ್ನು ಪ್ರಾಸಿಕ್ಯೂಷನ್ ಉತ್ತಮ ರೀತಿಯಲ್ಲಿ ಸಾಬೀತುಪಡಿಸಿದೆ ಎಂದು ತಿಳಿಸಿ ಮೇಲ್ಮನವಿದಾರನಿಗೆ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣ ಸಾಂದರ್ಭಿಕ ಸಾಕ್ಷಿಯನ್ನು ಒಳಗೊಂಡಿದ್ದು ಕೃತ್ಯ ನಡೆದಿದ್ದನ್ನು ಯಾರೂ ನೋಡಿಲ್ಲ. ಅಲ್ಲದೆ, ಕೃತ್ಯದ ಉದ್ದೇಶವನ್ನು ವಿವರಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲ. ದೇಹವು ದೊರೆತಿಲ್ಲ. ಮೃತ ವ್ಯಕ್ತಿಯ ದೇಹದ ಕಾಲು ಎನ್ನಲಾದ ಅಂಗವನ್ನು ಡಿಎನ್‌ಎ ಪರೀಕ್ಷೆಯ ಮೂಲಕ ಮೃತ ವ್ಯಕ್ತಿಯದ್ದೇ ಎಂದು ಸಾಬೀತು ಪಡಿಸಿಲ್ಲ ಎನ್ನುವ ಅಂಶಗಳನ್ನು ನ್ಯಾಯಾಲಯವು ಗಮನಿಸಿತು. ಪ್ರಕರಣದ ತನಿಖೆಯಲ್ಲಿ ಗಂಭೀರ ಲೋಪಗಳಿರುವುದನ್ನು ಗಣನೆಗೆ ತೆಗೆದುಕೊಂಡಿತು.
ಆರೋಪಿಗಳ ನ್ಯಾಯಾತಿರಿಕ್ತ ತಪ್ಪೊಪ್ಪಿಗೆ ಸಾಕ್ಷ್ಯವನ್ನು ಪುರಾವೆ ಸಹಿತ ನಿರೂಪಿಸಲಾಗಿಲ್ಲ ಹಾಗೂ ಪ್ರಾಸಿಕ್ಯೂಷನ್ ಪ್ರಸ್ತುತ ಪಡಿಸಿರುವ ಸಾಕ್ಷಿಯು (ಮೃತನ ತಾಯಿ) ತಪ್ಪೊಪ್ಪಿಗೆ ಸಾಕ್ಷ್ಯದೊಂದಿಗಿನ ಹೋಲಿಕೆಯಲ್ಲಿ ಅಸ್ಥಿರತೆಯಿಂದ ಕೂಡಿದೆ ಎಂದು ಹೇಳಿ ಅರ್ಜಿದಾರರನ್ನು ಖುಲಾಸೆಗೊಳಿಸಿತು.