ದೇಶದಲ್ಲಿ ಸುಳ್ಳುಸುದ್ದಿಗಳ ಭೀತಿ ಎದುರಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಕಳವಳ ವ್ಯಕ್ತಪಡಿಸಿದ್ದಾರೆ.
ರಾಮನಾಥ್ ಗೋಯೆಂಕಾ ಪ್ರತಿಷ್ಠಾನ ನವದೆಹಲಿಯಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ 2023ನೇ ಸಾಲಿನ ರಾಮನಾಥ್ ಗೋಯೆಂಕಾ ಪತ್ರಿಕೋದ್ಯಮ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಸುಳ್ಳುಸುದ್ದಿಗಳು ಸಮುದಾಯಗಳ ನಡುವೆ ಬಿರುಕು ಮೂಡಿಸಿ ಪ್ರಜಾಪ್ರಭುತ್ವ ನಾಶಪಡಿಸುವ ಸಾಮರ್ಥ್ಯ ಹೊಂದಿವೆ ಎಂದು ಅವರು ವಿವರಿಸಿದರು.
ಸಿಜೆಐ ಭಾಷಣದ ಪ್ರಮುಖಾಂಶಗಳು
ಸುಳ್ಳು ಸುದ್ದಿಗಳು ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟು ಮಾಡಬಹುದು. ಸತ್ಯ ಮತ್ತು ಸುಳ್ಳಿನ ನಡುವಿನ ಅಂತರ ಕಡಿಮೆ ಮಾಡುವ ಅವಶ್ಯಕತೆ ಇದೆ. ಪ್ರಜಾಪ್ರಭುತ್ವವನ್ನು ನಾಶಪಡಿಸದಿದ್ದರೂ ಅದಕ್ಕೆ ತೊಂದರೆ ಉಂಟು ಮಾಡುವ ಸಾಮರ್ಥ್ಯ ಸುಳ್ಳು ಸುದ್ದಿಗಳಿಗೆ ಇದೆ.
ಸುದ್ದಿಯ ಸಮಗ್ರ ಸತ್ಯಾಸತ್ಯತೆಯನ್ನು ಪರಿಶೀಲಿಸುವ ವ್ಯವಸ್ಥೆ ಈಗಿನ ಅವಶ್ಯಕತೆಯಾಗಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಮಾಧ್ಯಮ ವಿಚಾರಣೆ ಸಲ್ಲದು. ನ್ಯಾಯಾಲಯಗಳ ತೀರ್ಮಾನಕ್ಕೂ ಮೊದಲೇ ಮಾಧ್ಯಮಗಳು ಆರೋಪಿಯನ್ನು ಅಪರಾಧಿ ಎಂದು ಘೋಷಿಸುತ್ತಿವೆ.
ಅಮಾಯಕರ ಹಕ್ಕುಗಳಿಗೆ ಧಕ್ಕೆಯಾಗದಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಮಾಧ್ಯಮಗಳ ಕೆಲಸ.
ಡಿಜಿಟಲ್ ಯುಗದಲ್ಲಿ ಸವಾಲುಗಳನ್ನು ಎದುರಿಸಲು ಪತ್ರಕರ್ತರು ನಿಖರತೆ, ನಿಷ್ಪಕ್ಷಪಾತತೆ ಕಾಯ್ದುಕೊಳ್ಳಬೇಕು. ನಿರ್ಭೀತ ವರದಿಗಾರಿಕೆಗೆ ಮುಂದಾಗಬೇಕು.
ಸುದ್ದಿಮನೆಯಲ್ಲಿ ಮತ್ತು ಸಮುದಾಯ ಪತ್ರಿಕೋದ್ಯಮದಲ್ಲಿ ವೈವಿಧ್ಯ ತರಲು ಶ್ರಮಿಸಬೇಕು.
ಪತ್ರಿಕೆಗಳು ಕೆಲಸ ಮಾಡದಂತೆ ತಡೆದಾಗ ಪ್ರಜಾಪ್ರಭುತ್ವದ ಜೀವಂತಿಕೆಗೆ ಧಕ್ಕೆಯಾಗುತ್ತದೆ ಆದ್ದರಿಂದ, ಪತ್ರಿಕೋದ್ಯಮ ಮುಕ್ತವಾಗಿರಬೇಕು. ಪತ್ರಕರ್ತನ ಬಗೆಗೆ ಇರುವ ಭಿನ್ನಾಭಿಪ್ರಾಯ ದ್ವೇಷ ಅಥವಾ ಹಿಂಸೆಯಾಗಿ ಬದಲಾಗಬಾರದು.