ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಖಾಸಗಿ ಕಾರ್ಯದರ್ಶಿಯೊಂದಿಗೆ ಮುಖ್ಯ ನ್ಯಾಯಮೂರ್ತಿ ಡಾ. ಎಸ್ ಮುರಳೀಧರ್ ರಹಸ್ಯ ಸಭೆ ನಡೆಸಿದ್ದಾರೆ ಎಂಬ ಆರೋಪವನ್ನು ಒಡಿಶಾ ಹೈಕೋರ್ಟ್ ತಳ್ಳಿಹಾಕಿದೆ.
ಆರೋಪವನ್ನು ಸುಳ್ಳು ಸುದ್ದಿ ಎಂಬುದಾಗಿ ಖಂಡಿಸಿರುವ ಹೈಕೋರ್ಟ್‌ನ ಪತ್ರಿಕಾ ಪ್ರಕಟಣೆ, ಇದೊಂದು ದುರದೃಷ್ಟಕರ, ಉದ್ದೇಶಪೂರ್ವಕ ಮತ್ತು ಮುಖ್ಯ ನ್ಯಾಯಮೂರ್ತಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಟ್ಟ ಯತ್ನ ಎಂದು ಬಣ್ಣಿಸಿದೆ.
"ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಮಾತ್ರವಲ್ಲದೆ ಇಡೀ ನ್ಯಾಯಾಂಗ ಸಂಸ್ಥೆಯನ್ನು ಉದ್ದೇಶಪೂರ್ವಕವಾಗಿ ನಿಂದಿಸುವ ಕೆಟ್ಟ ಯತ್ನ ನಡೆದಿರುವುದು ಅತ್ಯಂತ ದುರದೃಷ್ಟಕರ" ಎಂದು ಪ್ರಕಟಣೆ ಹೇಳಿದೆ.
ನ್ಯಾ. ಮುರಳೀಧರ್ ಅವರು ಶ್ರೀ ಸತ್ಯಸಾಯಿ ಹೃದ್ರೋಗ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿ ಮನೋಜ್ ಭೀಮಾನಿ, ಆಸ್ಪತ್ರೆಯ ಮೂವರು ವೈದ್ಯರು ಹಾಗೂ ಸಿಎಂ ಖಾಸಗಿ ಕಾರ್ಯದರ್ಶಿ ವಿ ಕೆ ಪಾಂಡ್ಯನ್ ಅವರೊಂದಿಗೆ ಸಂವಾದ ನಡೆಸುತ್ತಿರುವ ಫೋಟೋವನ್ನು ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಕೀಲರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ವಕೀಲರು ಚಿತ್ರಕ್ಕೆ ʼರಹಸ್ಯ ಸಭೆ” ಎಂಬ ಶೀರ್ಷಿಕೆ ನೀಡಿದ್ದು ಇದನ್ನು ಕೆಲವು ಮಾಧ್ಯಮ ಸಂಸ್ಥೆಗಳು ಹಂಚಿಕೊಳ್ಳುವ ಮೂಲಕ ವೈರಲ್ ಆಗಿತ್ತು.
ಆಸ್ಪತ್ರೆ ವತಿಯಿಂದ ನಡೆಯುತ್ತಿರುವ 3 ದಿನಗಳ ಉಚಿತ ಬೃಹತ್ ಹೃದಯ ಶಿಬಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ ಆರ್ ಶಾ ಮುಖ್ಯ ಅತಿಥಿಯಾಗಿ ಹಾಗೂ ಸಿಜೆ ಮುರಳೀಧರ್ ಅವರು ಗೌರವ ಅತಿಥಿಯಾಗಿ ಭಾಗವಹಿಸಿದ್ದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪುರಿಯಿಂದ ನ್ಯಾ. ಎಂ ಆರ್ ಶಾ ಆಗಮನಕ್ಕಾಗಿ ಅತಿಥಿಗಳು ಕಾಯುತ್ತಿದ್ದಾಗ ಛಾಯಾಚಿತ್ರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಇದು ಮುಖ್ಯ ನ್ಯಾಯಮೂರ್ತಿ ಮತ್ತು ಉಳಿದವರ ನಡುವಿನ ರಹಸ್ಯ ಅಥವಾ ಖಾಸಗಿ ಸಭೆಯಲ್ಲ. ಬದಲಿಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಒಡಿಶಾದ ಸಾವಿರಾರು ಬಡ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವ ದತ್ತಿ ಸಂಸ್ಥೆಯೊಂದು ಸಾರ್ವಜನಿಕ ಕಾರ್ಯಕ್ರಮವಾಗಿತ್ತು ಎಂದು ಹೈಕೋರ್ಟ್ ರಿಜಿಸ್ಟ್ರಿ ಹೇಳಿದೆ.
ಸತ್ಯ ಪರಿಶೀಲಿಸದೆ ಸುದ್ದಿ ಪ್ರಸಾರ ಮಾಡಿದ ಕೆಲವು ಮಾಧ್ಯಮ ಸಂಸ್ಥೆಗಳನ್ನು ನ್ಯಾಯಾಲಯ ಇದೇ ವೇಳೆ ತರಾಟೆಗೆ ತೆಗೆದುಕೊಂಡಿದೆ. ಸುದ್ದಿ ಪ್ರಕಟಿಸುವ ಮೊದಲು ಹೈಕೋರ್ಟ್ ರಿಜಿಸ್ಟ್ರಿಯಲ್ಲಿ ಸುಲಭವಾಗಿ ಪರಿಶೀಲಸಬಹುದಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.
[ಪತ್ರಿಕಾ ಪ್ರಕಟಣೆಯ ಪ್ರತಿಯನ್ನು ಇಲ್ಲಿ ಓದಿ]