ರೈತರ ಪ್ರತಿಭಟನೆ: ನ್ಯಾಯಾಲಯದಲ್ಲಿ ಕಾಯಿದೆಗಳ ಪ್ರಶ್ನಿಸಿರುವಾಗ ಪ್ರತಿಭಟನೆಗೆ ಅವಕಾಶವಿದೆಯೇ? ನಿರ್ಧರಿಸಲಿದೆ ಸುಪ್ರೀಂ

ಕಿಸಾನ್‌ ಮಹಾಪಂಚಾಯತ್‌ ಸಂಘಟನೆಯು ದೆಹಲಿಯ ಜಂತರ್‌ಮಂತರ್‌ನಲ್ಲಿ ಸತ್ಯಾಗ್ರಹ ನಡೆಸಲು ಅನುಮತಿ ಕೋರಿರುವ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.
Justices AM Khanwilkar and CT Ravikumar
Justices AM Khanwilkar and CT Ravikumar

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯಿದೆಗಳನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಿದ ನಂತರವೂ ಪ್ರತಿಭಟನೆಯ ಹಕ್ಕನ್ನು ಪ್ರತಿಭಟನಾಕಾರರು ಹೊಂದಿರುತ್ತಾರೆಯೇ ಎನ್ನುವ ಪ್ರಶ್ನೆಯನ್ನು ಮೊದಲು ನಿರ್ಧರಿಸಲು ಸುಪ್ರೀಂ ಕೋರ್ಟ್‌ ಮುಂದಾಗಿದೆ (ಕಿಸಾನ್‌ ಮಹಾಪಂಚಾಯತ್‌ ವರ್ಸಸ್‌ ಕೇಂದ್ರ ಸರ್ಕಾರ).

ದೆಹಲಿಯ ಜಂತರ್‌ಮಂತರ್‌ನಲ್ಲಿ ಕೃಷಿ ಕಾಯಿದೆಗಳ ವಿರುದ್ಧ ಸತ್ಯಾಗ್ರಹ ನಡೆಸಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಕಿಸಾನ್‌ ಮಹಾಪಂಚಾಯತ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾ. ಎ ಎಂ ಖಾನ್ವಿಲ್ಕರ್‌ ಮತ್ತು ನ್ಯಾ. ಸಿ ಟಿ ರವಿಕುಮಾರ್ ಅವರ ವಿಭಾಗೀಯ ಪೀಠವು ಸೋಮವಾರ ನಡೆಸಿತು.

ಈ ವೇಳೆ ಪೀಠವು, “ಒಮ್ಮೆ ನೀವು ನ್ಯಾಯಾಲಯದ ಮೊರೆ ಹೋದ ನಂತರ ಅದೇ ವಿಚಾರವಾಗಿ ಪ್ರತಿಭಟನೆ ನಡೆಸಲು ಹೇಗೆ ಸಾಧ್ಯ ಎನ್ನುವ ಕಾನೂನಾತ್ಮಕ ವಿಚಾರವನ್ನು ನಾವು ನಿರ್ಣಯಿಸಬೇಕಿದೆ,” ಎಂದಿತು. ಹೀಗೆ ಹೇಳುವ ಮೂಲಕ ನ್ಯಾಯಾಲಯವು ಪ್ರತಿಭಟನೆಯ ಹಕ್ಕು ಪರಿಪೂರ್ಣವಾದ ಹಕ್ಕೇ ಎನ್ನುವ ಪ್ರಮುಖ ಪ್ರಶ್ನೆಯನ್ನು ಎತ್ತಿದೆ. ಪ್ರಕರಣದಲ್ಲಿ ಕಿಸಾನ್‌ ಮಹಾಪಂಚಾಯತ್‌ ಪರವಾಗಿ ಹಾಜರಾದ ವಕೀಲ ಅಜಯ್ ಚೌಧರಿ ಅವರು, ತಮ್ಮ ಕಕ್ಷೀದಾರರು ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗೀದಾರರಲ್ಲ. ಅದೇ ರೀತಿ, ಅವರು ಸಂಚಾರವನ್ನು ಶಾಶ್ವತವಾಗಿಯಾಗಲಿ ಅಥವಾ ತಾತ್ಕಾಲಿಕವಾಗಿಯಾಗಲಿ ಎಲ್ಲಿಯೂ ತಡೆದಿಲ್ಲ ಎನ್ನುವ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು.

