ಕಷ್ಟ ಕಾಲದಲ್ಲಿ ಅನೇಕರು ಮೌನಕ್ಕೆ ಶರಣಾದಾಗ ಫಾಲಿ ನಾರಿಮನ್ ದೇಶದ ಧ್ವನಿಯಾದರು: ಸಿಜೆಐ ಚಂದ್ರಚೂಡ್

ಫೆಬ್ರವರಿ 21, 2024ರಂದು ನಿಧನರಾದ ನಾರಿಮನ್ ಅವರಿಗೆ ಇಂದು ಸುಪ್ರೀಂ ಕೋರ್ಟ್ ಪೂರ್ಣ ನ್ಯಾಯಾಲಯ ಗೌರವ ಅರ್ಪಿಸಿದ ಸಂದರ್ಭದಲ್ಲಿ ಸಿಜೆಐ ಮಾತನಾಡಿದರು.
Fali Nariman
Fali Nariman

ಭಾರತ ಪ್ರಕ್ಷುಬ್ಧ ಸ್ಥಿತಿ ಎದುರಿಸುತ್ತಿದ್ದ ಸಂದರ್ಭಗಳಲ್ಲಿ ಕಾನೂನು ಲೋಕದ ದಂತಕತೆ ಫಾಲಿ ಎಸ್‌ ನಾರಿಮನ್‌ ಅವರು ಬೀರಿದ ಪ್ರಭಾವದ ಕುರಿತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರು ಹೆಮ್ಮೆಪಟ್ಟರು.

ನಾರಿಮನ್ ಅವರು ಅನೇಕ ವಕೀಲರು ಮತ್ತು ನ್ಯಾಯಾಧೀಶರಿಗೆ ಮಾರ್ಗದರ್ಶಕರಾಗಿದ್ದರು ಮತ್ತು ತೀರ್ಪುಗಳನ್ನು ಅವರು ಟೀಕಿಸಿದರೆ ಎದುರಾಡುವವರು ಇರುತ್ತಿರಲಿಲ್ಲ ಎಂದರು.

"ಅವರು (ಫಾಲಿ ನಾರಿಮನ್) ನಿಧನರಾಗುವ ಮುನ್ನ  ಸಾಂವಿಧಾನಿಕ ಪೀಠದ ತೀರ್ಪಿಗೆ ಸಂಬಂಧಿಸಿದಂತೆ ನನಗೆ ಪತ್ರವೊಂದು ಬಂದಿತ್ತು. ಕಷ್ಟದ ಸಮಯದಲ್ಲಿ ಅನೇಕರು ಬಾಯಿ ಮುಚ್ಚಿಕೊಂಡಿದ್ದಾಗ ಅವರ ದೃಢ ನಿಲುವು ದೇಶದ ಧ್ವನಿಯಾಗಿತ್ತು. ನ್ಯಾಯಕ್ಕಾಗಿ ಸೇವೆ ಸಲ್ಲಿಸುವ ಅನೇಕರಿಗೆ ಅವರ ಸ್ಮರಣೆ ದಾರಿದೀಪವಾಗಿರುತ್ತದೆ” ಎಂದರು.  

ಫೆಬ್ರವರಿ 21, 2024ರಂದು ನಿಧನರಾದ ನಾರಿಮನ್ ಅವರಿಗೆ ಇಂದು ಸುಪ್ರೀಂ ಕೋರ್ಟ್‌ ಪೂರ್ಣ ನ್ಯಾಯಾಲಯ ಗೌರವ ಅರ್ಪಿಸಿದ ಸಂದರ್ಭದಲ್ಲಿ ಸಿಜೆಐ ಮಾತನಾಡಿದರು.

ನಾರಿಮನ್ ಅವರ ಅಚಲವಾದ ನೈತಿಕತೆ, ಅದಮ್ಯ ಧೈರ್ಯ ಮತ್ತು ದೃಢ ತತ್ವಾನ್ವೇಷಣೆ ಕೇವಲ ವೃತ್ತಿಗೆ ಮಾತ್ರವಲ್ಲದೆ ನಮ್ಮ ದೇಶದ ಆತ್ಮಕ್ಕೂ ಮುಲಾಮು ಹಚ್ಚಿತು ಎಂದು ಅವರು ವಿವರಿಸಿದರು.

ಮನೆಮಾತಾಗಿರುವ ಅವರ ವೃತ್ತಿಜೀವನವನ್ನು ಉಲ್ಲೇಖಿಸಿದ ನ್ಯಾ. ಚಂದ್ರಚೂಡ್‌ ಅವರು ಅಸಾಧಾರಣ ಕಾನೂನು ಚಾಣಾಕ್ಷತೆ ಮತ್ತು ನ್ಯಾಯದ ಕಾರಣಕ್ಕಾಗಿ ಸೇವೆ ಸಲ್ಲಿಸುವ ನಾರಿಮನ್ ಅವರ ಬದ್ಧತೆಯ ಬಗ್ಗೆ ಗಮನ ಸೆಳೆದರು.

ಟಿಎಂಎ ಪೈ ಪ್ರಕರಣದ ತೀರ್ಪಿನಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದು ಸೇರಿದಂತೆ ಹಲವು ಮಹತ್ವದ ಪ್ರಕರಣಗಳಲ್ಲಿ ಅವರು ನಿರ್ವಹಿಸಿದ ಪಾತ್ರವನ್ನು ಸಿಜೆಐ ವಿವರಿಸಿದರು. ವಯಸ್ಕರ ನಡುವಿನ ಸಮ್ಮತಿಯ ಲೈಂಗಿಕತೆಯನ್ನು ಅಪರಾಧವೆಂದು ಪರಿಗಣಿಸಲಾಗದು ಎಂಬ ನಾರಿಮನ್ ಅವರ ನಿಲುವನ್ನು ನವತೇಜ್ ಸಿಂಗ್ ಜೋಹರ್ ಪ್ರಕರಣದ ತೀರ್ಪು ಸಮರ್ಥಿಸುತ್ತದೆ ಎಂದರು.

“ಹಿರಿಯ ಜೀವಗಳು ದೈಹಿಕವಾಗಿ ಇಲ್ಲವಾಗುತ್ತಾರೆ ಆದರೆ ಎಂದಿಗೂ ಮರೆಯಾಗುವುದಿಲ್ಲ” ಎಂದು ಸಿಜೆಐ ಬಣ್ಣಿಸಿದರು. ನಾರಿಮನ್‌ ಅವರ ಕೊಡುಗೆಗಳನ್ನು ಇದೇ ವೇಳೆ ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಸ್ಮರಿಸಿದರು.

Related Stories

No stories found.
Kannada Bar & Bench
kannada.barandbench.com