ಸಂಸದೀಯವಾಗಿ, ಕೋರ್ಟ್‌ ಮೂಲಕ ಪರಿಹಾರ ಪಡೆಯಬೇಕೆ ವಿನಾ ಹೆದ್ದಾರಿ ತಡೆ ಮೂಲಕ ಅಲ್ಲ: ರೈತರ ಪ್ರತಿಭಟನೆ ಕುರಿತು ಸುಪ್ರೀಂ

"ಹೆದ್ದಾರಿಗಳನ್ನು ನಿರಂತರವಾಗಿ ಹೀಗೆ ತಡೆಯಬಹುದೇ? ಇದಕ್ಕೆ ಕೊನೆಯೆಲ್ಲಿ?” ಎಂದು ನ್ಯಾಯಾಲಯ ಕೇಳಿತು.
Farmer protest
Farmer protestyahoo news

ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಹೆದ್ದಾರಿ ತಡೆ ನಡೆಸುತ್ತಿರುವ ಬಗ್ಗೆ ಸುಪ್ರೀಂಕೋರ್ಟ್‌ ಗುರುವಾರ ಮತ್ತೆ ಆಕ್ಷೇಪ ವ್ಯಕ್ತಪಡಿಸಿದೆ. ನ್ಯಾಯಾಂಗದ ವೇದಿಕೆ, ಚಳವಳಿ ಹಾಗೂ ಸಂಸದೀಯ ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕೆ ವಿನಾ ರಸ್ತೆ ಅಡ್ಡಗಟ್ಟುವ ಮೂಲಕ ಅಲ್ಲ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಹೇಳಿದೆ.

"ಹೆದ್ದಾರಿಗಳನ್ನು ನಿರಂತರವಾಗಿ ಹೀಗೆ ತಡೆಬಹುದೇ? ಇದಕ್ಕೆ ಕೊನೆಯೆಲ್ಲಿ?” ಎಂದು ನ್ಯಾಯಾಲಯ ಆಕ್ಷೇಪಿಸಿತು. ಅಲ್ಲದೆ ಈ ನಿಟ್ಟಿನಲ್ಲಿ ರೂಪಿಸಿರುವ ಕಾನೂನನ್ನು ಕಾರ್ಯಗತಗೊಳಿಸುವುದು ಕಾರ್ಯಾಂಗದ ಕರ್ತವ್ಯ ಎಂದು ಹೇಳಿತು. “ನಾವು ಯಾವುದಾದರೂ ನಿರ್ದೇಶನ ನೀಡಿದರೆ ಕಾರ್ಯಾಂಗದಲ್ಲಿ ಹಸ್ತಕ್ಷೇಪ ಮಾಡುತ್ತೇವೆ ಎಂದು ನೀವು ಹೇಳುತ್ತೀರಿ. ಕಾನೂನನ್ನು ಹೇಗೆ ಜಾರಿಗೆ ತರಬೇಕು ಎಂಬುದು ನಿಮಗೆ ಬಿಟ್ಟದ್ದು. ಅದನ್ನು ಜಾರಿಗೆ ತರಲು ನ್ಯಾಯಾಲಯಕ್ಕೆ ಯಾವುದೇ ಮಾರ್ಗವಿಲ್ಲ” ಎಂದು ಪೀಠ ಹೇಳಿತು.

ಪ್ರತಿಭಟನಾ ನಿರತ ರೈತರ ರಸ್ತೆ ತಡೆ ಸಂಬಂಧ ಉತ್ತರಪ್ರದೇಶದ ನೊಯ್ಡಾ ನಿವಾಸಿಯೊಬ್ಬರು ಪರಿಹಾರ ಕೋರಿ ಸಲ್ಲಿಸಿದ ಮನವಿ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಅರ್ಜಿದಾರರಾದ ಮೋನಿಕಾ ಅಗರ್‌ವಾಲ್‌ ಅವರು “ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ಸುಪ್ರೀಂಕೋರ್ಟ್‌ ಹಲವು ನಿರ್ದೇಶನಗಳನ್ನು ನೀಡಿದ್ದರೂ ಅವುಗಳನ್ನು ಪಾಲಿಸುತ್ತಿಲ್ಲ. ತಾನು ವೈದ್ಯಕೀಯ ಸಮಸ್ಯೆ ಇರುವ ಏಕಪೋಷಕ ತಾಯಿಯಾಗಿದ್ದು ಪ್ರತಿಭಟನೆಗಳಿಂದಾಗಿ ನೋಯ್ಡಾದಿಂದ ದೆಹಲಿಗೆ ಪಯಣಿಸುವುದು ದುಸ್ವಪ್ನವಾಗಿದೆ ಎಂದು ಮನವಿ ಸಲ್ಲಿಸಿದ್ದರು. ಸುಗಮ ಸಂಚಾರಕ್ಕಾಗಿ ಪ್ರತಿಭಟನಾ ನಿರತ ಸ್ಥಳ ತೆರವುಗೊಳಿಸುವಂತೆ ರೈತರಿಗೆ ಮನವಿ ಮಾಡುವುದಾಗಿ ಉತ್ತರಪ್ರದೇಶ ಸರ್ಕಾರ ಹೇಳಿತ್ತು.

Also Read
ರೈತರ ಪ್ರತಿಭಟನೆ: ಸಿಂಘು ಗಡಿ ತೆರವುಗೊಳಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಕಾರ

ಉನ್ನತ ಮಟ್ಟದ ಸಮಿತಿ ರಚಿಸಿ ಸಭೆಯಲ್ಲಿ ಭಾಗವಹಿಸುವಂತೆ ರೈತರನ್ನು ಕೋರಲಾಗಿತ್ತು. ಆದರೆ ಅವರು ನಿರಾಕರಿಸಿದರು ಎಂದು ಗುರುವಾರ ನಡೆದ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ಹೇಳಿದರು. ಪ್ರಸ್ತುತ ಪ್ರಕರಣದಲ್ಲಿ ಕೆಲವು ರೈತ ಪ್ರತಿನಿಧಿಗಳನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳಬೇಕು. ಇದರಿಂದ ಅವರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಸಿಗುತ್ತದೆ ಎಂದರು.

ಆಗ ರೈತರನ್ನು ಪ್ರತಿನಿಧಿಸುವ ನಾಯಕರು ಯಾರೆಂದು ಅರ್ಜಿದಾರರಿಗೆ ತಿಳಿದಿಲ್ಲದೆ ಇರುವುದರಿಂದ ಕೇಂದ್ರ ಅವರನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ ನ್ಯಾಯಾಲಯ ಈ ಸಂಬಂಧ ಅರ್ಜಿ ಸಲ್ಲಿಸುವಂತೆ ಮೆಹ್ತಾ ಅವರಿಗೆ ಸಲಹೆ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್‌ 4ಕ್ಕೆ ನಿಗದಿಯಾಗಿದೆ.

Related Stories

No stories found.
Kannada Bar & Bench
kannada.barandbench.com