ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ: ಸ್ಥಿತಿಗತಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಅರ್ಹರಿಗೆ ಜಾತಿ ಪ್ರಮಾಣಪತ್ರ ನೀಡಲು ನ್ಯಾಯಾಲಯದಲ್ಲಿರುವ ಪ್ರಕರಣ ಅಡ್ಡಿಯಾಗುವುದಿಲ್ಲ ಎಂದಿರುವ ಹೈಕೋರ್ಟ್‌.
Karnataka High Court
Karnataka High Court
Published on

ನಕಲಿ ಅಥವಾ ಸುಳ್ಳು ಜಾತಿ ಪ್ರಮಾಣ ಪಡೆದುಕೊಂಡ ಎಷ್ಟು ಪ್ರಕರಣಗಳಲ್ಲಿ ಇಲ್ಲಿವರೆಗೆ ನೋಟಿಸ್ ಜಾರಿಗೊಳಿಸಲಾಗಿದೆ ಮತ್ತು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಅಫಿಡವಿಟ್‌ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ಯಾದಗಿರಿ ಜಿಲ್ಲೆಯ ಎಸ್‌ಸಿ-ಎಸ್‌ಟಿ ನಕಲಿ ಜಾತಿ ಪ್ರಮಾಣಪತ್ರಗಳ ತಡೆ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು.

ನಾಯಕ ಜನಾಂಗದ ಪರಿವಾರ ಮತ್ತು ತಳವಾರ ಉಪಪಂಗಡಗಳನ್ನು ಮಾತ್ರ ಎಸ್‌ಟಿ ವರ್ಗಕ್ಕೆ ಸೇರಿಸಲಾಗಿದೆ. ಆದರೆ ಪ್ರವರ್ಗ ಒಂದರಲ್ಲಿ ಬರುವ ಬೆಸ್ತರ ಉಪಜಾತಿಯಾದ ಪರಿವಾರ ಹಾಗೂ ತಳವಾರ ಬೋಯಾ ಉಪಪಂಗಡದವರಿಗೂ ಪರಿಶಿಷ್ಟ ವರ್ಗದ ನಕಲಿ ಜಾತಿ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಅರ್ಜಿದಾರರ ಪರ ವಕೀಲೆ ಅಶ್ವಿನಿ ಓಬಳೇಶ್ ಅವರು “ರಾಜ್ಯದಲ್ಲಿ ಸುಮಾರು 30 ಸಾವಿರ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ವಿತರಿಸಲಾಗಿದೆ ಎಂಬ ಮಾಹಿತಿ ಇದೆ. ಅದರಲ್ಲಿ 10 ಸಾವಿರ ಜಾತಿ ಪ್ರಮಾಣಪತ್ರಗಳನ್ನು ಸರ್ಕಾರದ ವಿಶೇಷ ವಕೀಲರಿಗೆ ಒದಗಿಸಲಾಗಿದೆ. ಕಳೆದ ಏಪ್ರಿಲ್‌ನಲ್ಲಿ ಈ ಜಾತಿ ಪ್ರಮಾಣಪತ್ರಗಳನ್ನು ಕೊಡಲಾಗಿದೆ. ಆದರೆ, ಈವರೆಗೆ ಯಾವುದೇ ಕ್ರಮ ಆಗಿಲ್ಲ. ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರದ ಪರ ವಿಶೇಷ ವಕೀಲರು ಹೇಳುತ್ತಿದ್ದಾರೆ. ಆದರೆ, ನ್ಯಾಯಾಲಯಕ್ಕೆ ದಾಖಲೆ ತೋರಿಸಲು 50-100 ಮಂದಿಗಷ್ಟೇ ನೋಟಿಸ್ ನೀಡಲಾಗಿದೆ” ಎಂದು ಆರೋಪಿಸಿದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರದ ವಿಶೇಷ ವಕೀಲ ಸಿ. ಜಗದೀಶ್ ಅವರು “ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಮೊದಲಿಗೆ ಕಬ್ಬಲಿಗ ಜಾತಿ ಪ್ರಮಾಣ ಪತ್ರ ತೆಗೆದುಕೊಂಡು ಬಳಿಕ ಪರಿವಾರ ನಾಯಕ ಜಾತಿ ಪ್ರಮಾಣ ಪಡೆದುಕೊಂಡವರಿಗೆ ನೋಟಿಸ್ ನೀಡಲಾಗಿದೆ. ಅರ್ಜಿದಾರರು ಜಿಲ್ಲಾಧಿಕಾರಿ ಅಥವಾ ವಿಭಾಗಾಧಿಕಾರಿ ಮುಂದೆ ಹೋಗಬೇಕು. ಅದು ಬಿಟ್ಟು ನೇರವಾಗಿ ಹೈಕೋರ್ಟ್‌ಗೆ ಬಂದಿದ್ದಾರೆ. ನಕಲಿ ಜಾತಿ ಪ್ರಮಾಣಪತ್ರಗಳ ಬಗ್ಗೆ ಮಾಹಿತಿಗಳಿದ್ದರೆ ಕೊಡಲಿ ಎಂದರು.

ಇದಕ್ಕೆ ಅಶ್ವಿನಿ ಅವರು “ಅದು ಸರ್ಕಾರದ ಕೆಲಸ, ಪ್ರಕರಣ ಈಗ ಸರ್ಕಾರದ ಅಂಗಳದಲ್ಲಿದೆ. ನಕಲಿ ಜಾತಿ ಪ್ರಮಾಣಪತ್ರಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕೆಲಸ ಸರ್ಕಾರ ಮಾಡಬೇಕಿದೆ” ಎಂದರು.

Also Read
ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಸಿದರೆ ಬಾಧಿತರು ಕ್ರಿಮಿನಲ್‌ ಪ್ರಕರಣ ದಾಖಲಿಸಬಹುದು: ಹೈಕೋರ್ಟ್‌

ಈ ಮಧ್ಯೆ, ಪ್ರಕರಣ ನ್ಯಾಾಯಾಲಯದಲ್ಲಿ ಇದೆ ಎಂದು ನೆಪ ಹೇಳಿ ಅರ್ಹರಿಗೂ ತಳವಾರ ಜಾತಿ ಪ್ರಮಾಣಪತ್ರ ನೀಡಲಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಮಧ್ಯಂತರ ಅರ್ಜಿ ಸಲ್ಲಿಸಿತು. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿ, ತಮ್ಮನ್ನು ಪ್ರತಿವಾದಿಯನ್ನಾಗಿ ಸೇರಿಸಬೇಕು ಎಂದು ಅರ್ಜಿದಾರರ ಪರ ವಕೀಲ ಎಚ್ ಸುನಿಲ್ ಕುಮಾರ್ ಮನವಿ ಮಾಡಿದರು.

ಮಧ್ಯಂತರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ಪೀಠವು ಅರ್ಹರಿಗೆ ಜಾತಿ ಪ್ರಮಾಣಪತ್ರ ನೀಡಲು ನ್ಯಾಯಾಲಯದಲ್ಲಿರುವ ಪ್ರಕರಣ ಅಡ್ಡಿಯಾಗುವುದಿಲ್ಲ ಎಂದು ಹೇಳಿ ವಿಚಾರಣೆಯನ್ನು ಸೆಪ್ಟೆಂಬರ್‌ 18ಕ್ಕೆ ಮುಂದೂಡಿತು.

Kannada Bar & Bench
kannada.barandbench.com