ಸಾಲ ಮರುಪಾವತಿಸಲು ವಿಫಲ: ಶಾಲಾ ಕಟ್ಟಡ ಹರಾಜಿನ ನಡುವೆಯೂ ಅಲ್ಲಿಯೇ ವಿದ್ಯಾಭ್ಯಾಸಕ್ಕೆ ಹೈಕೋರ್ಟ್‌ ಆದೇಶ

ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವೇ? ತಾತ್ಕಾಲಿಕ ಕ್ರಮವಾಗಿ ತರಗತಿಗಳನ್ನು ನಡೆಸುತ್ತಿರುವಾಗ ಶಾಲಾ ಕಟ್ಟಡವನ್ನು ಹರಾಜಿಗೆ ಇಡಬಹುದೇ? ಮುಂತಾದ ವಿಷಯಗಳ ಕುರಿತು ಪರಿಶೀಲನೆ ನಡೆಸಬೇಕಿದೆ ಎಂದಿರುವ ನ್ಯಾಯಾಲಯ.
Karnataka High Court
Karnataka High Court

ಸಾಲ ಮರುಪಾವತಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಶಾಲಾ ಕಟ್ಟಡ ಮತ್ತು ಜಾಗವನ್ನು ಹರಾಜು ಹಾಕಲು ಮುಂದಾದ ಪರಿಣಾಮ ತರಗತಿ ಹೊರಗೆ ತೆರೆದ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬೆಂಗಳೂರಿನ ನೆಲಮಂಗಲದ ಕಣ್ವ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಕಟ್ಟಡದ ತರಗತಿಯೊಳಗೆ ಕುಳಿತು ವಿದ್ಯಾಭಾಸ ಮುಂದುವರಿಸಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.

ನೆಲಮಂಗಲದಲ್ಲಿ ಕಣ್ವ ಎಜುಕೇಷನ್ ಟ್ರಸ್ಟ್ ನಡೆಸುತ್ತಿರುವ ಕಣ್ವ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಪೋಷಕರಾದ ಎಂ ಆರ್ ಹರೀಶ್, ಸಿದ್ದಪ್ಪ ಮತ್ತು ಮೊಹಮ್ಮದ್ ಹಸೀಬುಲ್ಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

“ಮಕ್ಕಳು ದೇಶದ ಭವಿಷ್ಯ. ಅವರು ತೆರೆದ ಪ್ರದೇಶದಲ್ಲಿ ಕೂತು ಬಿಸಿಲು ಮತ್ತು ಮಳೆಗೆ ಮೈಯೊಡ್ಡುವಂತಾಗಬಾರದು. ಈಗಾಗಲೇ ಮುಂಗಾರು ಆರಂಭವಾಗಿದೆ. ಅಬ್ಬರದ ಮಳೆ ಭೀತಿಯೊಂದಿಗೆ ತೆರೆದ ಪ್ರದೇಶದಲ್ಲಿ ನೂರಾರು ಅಮಾಯಕ ಮಕ್ಕಳು ಕೂತಿರುವುದನ್ನು ಕಂಡು ನ್ಯಾಯಾಲಯ ಮೂಕ ಪ್ರೇಕ್ಷಕನಂತೆ ಇರಲು ಸಾಧ್ಯವಿಲ್ಲ” ಎಂದು ಹೈಕೋರ್ಟ್‌ ಹೇಳಿತು. ಮುಂದುವರೆದು, “ಕೂಡಲೇ ಮಕ್ಕಳು ಶಾಲಾ ತರಗತಿಯಲ್ಲಿ ಕೂತು ವಿದ್ಯಾಭ್ಯಾಸ ಮುಂದುವರಿಸಲು ಅನುಮತಿ ನೀಡಬೇಕು” ಎಂದು ಬ್ಯಾಂಕಿಗೆ ಮಧ್ಯಂತರ ನಿರ್ದೇಶನ ನೀಡಿದೆ.

“ಶಾಲಾ ಆಡಳಿತ ಮಂಡಳಿಯು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಬಾಕಿ ಉಳಿಸಿಕೊಂಡಿರುವ ವೇತನವನ್ನು ಪಾವತಿಸಬೇಕು. ಈ ಆದೇಶದ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂದು ನಿರ್ದೇಶಿಸಿದೆ.

