ಕೌಟುಂಬಿಕ ನ್ಯಾಯಾಲಯಗಳು ವರ್ಷದೊಳಗೆ ವಿಚ್ಛೇದನ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು: ಹೈಕೋರ್ಟ್‌

“ವೈವಾಹಿಕ ಪ್ರಕರಣಗಳಲ್ಲಿ ತ್ವರಿತ ತೀರ್ಪು ನೀಡಿದ್ದಲ್ಲಿ ಇಬ್ಬರೂ ತಮ್ಮ ಜೀವನನ್ನು ಪುನರ್‌ರೂಪಿಸಿಕೊಳ್ಳಬಹುದು. ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾದರೆ ಇಬ್ಬರ ಮೇಲೂ ಕೆಟ್ಟ ಪರಿಣಾಮ ಉಂಟಾಗುತ್ತದೆ” ಎಂದು ಹೇಳಿರುವ ನ್ಯಾಯಾಲಯ.
Justice Krishna S Dixit and Karnataka HC
Justice Krishna S Dixit and Karnataka HC

ವಿವಾಹ ವಿಚ್ಛೇದನ ಸೇರಿದಂತೆ ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬ ಮಾಡಿದರೆ ಎರಡೂ ಕುಟುಂಬಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ವೈವಾಹಿಕ ಪ್ರಕರಣಗಳನ್ನು ಕೌಟುಂಬಿಕ ನ್ಯಾಯಾಲಯಗಳು ಗರಿಷ್ಠ ಒಂದು ವರ್ಷದ ಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಆದೇಶಿಸಿದೆ.

ತನ್ನ ವಿವಾಹ ವಿಚ್ಚೇದನ ಅರ್ಜಿಯನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಮನುಷ್ಯ ಜೀವನದ ಅಲ್ಪಾವಧಿಯನ್ನು ಗಮನದಲ್ಲಿಟ್ಟುಕೊಂಡು ವೈವಾಹಿಕ ಪ್ರಕರಣಗಳ ವಿಲೇವಾರಿಯನ್ನು ಯುದ್ದೋಪಾದಿಯಲ್ಲಿ ಕೈಗೊಳ್ಳಬೇಕಿದೆ” ಎಂದು ನ್ಯಾಯಾಲಯ ಹೇಳಿದೆ. ʼಬದುಕು ತೀರಾ ಚಿಕ್ಕದುʼ ಎಂಬ ಆಂಗ್ಲ ಇತಿಹಾಸಕಾರರೊಬ್ಬರ ಹೇಳಿಕೆಯನ್ನು ಆದೇಶದಲ್ಲಿ ಉಲ್ಲೇಖಿಸಿರುವ ಪೀಠವು “ಮದುವೆಯ ವಿಸರ್ಜನೆ ಅಥವಾ ಅನೂರ್ಜಿತತೆ ಬಯಸುವ ವೈವಾಹಿಕ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಗರಿಷ್ಠ ಒಂದು ವರ್ಷದ ಮಿತಿಯೊಳಗೆ ವಿಲೇವಾರಿಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಕೌಟುಂಬಿಕ ಅಥವಾ ವಿಚಾರಣಾಧೀನ ನ್ಯಾಯಾಲಯಗಳು ಮಾಡಬೇಕು” ಎಂದು ಆದೇಶಿಸಿದೆ.

“ವೈವಾಹಿಕ ಪ್ರಕರಣಗಳಲ್ಲಿ ತ್ವರಿತ ತೀರ್ಪು ನೀಡಿದ್ದಲ್ಲಿ ಇಬ್ಬರೂ ತಮ್ಮ ಜೀವನನ್ನು ಪುನರ್‌ರೂಪಿಸಿಕೊಳ್ಳಬಹುದು. ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾದರೆ ಇಬ್ಬರ ಮೇಲೂ ಕೆಟ್ಟ ಪರಿಣಾಮ ಉಂಟಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಏಳು ವರ್ಷಗಳ ಹಳೆಯದಾದ ಅರ್ಜಿದಾರರ ಪ್ರಕರಣವನ್ನು ಮೂರು ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ಸಂಬಂಧಿಸಿದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಿಗೆ ಸೂಚಿಸಿರುವ ಪೀಠವು ಇಂತಹದ್ದೇ ಪ್ರಕರಣಗಳನ್ನು ಎದುರಿಸುತ್ತಿರುವವರು ತಮ್ಮ ಅರ್ಜಿಗಳ ತ್ವರಿತ ವಿಲೇವಾರಿಗೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯಾಲಯದ ಕದ ತಟ್ಟುವ ಪ್ರಮೇಯ ಉದ್ಭವಿಸಬಾರದು. ಆದ್ದರಿಂದ, ಈ ಆದೇಶವನ್ನು ಸಂಬಂಧಪಟ್ಟ ಎಲ್ಲರಿಗೂ ರವಾನಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪೀಠವು ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ: ಪತ್ನಿಯೊಂದಿಗಿನ ವಿವಾಹ ಬಂಧವನ್ನು ಅನೂರ್ಜಿತಗೊಳಿಸಬೇಕು ಎಂದು ವ್ಯಕ್ತಿಯೊಬ್ಬರು 2016ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತ್ವರಿತ ವಿಲೇವಾರಿ ಆಗದ ಕಾರಣ, ತಮ್ಮ ಅರ್ಜಿಯನ್ನು ಮೂರು ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತ್ವರಿತ ನ್ಯಾಯದಾನದ ಹಕ್ಕನ್ನು ಅನುಚ್ಛೇದ 21ರಡಿ ಸಾಂವಿಧಾನಿಕ ಖಾತರಿ ಎಂದು ಸುಪ್ರೀಂ ಕೋರ್ಟ್ ಗುರುತಿಸಿದೆ. ಆದ್ದರಿಂದ, ತನ್ನ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com