ನಕಲಿ ಭದ್ರತೆ ನೀಡಿರುವ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ಸಹಾಯಕ ರಿಜಿಸ್ಟ್ರಾರ್ ಅವರು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕೋಣನಗುಂಟೆ ಗ್ರಾಮದ ಕೆ ಜಿ ನಾಗಭೂಷಣ್ ಅವರ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಹಾಯಕ ರಿಜಿಸ್ಟ್ರಾರ್ ವಿಜಯ ದಾಸರಹಳ್ಳಿ ಅವರು ದೂರು ನೀಡಿದ್ದಾರೆ.
ಭಯೋತ್ಪಾದನಾ ಸಂಘಟನೆ ಅಲ್ ಹಿಂದ್ ಭಾಗವಾಗಿದ್ದುಕೊಂಡು ಪ್ರಮುಖ ಹಿಂದೂ ನಾಯಕರನ್ನು ಹತ್ಯೆ ಮಾಡುವ ಪ್ರಕರಣದಲ್ಲಿ ಬಂಧಿತರಾಗಿದ್ದ 11ನೇ ಆರೋಪಿ ಕೋಲಾರದ ರಹಮತ್ ನಗರದ ನಿವಾಸಿ ಸಲೀಂ ಖಾನ್ ಅಲಿಯಾಸ್ ಕೋಲಾರ್ ಸಲೀಂಗೆ ಕರ್ನಾಟಕ ಹೈಕೋರ್ಟ್ 2 ಲಕ್ಷ ರೂಪಾಯಿ ಮೌಲ್ಯದ ಭದ್ರತೆ ಒಳಗೊಂಡು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಇದರ ಭಾಗವಾಗಿ ಆರೋಪಿ ಸಲೀಂ ಖಾನ್ ಪರವಾಗಿ ನಾಗಭೂಷಣ್ ಅವರು ಭದ್ರತೆ ನೀಡಿದ್ದರು. 10 ಲಕ್ಷ ರೂಪಾಯಿ ಬೆಲೆ ಬಾಳುವ ಸರ್ವೇ ನಂ. 158/3ರಲ್ಲಿ 13 ಗುಂಟೆ ಜಮೀನನ್ನು ಭದ್ರತೆಯ ಭಾಗವಾಗಿ ನೀಡಿದ್ದರು. ಖಾತೆಯ ನೈಜತೆಯನ್ನು ಪರಿಶೀಲಿಸುವಂತೆ ಮುಳಬಾಗಿಲಿನ ಸಬ್ ರಿಜಿಸ್ಟ್ರಾರ್ ಅವರಿಗೆ ನ್ಯಾಯಾಲಯವು ಪತ್ರ ಬರೆದಿತ್ತು. ಇದನ್ನು ಪರಿಶೀಲಿಸಿದ್ದ ಸಬ್ ರಿಜಿಸ್ಟ್ರಾರ್ ಅವರು ನಾಗಭೂಷಣ್ ಅವರು ಮತ್ತೊಂದು ನ್ಯಾಯಾಲಯದಲ್ಲಿ ಬೇರೊಬ್ಬರು ಆರೋಪಿಗೆ ಭದ್ರತೆ ನೀಡಿದ್ದಾರೆ ಎಂದು ವರದಿ ನೀಡಿದ್ದರು. ಈ ಮಾಹಿತಿಯನ್ನು ಬಚ್ಚಿಟ್ಟು ಕಾನೂನು ಪ್ರಕ್ರಿಯೆ ಚಾಲ್ತಿಯಲ್ಲಿರುವುದನ್ನು ಮರೆಮಾಚಿ ಸರ್ಕಾರಕ್ಕೆ ವಂಚಿಸಲು ಪ್ರಯತ್ನಿಸಿದ್ದು, ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸಿದ್ದಾರೆ. ಅಲ್ಲದೇ, ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದರ ಭಾಗವಾಗಿ ನಾಗಭೂಷಣ್ ಅವರು ಸಲೀಂ ಖಾನ್‌ಗೆ ಭದ್ರತೆ ನೀಡಿದ್ದರು. ಭದ್ರತೆ ನೀಡಿರುವ ವ್ಯಕ್ತಿ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಎನ್‌ಐಎ ವಿಶೇಷ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿತ್ತು. ಎಲ್ಲಾ ದಾಖಲೆಗಳು ನೈಜವಾಗಿವೆ ಎಂದು ಪೊಲೀಸರು ವರದಿ ಸಲ್ಲಿಸಿದ್ದರು. ಅದಾಗ್ಯೂ, 2022ರ ಏಪ್ರಿಲ್-ಮೇನಲ್ಲಿ ಕೋಲಾರದ ಜಿಲ್ಲಾ ನ್ಯಾಯಾಲಯದಲ್ಲಿ ರಮೇಶ್ ಮತ್ತು ಸೋಮು ಎಂಬವರಿಗೆ ನಾಗಭೂಷಣ್ ಅವರು ಸರ್ವೇ ನಂ. 158/3ರಲ್ಲಿನ 13 ಗುಂಟೆಯನ್ನು ಭದ್ರತಾ ಖಾತರಿಯನ್ನಾಗಿ ನೀಡಿದ್ದಾರೆ ಎಂದು ವರದಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದರು. ಈ ಸಂಬಂಧ ಕೋಲಾರ ಜಿಲ್ಲಾ ನ್ಯಾಯಾಲಯದಿಂದ ದಾಖಲೆ ಪಡೆದುಕೊಳ್ಳುತ್ತಿರುವುದಾಗಿ ವರದಿಯಲ್ಲಿ ತಿಳಿಸಿದ್ದರು. ಆದರೆ, ಯಾವುದೇ ದಾಖಲೆಯನ್ನು ಎನ್‌ಐಎ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿರಲಿಲ್ಲ. ಇದರ ಬಗ್ಗೆ ವಿಚಾರಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯವು ಸಲೀಂ ಖಾನ್‌ಗೆ ಜಾಮೀನು ಮಂಜೂರು ಮಾಡಿತ್ತು.
