ನಾರಿಮನ್‌ ಗುಣಗಾನ ಮಾಡಿದ ಸಿಜೆಐ: ನ್ಯಾಯಿಕ ಲೋಕದಲ್ಲಿ ಕಂಬನಿಯ ಮಹಾಪೂರ

ಅಗಲಿದ ಚೇತನಕ್ಕೆ ನ್ಯಾಯಿಕ ಸಮುದಾಯ ಅಶ್ರುತರ್ಪಣ ಸಲ್ಲಿಸಿದ್ದು ಅನೇಕರು ನಾರಿಮನ್‌ ಹಾಕಿಕೊಟ್ಟ ಮಾರ್ಗವನ್ನು ನೆನೆದರು.
ಫಾಲಿ ನಾರಿಮನ್
ಫಾಲಿ ನಾರಿಮನ್

ನ್ಯಾಯಿಕ ಲೋಕದ ಧ್ರುವತಾರೆ, ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ಅವರ ನಿಧನಕ್ಕೆ ವಕೀಲ ಸಮುದಾಯ ಮತ್ತು ನ್ಯಾಯಾಂಗ ಸದಸ್ಯರು ಶೋಕ ವ್ಯಕ್ತಪಡಿಸಿದ್ದಾರೆ.

ಅಗಲಿದ ಚೇತನಕ್ಕೆ ನ್ಯಾಯಿಕ ಸಮುದಾಯ ಅಶ್ರುತರ್ಪಣ ಸಲ್ಲಿಸಿದ್ದು ಅನೇಕರು ನಾರಿಮನ್‌ ಹಾಕಿಕೊಟ್ಟ ಮಾರ್ಗವನ್ನು ನೆನೆದರು. ವಕೀಲಿ ವೃತ್ತಿಯನ್ನು ದೆಹಲಿಗೆ ಸ್ಥಳಾಂತರಿಸಿ ಸುಪ್ರೀಂ ಕೋರ್ಟ್‌ನಲ್ಲಿ ಛಾಪೊತ್ತಿದ ಕೆಲವೇ ಮುಂಬೈ ವಕೀಲರಲ್ಲಿ ನಾರಿಮನ್ ಕೂಡ ಒಬ್ಬರು.

ಅವರು ತಮ್ಮ ಪುತ್ರ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರನ್ನು ಅಗಲಿದ್ದಾರೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ವೃತ್ತಿಯಲ್ಲಿ ಅನೇಕರಿಗೆ ಹೇಗೆ ಪಿತೃಸಮಾನರಾಗಿದ್ದರು ಎಂಬುದನ್ನು ಸ್ಮರಿಸಿದ್ದಾರೆ.

"ಶ್ರೀ ಫಾಲಿ ನಾರಿಮನ್ ಅವರ ನಿಧನದ ಸುದ್ದಿ ತಿಳಿದು ನನಗೆ ತೀವ್ರ ದುಃಖವಾಗಿದೆ. ಅವರ ಧ್ವನಿ ನಿಜವಾಗಿಯೂ ಒಂದು ಪೀಳಿಗೆಯ ಆತ್ಮಸಾಕ್ಷಿಯ ಪ್ರತಿನಿಧಿ. ತಮ್ಮ ಅಭಿಪ್ರಾಯಗಳ ಅಭಿವ್ಯಕ್ತಿಯಲ್ಲಿ ನಿರ್ಭೀತರಾಗಿದ್ದ ಅವರು ಸ್ಪಷ್ಟತೆ ಮತ್ತು ಧೈರ್ಯದಿಂದ ಬರೆದರು ಮತ್ತು ಮಾತನಾಡಿದರು. ಅವರು ಒಂದು ತಲೆಮಾರಿನ ವಕೀಲರು ಮತ್ತು ನ್ಯಾಯಾಧೀಶರಿಗೆ ಮಾರ್ಗದರ್ಶನ ನೀಡಿದವರು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರು ಯಾವಾಗಲೂ ದಯಾಪರ ಮತ್ತು ಪ್ರೀತಿಯ ತೀರ್ಥರೂಪು ಸಮಾನರಾಗಿದ್ದರು. ನಮ್ಮ ಯುಗದ ಶ್ರೇಷ್ಠ ಮೇಧಾವಿ ಶೋಕದಾಯಕ ರೀತಿಯಲ್ಲಿ ನಿಧನರಾಗಿದ್ದಾರೆ" ಎಂದು ಸಿಜೆಐ ತಿಳಿಸಿದ್ದಾರೆ.

