ಸುಳ್ಳು ಪ್ರಮಾಣ ಪತ್ರ ನೀಡಿ ಪರಿಹಾರ ಪಡೆದಿದ್ದ ಪ್ರಕರಣದಲ್ಲಿ ವಿಮಾ ಕಂಪೆನಿಯ ಮೇಲ್ಮನವಿಯನ್ನು ಪುರಸ್ಕರಿಸಿರುವ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ವೃತ್ತಿಪರ ದುರ್ನಡತೆ ತೋರಿರುವ ವೈದ್ಯರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕರ್ನಾಟಕ ವೈದ್ಯಕೀಯ ಮಂಡಳಿಗೆ ನಿರ್ದೇಶಿಸಿದ್ದು, ಕಾರ್ಮಿಕ ಆಯುಕ್ತರ ಆದೇಶವನ್ನು ಬದಿಗೆ ಸರಿಸಿದೆ.
ದಿ ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ಕೃಷ್ಣ ಭಟ್ ಅವರಿದ್ದ ಏಕಸದಸ್ಯ ಪೀಠವು ಪರಿಹಾರ ನೀಡಲು ಆದೇಶಿಸಿದ್ದ ಹಾವೇರಿ ಕಾರ್ಮಿಕ ಇಲಾಖೆಯ ಆಯುಕ್ತರ ಆದೇಶವನ್ನು ಬದಿಗೆ ಸರಿಸಿತು.
“ಹಾವೇರಿಯ ವಿಮೆದಾರನಿಗೆ ಪರಿಹಾರ ನೀಡುವಂತೆ 2008ರ ನವೆಂಬರ್ 14ರಂದು ಆದೇಶಿಸಿರುವ ಆಯುಕ್ತರ ನಿರ್ಣಯವನ್ನು ಬದಿಗೆ ಸರಿಸಲಾಗಿದೆ. ವಿಮಾ ಕಂಪೆನಿಗೆ ಪರಿಹಾರದ ಹಣವನ್ನು ಹಿಂದಿರುಗಿಸಬೇಕು. ಗಾಯಕ್ಕೆ ಪರಿಹಾರ ಪಡೆಯುವ ಸಂಬಂಧ ವಿಮೆ ಹಣ ಪಡೆಯಲು ಎರಡು ಭಿನ್ನ ವೈದ್ಯಕೀಯ ಸರ್ಟಿಫಿಕೇಟ್ ನೀಡುವ ಮೂಲಕ ವೃತ್ತಿಪರ ದುರ್ನಡತೆ ತೋರಿರುವ ಡಾ. ಉಮಾನಾಥ್ ಆರ್ ಉಲ್ಲಾಳ್ ವಿರುದ್ಧ ಕರ್ನಾಟಕ ವೈದ್ಯಕೀಯ ಮಂಡಳಿ ತನಿಖೆ ನಡಸಬೇಕು. ಡಿಸೆಂಬರ್ ಅಂತ್ಯದೊಳಗೆ ಪೀಠಕ್ಕೆ ತನಿಖಾ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಹನುಮಾಪುರದ ಹನುಮಂತಪ್ಪ ಲಮಾಣಿ ಎಂಬಾತ ಎಸ್ ಕೆ ಮೂರ್ತಿ ಎಂಬವರ ಲಾರಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. 2006ರ ಮೇ 7 ರಂದು ಲಾರಿಯಿಂದ ಡ್ರಮ್‌ಗಳನ್ನು ಇಳಿಸುವಾಗ ಚಾಲಕ ನಿರ್ಲಕ್ಷ್ಯದಿಂದ ವಾಹನ ಹಿಮ್ಮುಖವಾಗಿ ಚಲಿಸಿತ್ತು. ಇದರಿಂದ ಹನುಮಂತಪ್ಪ ಗಾಯಗೊಂಡಿದ್ದರು. ವಾಹನವು ಓರಿಯಂಟಲ್ ವಿಮಾ ಕಂಪನಿಯಲ್ಲಿ ವಿಮೆ ಹೊಂದಿದ್ದು, ಗಾಯಗೊಂಡಿದ್ದ ಹನುಮಂತಪ್ಪ ಪರಿಹಾರ ಕೋರಿ ಹಾವೇರಿ ಜಿಲ್ಲೆ ಕಾರ್ಮಿಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಹಾವೇರಿ ಜಿಲ್ಲಾ ಕಾರ್ಮಿಕ ಆಯುಕ್ತರು ಅರ್ಜಿದಾರರಿಗೆ ಶೇ 12ರ ಬಡ್ಡಿಯೊಂದಿಗೆ ರೂ. 1. 74 ಲಕ್ಷ ಪರಿಹಾರ ಮಂಜೂರು ಮಾಡುವಂತೆ ಆದೇಶಿಸಿದ್ದರು.
ಪರಿಹಾರ ಕೋರಿ ಸಲ್ಲಿಸಿದ್ದ ಮನವಿಯಲ್ಲಿ ಘಟನೆಯಲ್ಲಿ ಎಡಗಾಲಿನ ಎರಡು ಮೂಳೆ ಮುರಿದಿವೆ ಎಂದು ಅರ್ಜಿದಾರ ಹೇಳಿಕೊಂಡಿದ್ದರು ಮತ್ತು ಈ ಕುರಿತು ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲೂ ಈ ಮಾಹಿತಿ ಇತ್ತು. ಆದರೆ ಅಂಗವೈಕಲ್ಯ ಪ್ರಮಾಣಪತ್ರದಲ್ಲಿ ಬಲಗಾಲಿನ ಮೂಳೆ ಮುರಿದಿದೆ ಎಂದಿತ್ತು. ಎರಡೂ ಪ್ರಮಾಣಪತ್ರಗಳನ್ನು ಡಾ.ಉಮಾನಾಥ ಉಲ್ಲಾಳ ಎನ್ನುವ ಒಬ್ಬರೇ ವೈದ್ಯರು ನೀಡಿದ್ದರು. ಇದನ್ನು ದಿ ಓರಿಯಂಟಲ್ ಇನ್ಶೂರೆನ್ಸ್ ಕಂಪೆನಿಯನ್ನು ಪ್ರತಿನಿಧಿಸಿದ್ದ ವಕೀಲ ಎಸ್ ಕೆ ಕಾಯಕಮಠ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಪ್ರತಿವಾದಿಗಳ ವಕೀಲರು “ವೈದ್ಯರು ವರದಿ ನೀಡುವಾಗ ತಪ್ಪೆಸಗಿದ್ದು, ಅಂಗವೈಕಲ್ಯ ಗುರುತಿಸಲು ಮತ್ತೊಮ್ಮೆ ಕಾರ್ಮಿಕ ಆಯುಕ್ತರಿಗೆ ಪರಿಗಣಿಸಲು ಆದೇಶಿಸಬೇಕು” ಎಂದು ಕೋರಿದ್ದರು. ಇದನ್ನು ಒಪ್ಪದ ಪೀಠವು ಆಯುಕ್ತರ ಆದೇಶವನ್ನು ವಜಾ ಮಾಡಿದೆ.