ಈ ಮಧ್ಯೆ, ಭದ್ರತೆ ಒದಗಿಸಿರುವ ನಾಗಭೂಷಣ್ ಹೆಸರಿನಲ್ಲಿರುವ ಆಸ್ತಿಯಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯದ ಹೆಸರಿನಲ್ಲಿ 2 ಲಕ್ಷ ರೂಪಾಯಿ ಭದ್ರತೆ ನಮೂದಿಸುವಂತೆ ಮುಳಬಾಗಿಲು ರಿಜಿಸ್ಟ್ರಾರ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಆಗ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿನ ಪ್ರಕರಣದಲ್ಲಿ ಆರೋಪಿಗಳಾಗಿರುವವರಿಗೂ ನಾಗಭೂಷಣ್ ಭದ್ರತೆ ನೀಡಿದ್ದಾರೆ ಎಂಬ ವಿಚಾರ ಎನ್‌ಐಎ ಪೊಲೀಸರ ಗಮನಕ್ಕೆ ಬಂದಿತ್ತು. 2022ರ ಸೆಪ್ಟೆಂಬರ್ 14ರಂದು ಅದೇ ಮುಳಬಾಗಿಲು ಸಬ್ ರಿಜಿಸ್ಟ್ರಾರ್ ಅವರು ಸಿಬಿಐ ವಿಶೇಷ ನ್ಯಾಯಾಲಯದ ಹೆಸರಿನಲ್ಲಿ ಭದ್ರತೆ ಸೃಷ್ಟಿಸಿದ್ದರು. ಇದನ್ನು ಉಲ್ಲೇಖಿಸಿ ಪೊಲೀಸರು ಎನ್‌ಐಎ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಇದರ ಆಧಾರದಲ್ಲಿ ಸಲೀಂ ಖಾನ್ ಮತ್ತು ಭದ್ರತೆ ನೀಡಿದ್ದ ನಾಗಭೂಷಣ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯವು ಷೋಕಾಸ್ ನೋಟಿಸ್ ಜಾರಿ ಮಾಡಿತ್ತು.
ನಾಗಭೂಷಣ್ ಅವರು ಮತ್ತೊಬ್ಬರಿಗೆ ಭದ್ರತೆ ನೀಡಿರುವ ವಿಚಾರ ತಮಗೆ ತಿಳಿದಿರಲಿಲ್ಲ ಎಂಬ ಉತ್ತರ ಒಳಗೊಂಡ ಸಲೀಂ ಖಾನ್ ಅಫಿಡವಿಟ್ ಅನ್ನು ನ್ಯಾಯಾಲಯ ಒಪ್ಪಿದೆ. ಆದರೆ, ನಾಗಭೂಷಣ್ ಅಫಿಡವಿಟ್ ಅನ್ನು ಪೀಠವು ತಿರಸ್ಕರಿಸಿದೆ. ನೋಟಿಸ್‌ಗೆ ಉತ್ತರಿಸುವಾಗ ಮತ್ತು ವಿಚಾರಣೆಯ ವೇಳೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಬೇರೊಬ್ಬ ಆರೋಪಿಗೆ ಭದ್ರತೆ ನೀಡಿರುವುದಾಗಿ ನಾಗಭೂಷಣ್ ಹೇಳಿದ್ದರು. ಅದಾಗ್ಯೂ, ಸಲೀಂ ಖಾನ್‌ಗೆ ಭದ್ರತೆ ನೀಡಿದರೆ ಎದುರಿಸಬೇಕಾದ ಪರಿಣಾಮದ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ನಕಲಿ ಅಫಿಡವಿಟ್ ಮತ್ತು ಹೇಳಿಕೆ ನೀಡಿ ಭದ್ರತೆ ಒದಗಿಸಿದ್ದಾರೆ. ಹೀಗಾಗಿ, ನಾಗಭೂಷಣ್ ವಿರುದ್ಧ ದೂರು ದಾಖಲಿಸುವಂತೆ ಸಹಾಯಕ ರಿಜಿಸ್ಟ್ರಾರ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ ಎಂ ಗಂಗಾಧರ ಅವರು ಆದೇಶಿಸಿದ್ದರು.