Also Read
ಸಂಸದೀಯವಾಗಿ, ಕೋರ್ಟ್‌ ಮೂಲಕ ಪರಿಹಾರ ಪಡೆಯಬೇಕೆ ವಿನಾ ಹೆದ್ದಾರಿ ತಡೆ ಮೂಲಕ ಅಲ್ಲ: ರೈತರ ಪ್ರತಿಭಟನೆ ಕುರಿತು ಸುಪ್ರೀಂ

ಈ ಸಂದರ್ಭದಲ್ಲಿ ನ್ಯಾಯಾಲಯವು, “ಒಮ್ಮೆ ಪಕ್ಷಕಾರರು ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಬಂದ ನಂತರ ಪ್ರತಿಭಟನೆಯ ಪ್ರಶ್ನೆ ಎಲ್ಲಿ ಬರುತ್ತದೆ? ಒಮ್ಮೆ ನೀವು ನ್ಯಾಯಾಲಯಕ್ಕೆ ಬಂದ ನಂತರ ನೀವು ನಿಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಬಳಸಿದ್ದೀರಿ ಎಂದಾಗುತ್ತದೆ” ಎಂದು ಹೇಳಿತು. ಮುಂದುವರೆದು, “ಒಮ್ಮೆ ನೀವು ಕಾರ್ಯಾಂಗದ ಕ್ರಮವನ್ನು ಪ್ರಶ್ನಿಸಿದ್ದೀರಿ (ನ್ಯಾಯಾಲಯದಲ್ಲಿ) ಎಂದ ಮೇಲೆ ಪ್ರಕರಣವು ನ್ಯಾಯಿಕ ವ್ಯಾಪ್ತಿಗೆ ಒಳಪಡುತ್ತದೆ. ಹಾಗಾದ ಮೇಲೆ ಪ್ರತಿಭಟಿಸಲು ಹೇಗೆ ಸಾಧ್ಯ? ಯಾರ ವಿರುದ್ಧ ಪ್ರತಿಭಟನೆ?” ಎಂದು ಆಕ್ಷೇಪಿಸಿತು.

ನ್ಯಾಯಾಲಯದ ಅಭಿಪ್ರಾಯವನ್ನು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್ ಹಾಗೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅನುಮೋದಿಸಿದರು.

ವಿಚಾರಣೆಯ ಸಂದರ್ಭದಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ರಾಜಸ್ಥಾನ ಹೈಕೋರ್ಟ್‌ ಮುಂದೆಯೂ ಇರುವುದನ್ನು ಗಮನಿಸಿದ ನ್ಯಾಯಾಲಯವು ಆ ಪ್ರಕರಣವನ್ನು ಸಹ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲು ನಿರ್ದೇಶಿಸಿತು. ಈ ಸಂಬಂಧ ಸುಪ್ರೀಂ ಕೋರ್ಟ್‌ ರೆಜಿಸ್ಟ್ರಿಗೆ ಹೈಕೋರ್ಟ್‌ನಲ್ಲಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿತು. ಎರಡೂ ಪ್ರಕರಣಗಳ ವಿಚಾರಣೆಯನ್ನು ಅಕ್ಟೋಬರ್ 21ರಂದು ನ್ಯಾಯಾಲಯವು ನಡೆಸಲಿದೆ.

Related Stories

No stories found.
Kannada Bar & Bench
kannada.barandbench.com