ನಕಲಿ ವಿಮೆ ಪರಿಹಾರ ದಂಧೆ: ಎಫ್ಐಆರ್ ದಾಖಲಿಸಲು ಮದ್ರಾಸ್ ಹೈಕೋರ್ಟ್ ಆದೇಶ; ತನಿಖೆ ಎಸ್ಐಟಿ ಹೆಗಲಿಗೆ

ತನಿಖೆಗಾಗಿ ನ್ಯಾಯಾಲಯ 2021ರಲ್ಲಿ ವಿಶೇಷ ತನಿಖಾ ತಂಡ ರಚಿಸಲು ಆದೇಶಿಸಿತ್ತು. ನಂತರ ಇನ್ನಷ್ಟು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳನ್ನೂ ಎಸ್ಐಟಿಗೆ ವರ್ಗಾಯಿಸಲು ನಿರ್ದೇಶಿಸಲಾಗಿದೆ.
Madras High Court
Madras High Court
Published on

ಸುಮಾರು ₹105 ಕೋಟಿಗೂ ಹೆಚ್ಚು ಮೌಲ್ಯದ ನಕಲಿ ವಿಮಾ ಪರಿಹಾರ ಆರೋಪಗಳನ್ನು ಒಳಗೊಂಡ 467 ದೂರುಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿಕೊಳ್ಳುಬೇಕು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ [ ಚೋಳಮಂಡಲಂ ಮೆಸರ್ಸ್ ಜನರಲ್ ಇನ್ಶುರೆನ್ಸ್ ಕಂಪನಿ ‌ ಮತ್ತು ಪೊಲೀಸ್ ಮಹಾನಿರ್ದೇಶಕರು ಇನ್ನಿತರರ ನಡುವಣ ಪ್ರಕರಣ ಮತ್ತು ಸಂಬಂಧಿತ ದಾವೆಗಳು].

ಈ ದೂರುಗಳನ್ನು 2021ರಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ರಚಿಸಲಾದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಲಿದೆ ಎಂದು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ತಿಳಿಸಿದರು.

Also Read
ಥರ್ಡ್ ಪಾರ್ಟಿ ಕ್ಲೇಮ್ ಇಲ್ಲದೆಯೂ ವಿಮಾ ಕಂಪೆನಿ ಪರಿಹಾರ ನೀಡಬೇಕೆ? ಉತ್ತರಿಸಲಿದೆ ಸುಪ್ರೀಂ ವಿಸ್ತೃತ ಪೀಠ

“ಪ್ರತಿವಾದಿಗಳು ಆಯಾ ಪೊಲೀಸ್ ಠಾಣೆಗಳಲ್ಲಿ ನೀಡಲಾದ 467 ದೂರುಗಳನ್ನು ದಾಖಲಿಸಿಕೊಂಡು, ಎಫ್‌ಐಆರ್‌ ನೋಂದಾಯಿಸಿಕೊಳ್ಳಬೇಕು. ಆ ಎಲ್ಲಾ ಎಫ್‌ಐಆರ್‌ಗಳನ್ನು ಎಸ್‌ಐಟಿಗೆ ವರ್ಗಾಯಿಸಬೇಕು. ಆದೇಶದ ಪ್ರತಿ ಸ್ವೀಕರಿಸಿದ ದಿನದಿಂದ ನಾಲ್ಕು ವಾರಗಳ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು,” ಎಂದು ಸೆಪ್ಟೆಂಬರ್ 12ರಂದು ನೀಡಿದ ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ಚೋಳಮಂಡಲಂ ಜನರಲ್‌ ವಿಮಾ ಕಂಪೆನಿ ಪತ್ತೆಹಚ್ಚಿದ 120 ಪ್ರಕರಣಗಳ ತನಿಖೆಗಾಗಿ ನ್ಯಾಯಾಲಯ 2021ರಲ್ಲಿ ವಿಶೇಷ ತನಿಖಾ ತಂಡ ರಚಿಸಲು ಆದೇಶಿಸಿತ್ತು. ₹15.63 ಕೋಟಿಗೂ ಹೆಚ್ಚು ಮೌಲ್ಯದ 120 ಪ್ರಕರಣಗಳಲ್ಲಿ ನಕಲಿ ವೈದ್ಯಕೀಯ ಬಿಲ್‌ಗಳು ಸಲ್ಲಿಕೆಯಾಗಿವೆ ಎಂದು ಕಂಪೆನಿ ದೂರಿತ್ತು. ಬೇರೆ ವಿಮಾ ಕಂಪೆನಿಗಳು ಕೂಡ ಇದೇ ಬಗೆಯ ದೂರುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದವು. ಮೋಟಾರು ವಾಹನ ಅಪಘಾತ ವಿಮೆ ಪರಿಹಾರ ಪಡೆಯುವ ನಿಟ್ಟಿನಲ್ಲಿ ನಕಲಿ ಇಲ್ಲವೇ ಹೆಚ್ಚುವರಿ ಬಿಲ್‌ಗಳನ್ನು ಸಲ್ಲಿಸಲಾಗುತ್ತಿದೆ ಎಂದು ದೂರಿದ್ದವು. ಕೆಲವು ಪರಿಹಾರದ ದಾಖಲೆಗಳು ನ್ಯಾಯಾಲಯದಿಂದಲೇ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು.

Also Read
ವಿಮೆ ಅರ್ಜಿಯಲ್ಲಿ ಕಾಲಮ್ ಖಾಲಿ ಬಿಡಲಾಗಿದೆ ಎಂದು ಪರಿಹಾರ ನಿರಾಕರಿಸುವಂತಿಲ್ಲ: ಎನ್‌ಸಿಡಿಆರ್‌ಸಿ

ಈ ಹಿನ್ನೆಲೆಯಲ್ಲಿ ಹೊಸೂರಿನ ಉಪ ನ್ಯಾಯಾಧೀಶರು ಹಾಗೂ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಕಾಣೆಯಾದ ದಾಖಲೆಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ಆದೇಶಿಸಲಾಗಿತ್ತು. ಒಂದು ವೇಳೆ ದಾಖಲೆಗಳು ಪತ್ತೆಯಾಗದಿದದರೆ ಅವುಗಳು ನ್ಯಾಯಾಲಯದ ಆಸ್ತಿಯಾಗಿರುವುದರಿಂದ ಕ್ರಿಮಿನಲ್‌ ದೂರು ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಅಲ್ಲದೆ ಮೋಟಾರು ಅಪಘಾತ ಪ್ರಕರಣಗಳಲ್ಲಿ ವಕೀಲರ ಮಧ್ಯೆಯೇ ಮುಸುಕಿನ ಗುದ್ದಾಟ ನಡೆಯುತ್ತಿರುವುದನ್ನು ಹೈಕೋರ್ಟ್‌ ಗಮನಿಸಿತ್ತು.

ʼಜೈ ಭೀಮ್‌ʼ ಸಿನಿಮಾ ಖ್ಯಾತಿಯ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ ಚಂದ್ರು ಅವರು ಪ್ರಕರಣದ ಎಸ್‌ಐಟಿಯ ನೇತೃತ್ವ ವಹಿಸಿದ್ದರು. ನಂತರದ ವರ್ಷಗಳಲ್ಲಿ ಇನ್ನಷ್ಟು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅವುಗಳನ್ನು ಸಹ ಎಸ್ಐಟಿಗೆ ವರ್ಗಾಯಿಸಲು ಇದೀಗ ನಿರ್ದೇಶಿಸಲಾಗಿದೆ.

Kannada Bar & Bench
kannada.barandbench.com