“ಇದೇ ವೇಳೆ ಸಾಲ ವಸೂಲಾತಿಗಾಗಿ ಭದ್ರತಾ ಖಾತರಿಯಾಗಿ ಕಣ್ವ ಎಜುಕೇಷನ್ ಟ್ರಸ್ಟ್ ಮತ್ತು ಕಣ್ವ ಗಾರ್ಮೆಂಟ್ಸ್ ಒದಗಿಸಿರುವ ಮತ್ತೊಂದು ತುಮಕೂರಿನ ಆಸ್ತಿಯನ್ನು ಹರಾಜು ಹಾಗೂ ಮಾರಾಟ ಮಾಡಲು ಬ್ಯಾಂಕ್ ಅಗತ್ಯ ಕ್ರಮ ಜರುಗಿಸಬಹುದು. ಆ ಆಸ್ತಿಯನ್ನು ಹರಾಜು ಹಾಕಿ, ಅದರಿಂದ ಬರುವ ಹಣವನ್ನು ಸಾಲ ಮರುಪಾವತಿಗೆ ವಿನಿಯೋಗಿಸುವವರೆಗೆ ನೆಲಮಂಗಲದ ಕಟ್ಟಡದಿಂದಲೇ ಶಾಲೆ ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು” ಎಂದು ಪೀಠ ನಿರ್ದೇಶಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್ ಅವರು “ಯಾವುದೇ ಮಾಹಿತಿ ನೀಡದೇ 2023ರ ಏಪ್ರಿಲ್‌ 8ರಂದು ಶಾಲೆಯನ್ನು ಏಕಾಏಕಿ ಮುಚ್ಚಲಾಗಿದೆ. ಈ ಬಗ್ಗೆ ವಿಚಾರಿಸಿದರೆ ಶಾಲಾ ಕಟ್ಟಡವನ್ನು ಸಾಲ ವಸೂಲಾತಿ ಕ್ರಮವಾಗಿ ಬ್ಯಾಂಕ್ ಸ್ವಾಧೀನಪಡಿಸಿಕೊಂಡಿದೆ ಎಂಬುದು ತಿಳಿಯಿತು. ಕಣ್ವ ಗಾರ್ಮೆಂಟ್ಸ್, ಆ ಸಂಸ್ಥೆಗೆ ಸೇರಿದ ಎನ್ ನಂಜುಂಡಯ್ಯ, ಎನ್ ಪ್ರವೀಣ್ ಮತ್ತು ವಿಜಯ್ ಕುಮಾರ್ ಬ್ಯಾಂಕಿನಿಂದ ಸಾಲ ಪಡೆದಿದ್ದರು. ಸಾಲ ಮರು ಪಾವತಿ ಮಾಡಲು ವಿಫಲವಾಗಿದ್ದರು” ಎಂದು ವಿವರಿಸಿದರು.

“ಶಾಲಾ ಕಟ್ಟಡದ ಜೊತೆಗೆ ತುಮಕೂರು ಜಿಲ್ಲೆಯ ಊರ್ಡಿಗೆರೆ ಗ್ರಾಮದ 10 ಎಕರೆಯನ್ನು ಸಾಲ ಮರುಪಾವತಿಗೆ ಭದ್ರತಾ ಖಾತರಿ ನೀಡಲಾಗಿದೆ. ಅರ್ಜಿದಾರರ ಪರ ಸಾಲದ ಮೊತ್ತ 9 ಕೋಟಿ ರೂಪಾಯಿ ಆಗಿದೆ. ಬ್ಯಾಂಕಿನ ಪ್ರಕಾರ 10 ಕೋಟಿ ರೂಪಾಯಿ ಸಾಲ ಮರು ಪಾವತಿ ಮಾಡಬೇಕಿದೆ. ತುಮಕೂರಿನ ಆಸ್ತಿಯು ಸುಮಾರು 15 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಆದರೆ, ಆ ಆಸ್ತಿಗೆ ಕಡಿಮೆ ಮೌಲ್ಯದ ನಿಗದಿಪಡಿಸಲಾಗಿದೆ. ಆ ಆಸ್ತಿ ಮಾರಾಟ ಮಾಡಿ ಬಂದ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಹರಾಜು ಪ್ರಕ್ರಿಯೆ ನಡೆಸಲು ಜೂನ್‌ 24ರಂದು ದಿನಾಂಕ ನಿಗದಿಪಡಿಸಲಾಗಿದೆ. ಹೀಗಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ ಕಾರ್ಯ ನಿರ್ವಹಣೆಗೆ ಅನುಮತಿ ನೀಡಬೇಕು” ಎಂದು ಕೋರಿದರು.

ಬ್ಯಾಂಕಿನ ಪರ ವಕೀಲರು, ನ್ಯಾಯಸಮ್ಮತ ಬೆಲೆಯನ್ನು ಅರಿಯಲು ಪೋಷಕರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಪೀಠಕ್ಕೆ ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಧ್ಯಂತರ ಕ್ರಮಗಳನ್ನು ಸೂಚಿಸಲಾಗಿದೆ. ಇಂತಹ ಪ್ರಕರಣದಲ್ಲಿ ವಿದ್ಯಾರ್ಥಿಗಳು (ಪೋಷಕರ ಮೂಲಕ) ಸಲ್ಲಿಸಿರುವ ಅರ್ಜಿ ವಿಚಾರಣಾ ಯೋಗ್ಯವೇ? ತಾತ್ಕಾಲಿಕ ಕ್ರಮವಾಗಿ ತರಗತಿಗಳನ್ನು ನಡೆಸುತ್ತಿರುವಾಗ ಶಾಲಾ ಕಟ್ಟಡವನ್ನು ಹರಾಜಿಗೆ ಇಡಬಹುದೇ? ಹೌದಾದರೆ, ಯಾವ ಷರತ್ತಿನೊಂದಿಗೆ ಹರಾಜು ಪ್ರಕ್ರಿಯೆ ನಡೆಸಲು ಅನುಮತಿ ನೀಡಬಹುದು? ಎಷ್ಟು ಕಾಲದವರೆಗೆ ಈ ಮಧ್ಯಂತರ ಕ್ರಮಗಳನ್ನು ಮುಂದುವರಿಸಬಹುದು? ಎಂಬುದು ಸೇರಿ ಇನ್ನಿತರ ವಿಚಾರಗಳ ಕೂರಿತು ಕೂಲಂಕಷವಾಗಿ ಪರಿಶೀಲನೆ ನಡೆಸಬೇಕಿದೆ ಎಂದು ತಿಳಿಸಿ ವಿಚಾರಣೆಯನ್ನು ಮುಂದೂಡಿತು.

Related Stories

No stories found.
Kannada Bar & Bench
kannada.barandbench.com