ಸಿಜೆಐ ಡಿ ವೈ ಚಂದ್ರಚೂಡ್
ಸಿಜೆಐ ಡಿ ವೈ ಚಂದ್ರಚೂಡ್

ನಿವೃತ್ತ ಸಿಜೆಐ ಎನ್‌ ವಿ ರಮಣ ಕೂಡ ಫಾಲಿಮನ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಅವರು ಸ್ವಾತಂತ್ರ್ಯ ಪೂರ್ವ ಮತ್ತು ನಂತರ ನಮ್ಮ ರಾಷ್ಟ್ರ ಎದುರಿಸಿದ ಅನೇಕ ಅಗ್ನಿಪರೀಕ್ಷೆಗಳು ಮತ್ತು ಸಂಕಟಗಳನ್ನು ಕಂಡವರು. ತಮ್ಮ ಕೊನೆಯ ಉಸಿರಿರುವವರೆಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಹೋರಾಡಿದರು. ಇಳಿವಯಸ್ಸಿನಲ್ಲೂ ಅವರು ಉತ್ಸಾಹಭರಿತವಾಗಿ ಸಂದರ್ಶನ ನೀಡುತ್ತಿದ್ದ ರೀತಿ ಸಾಂವಿಧಾನಿಕ ತತ್ವಗಳ ಬಗ್ಗೆ ಅವರಿಗೆ ಇರುವ ಬದ್ಧತೆಯನ್ನು ತೋರಿಸುತ್ತದೆ ಎಂದಿದ್ದಾರೆ. ನಾರಿಮನ್ ಅವರು ನ್ಯಾಯಾಂಗ ಸಂಸ್ಥೆಗಳ ಆತ್ಮಸಾಕ್ಷಿಯ ರಕ್ಷಕರಾಗಿದ್ದರು" ಎಂದು ಕೂಡ ಅವರು ಹೇಳಿದರು.

ನ್ಯಾಯಮೂರ್ತಿ ಎನ್‌ ವಿ  ರಮಣ
ನ್ಯಾಯಮೂರ್ತಿ ಎನ್‌ ವಿ ರಮಣ

ನಾರಿಮನ್ ಅವರ ಜೀವನವನ್ನು ಸಂಭ್ರಮದಂತೆ ಸವಿಯಬೇಕು ಎಂದು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಹೇಳಿದ್ದಾರೆ. "...ಒಬ್ಬ ವಕೀಲೆಯಾಗಿ ಅವರ ಸೂಚನೆಗಳನ್ನು ಪಡೆಯುತ್ತಿದ್ದುದು ಮತ್ತು ಅವರಿಂದ ಬೈಯಿಸಿಕೊಳ್ಳುತ್ತಿದ್ದುದು ಆಶೀರ್ವಾದವೆಂದೇ ಭಾವಿಸುವೆ. ಹಿರಿಯ ನ್ಯಾಯವಾದಿಯೇ ಇರಲಿ, ಕಿರಿಯ ವಕೀಲರೇ ಇರಲಿ ಅಥವಾ ದಾವೆದಾರರೇ ಆಗಿರಲಿ ಅವರಿಗೆ ಎಲ್ಲರೂ ಸಮಾನರಾಗಿದ್ದರು. ಅಮೂಲ್ಯ ಮಾಹಿತಿ ಇರುವ ಯಾರದೇ ಮಾತನ್ನಾದರೂ ಅವರು ಕೇಳುತ್ತಿದ್ದರು. ಪ್ರಕರಣದ ಬಗ್ಗೆ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ತೃಪ್ತಿಯಾಗುವ ತನಕ ಅವರು ಸಮಯ, ಶ್ರಮದ ಬಗ್ಗೆ ಲೆಕ್ಕಹಾಕುತ್ತಿರಲಿಲ್ಲ" ಎಂದಿದ್ದಾರೆ.

ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್
ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್

"ಇನ್ನೊಬ್ಬ ಫಾಲಿ ನಾರಿಮನ್ ಇರಲು ಮತ್ತು ಹುಟ್ಟಿಬರಲು ಸಾಧ್ಯವಿಲ್ಲ" ಎಂದು ಪ್ರತಿಕ್ರಿಯಿಸಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ , "ಕಾನೂನು ಲೋಕವಷ್ಟೇ ಅಲ್ಲದೆ ಇಡೀ ದೇಶ ಮೇಧಾವಿ ಮತ್ತು ವಿಚಾರವಂತನನ್ನು ಕಳೆದುಕೊಂಡಿದೆ. (ಆ ಮೂಲಕ) ರಾಷ್ಟ್ರವು ಸಾತ್ವಿಕತೆಯ ಅರ್ಥವನ್ನು ಕಳೆದುಕೊಂಡಿದೆ. ಅನುಭವಿ, ಸಂಪನ್ನ ಹಾಗೂ ಬದುಕಿದ್ದಾಗಲೇ ದಂತಕತೆಯಾಗಿದ್ದ ಅವರು ತಮ್ಮ ಅಪರಿಮಿತ ಕೊಡುಗೆಗಳ ಮೂಲಕ ನ್ಯಾಯಶಾಸ್ತ್ರವನ್ನು ಸಮೃದ್ಧಗೊಳಿಸಿದರು" ಎಂದು ಹೇಳಿದ್ದಾರೆ.

ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ
ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ನಾರಿಮನ್ ಅವರು ಜಾತ್ಯತೀತ ಮೌಲ್ಯ ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ಪರ ನಿಂತಿದ್ದರು ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಟ್ವೀಟ್‌ ಮಾಡಿದ್ದಾರೆ.

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಕಂಬನಿ ಮಿಡಿಯುತ್ತಾ "ಭಾರತದ ಮಹಾನ್ ಪುತ್ರ ನಿಧನರಾಗಿದ್ದಾರೆ. ನಮ್ಮ ದೇಶದ ಶ್ರೇಷ್ಠ ವಕೀಲರಲ್ಲಿ ಒಬ್ಬರು ಮಾತ್ರವಲ್ಲ, ದೈತ್ಯರಾಗಿ ನಿಂತ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರು. ಅವರಿಲ್ಲದ ನ್ಯಾಯಾಲಯದ ಪಡಸಾಲೆಗಳು ಎಂದಿನಂತಿರುವುದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವೀಟಿಸಿದ್ದಾರೆ.

ನಾರಿಮನ್ ಯಾವಾಗಲೂ ತಮ್ಮ ತತ್ವಗಳಿಗೆ ಬದ್ಧರಾಗಿರುತಿದ್ದರು. ಈ ಗುಣವನ್ನು ಅವರ ಮಗ ರೋಹಿಂಟನ್‌ ಅವರೊಂದಿಗೂ ಹಂಚಿಕೊಂಡಿದ್ದಾರೆ ಎಂದು ಸ್ಮರಿಸಿದ್ದಾರೆ ಮತ್ತೊಬ್ಬ ಹಿರಿಯ ನ್ಯಾಯವಾದಿ ಡಾ.ಅಭಿಷೇಕ್ ಮನು ಸಿಂಘ್ವಿ.

ನ್ಯಾಯಾಧೀಶರು ಮತ್ತು ವಕೀಲರಿಗೆ ಮಾರ್ಗದರ್ಶಕರಾಗಿ ನಾರಿಮನ್ ಅವರು ವಹಿಸಿದ್ದ ಪಾತ್ರವನ್ನು ಸುಪ್ರೀಂ ಕೋರ್ಟ್ ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಮತ್ತು ಹಿರಿಯ ವಕೀಲ ಗೌತಮ್ ಭಾಟಿಯಾ ನೆನೆದಿದ್ದಾರೆ. ನೀವು ನಮ್ಮ ನೆನಪಿನಲ್ಲಿ ಎಂದಿಗೂ ಮರೆಯಾಗುವುದಿಲ್ಲ ಸರ್ ಎಂದು ಸಂತಾಪ ಸೂಚಿಸಿದ್ದಾರೆ.

ಕಾನೂನು ಲೋಕದ ಗಣ್ಯರಾದ ಸಂಜಯ್‌ ಘೋಷ್‌, ಸಂಜಯ್‌ ಹೆಗ್ಡೆ, ಮೇನಕಾ ಗುರುಸ್ವಾಮಿ, ಸಂದೀಪ್‌ ಪ್ರವೀಣ್‌ ಪಾರೇಖ್‌ ಮತ್ತಿತರರು ಸಾಮಾಜಿಕ ಮಾಧ್ಯಮಗಳ ಮೂಲಕ ನುಡಿನಮನ ಸಲ್ಲಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com