ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿರುವ ಸ್ಥಳದಲ್ಲಿ ಕೋವಿಡ್ ಸ್ಫೋಟಿಸುವ ಸಾಧ್ಯತೆ ಇದ್ದು, ಧರಣಿನಿತರ ಸ್ಥಳದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿರುವ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ವಿವರಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ಪೀಠವು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ತಬ್ಲಿಘಿ ಜಮಾತ್ ವೇಳೆ ವಿದೇಶಿ ಆಹ್ವಾನಿತರೂ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಒಂದೆಡೆ ಸೇರುವ ಮೂಲಕ ಲಕ್ಷಾಂತರ ಜನರ ಆರೋಗ್ಯಕ್ಕೆ ಸಂಚಕಾರ ಉಂಟು ಮಾಡಿದ್ದಾರೆ. ಇಲ್ಲಿ ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸರ ಪಾತ್ರವೇನು ಎಂದು ಪ್ರಶ್ನಿಸಿ ಜಮ್ಮು ಮೂಲದ ವಕೀಲೆ ಸುಪ್ರಿಯಾ ಪಂಡಿತ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಸಿಜೆಐ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ತ್ರಿಸದಸ್ಯ ಪೀಠವು ನಡೆಸಿತು. ಈ ವೇಳೆ, ರೈತರ ಪ್ರತಿಭಟನೆಯ ವಿಚಾರ ಹಾಗೂ ಕೋವಿಡ್ ಸಂಕಷ್ಟದ ಬಗ್ಗೆ ಪ್ರಸ್ತಾಪವಾಯಿತು.
“ಏನಾಗುತ್ತಿದೆ ಎಂಬುದನ್ನು ನೀವು ನಮಗೆ ತಿಳಿಸಬೇಕು? ರೈತರನ್ನು ಕೋವಿಡ್‌ನಿಂದ ಸಂರಕ್ಷಿಸಲಾಗಿದೆಯೇ ಎಂಬುದು ನನಗೆ ತಿಳಿದಿಲ್ಲ. ರೈತರ ಪ್ರತಿಭಟನೆಯಲ್ಲಿ ಕೆಲವು ಸಮಸ್ಯೆಗಳು ಉದ್ಭವಿಸಬಹುದು. ಕೋವಿಡ್ ವ್ಯಾಪಿಸದಂತೆ ತಡೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಹೊರಡಿಸಲಾಗಿರುವ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿ” ಎಂದು ಕೇಂದ್ರ ಸರ್ಕಾರಕ್ಕೆ ಸಿಜೆಐ ಸೂಚಿಸಿದರು.
ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿರುವ ಪೀಠವು ರೈತರ ಪ್ರತಿಭಟನಾ ಸ್ಥಳದಲ್ಲಿ ಕೋವಿಡ್ ವ್ಯಾಪಿಸದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಹೆಚ್ಚುವರಿಯಾಗಿ ನಿರ್ದೇಶಿಸಿದೆ. ಈ ಹಿಂದೆ ನ್ಯಾಯಾಲಯವು ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿತ್ತು.
ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ದೇಶಾದ್ಯಂತ ಕೋವಿಡ್ ವ್ಯಾಪಿಸಲು ಕಾರಣವಾಗಿದ್ದ ನಿಜಾಮುದ್ದೀನ್ ಮಸೀದಿಯ ಮುಖ್ಯಸ್ಥ ಮೌಲಾನಾ ಸಾದ್ ಅವರನ್ನು ದೆಹಲಿ ಪೊಲೀಸರು ಬಂಧಿಸಲು ವಿಫಲವಾಗಿದ್ದರು ಎಂದು ಅರ್ಜಿದಾರೆ ಸುಪ್ರಿಯಾ ಆರೋಪಿಸಿದ್ದಾರೆ.
“ಸಾಮಾಜಿಕ ಅಂತರದ ಮೂಲಕ ಕೊರೊನಾ ನಿಯಂತ್ರಿಸುವ ನಿಯಮವನ್ನು ಉಲ್ಲಂಘಿಸಿ ಮಾರ್ಚ್ 8ರಿಂದ ನೂರಾರು ಜನರು ಶತಮಾನಕ್ಕೂ ಹಳೆಯದಾದ ಮಸೀದಿಯಲ್ಲಿ ಉಳಿದುಕೊಂಡಿದ್ದರು. ಮಲೇಷ್ಯಾ, ಇಂಡೋನೇಷ್ಯಾ, ಸೌದಿ ಅರೇಬಿಯಾ ಮತ್ತು ಕಜಾಕಿಸ್ತಾನ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ 2,000ಕ್ಕೂ ಹೆಚ್ಚು ಮಂದಿಯು ತಬ್ಲೀಘಿ ಜಮಾತ್ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದರು” ಎಂದು ಅವರು ದೂರಿದ್ದಾರೆ.
ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಮಾರ್ಚ್‌ನಲ್ಲಿ ಮುಸ್ಲಿಂ ಸಂಘಟನೆ ತಬ್ಲೀಘಿ ಜಮಾತ್ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಜನರಿಗೆ ಕೊರೊನಾ ಸೋಂಕು ಹರಡಿದೆ ಎಂಬ ಹಿನ್ನೆಲೆಯಲ್ಲಿ ಮಾರ್ಚ್ 30ರಂದು ದೆಹಲಿಯ ನಿಜಾಮುದ್ದೀನ್ ಪ್ರದೇಶವನ್ನು ಬಂದ್ ಮಾಡಲಾಗಿತ್ತು. ಮಾರ್ಚ್ 13 ಮತ್ತು 24ರ ಅವಧಿಯಲ್ಲಿ ನಿಜಾಮುದ್ದೀನ್‌ನಲ್ಲಿರುವ ತಬ್ಲೀಘಿ ಜಮಾತ್‌ನ ಪ್ರಧಾನ ಕಚೇರಿಗೆ ಕನಿಷ್ಠ 16,500 ಮಂದಿ ಭೇಟಿ ನೀಡಿದ್ದರು. “ಮೌಲಾನಾ ಸಾದ್ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು” ಎಂದು ಅರ್ಜಿದಾರೆ ಪರ ವಕೀಲ ಓಂಪ್ರಕಾಶ್ ಪರಿಹಾರ್ ಹೇಳುತ್ತಿದ್ದಂತೆ ಅವರನ್ನು ಅರ್ಧಕ್ಕೆ ತಡೆದು ನಿಲ್ಲಿಸಿದ ಸಿಜೆಐ ಬೊಬ್ಡೆ ಅವರು “ಕೋವಿಡ್ ನಿಯಂತ್ರಿಸುವುದು ನ್ಯಾಯಾಲಯದ ಆದ್ಯತೆಯಾಗಿದೆ” ಎಂದರು.
ಕೋವಿಡ್ ವ್ಯಾಪಿಸದಂತೆ ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ವಿವರವನ್ನು ಒಳಗೊಂಡ ಪ್ರತಿಕ್ರಿಯೆಯನ್ನು ಸಲ್ಲಿಸಲಾಗುವುದು. ಇದರ ಜೊತೆಗೆ ಪ್ರತಿಭಟನಾನಿರತರನ್ನು ಮನವೊಲಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದೂ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ವಿವರಿಸಿದರು.