ವಿವಾದಿತ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿಯ ಹೊರವಲಯದಲ್ಲಿ ಪ್ರತಿಭಟಿಸುತ್ತಿರುವ ವಿವಿಧ ರಾಜ್ಯಗಳ ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಬಿಕ್ಕಿಟ್ಟಿಗೆ ಸಂಬಂಧಿಸಿದಂತೆ ವಾಸ್ತವದಲ್ಲಿ ಯಾವುದೇ ತೆರನಾದ ಸುಧಾರಣೆಯಾಗಿಲ್ಲ ಎಂದು ಬುಧವಾರ ಸುಪ್ರೀಂ ಕೋರ್ಟ್ ಹೇಳಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯಿದೆಗಳ ಸಿಂಧುತ್ವ ಪ್ರಶ್ನಿಸಿ ವಕೀಲ ಮನೋಹರ್ ಲಾಲ್ ಶರ್ಮಾ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ತ್ರಿಸದಸ್ಯ ಪೀಠವು ರೈತರು ಮತ್ತು ಸರ್ಕಾರದ ನಡುವೆ ಮಾತುಕತೆಗೆ ಪ್ರೋತ್ಸಾಹಿಸುವುದು ಮತ್ತು ಸಂವಾದದ ಹಾದಿಯನ್ನು ಸುಗಮಗೊಳಿಸುವ ಇರಾದೆಯನ್ನು ನ್ಯಾಯಾಲಯ ಹೊಂದಿದೆ ಎಂದು ಹೇಳಿದೆ.
ರೈತರ ಪ್ರತಿಭಟನೆಗಳು ಮತ್ತು ವಿವಾದಿತ ಕೃಷಿ ಕಾಯಿದೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಇದೇ ಶುಕ್ರವಾರ ನಡೆಸುವುದಾಗಿ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಹೇಳಿತು.
ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ನಡೆಯುತ್ತಿದ್ದು, ಎಲ್ಲಾ ಮನವಿಗಳನ್ನು ಒಮ್ಮೆಲೆ ಶುಕ್ರವಾರದಂದು ವಿಚಾರಣೆಗೆ ನಿಗದಿಗೊಳಿಸದಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು. “ನಾವು ಆರೋಗ್ಯಕರವಾದ ಚರ್ಚೆ ನಡೆಸುತ್ತಿದ್ದೇವೆ,” ಎಂದು ಮೆಹ್ತಾ ಹೇಳಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ (ಜನವರಿ 11) ಮುಂದೂಡಿದೆ.
ವಿವಾದಿತ ಕೃಷಿ ಕಾಯಿದೆಗಳನ್ನು ಪ್ರಶ್ನಿಸಿರುವ ಅರ್ಜಿಗಳ ಜೊತೆಗೆ ದೆಹಲಿಎ ನ್‌ಸಿಆರ್ ಗಡಿಗಳಲ್ಲಿ ಪ್ರತಿಭಟನಾ ನಿರತರಾಗಿದ್ದ ರೈತರನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆಯನ್ನೂ ನ್ಯಾಯಾಲಯ ನಡೆಸಲಿದೆ. ಧರಣಿ ನಿರತ ರೈತರು ರಸ್ತೆಗಳನ್ನು ನಿರ್ಬಂಧಿಸುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂದು ಅರ್ಜಿದಾರರು ದೂರಿದ್ದಾರೆ.
ಪ್ರತಿಭಟನಾ ನಿರತರು ರಸ್ತೆಗಳನ್ನು ನಿರ್ಬಂಧಿಸುತ್ತಿರುವುದರಿಂಧ ಅವರನ್ನು ಸ್ಥಳಾಂತರಿಸಬೇಕಿದೆ. ಹೋರಾಟಗಾರರು ರಸ್ತೆ ಬಂದ್ ಮಾಡುವ ಮೂಲಕ ದೆಹಲಿಯಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಸೋಂಕಿತರಿಗೆ ತುರ್ತು/ವೈದ್ಯಕೀಯ ಸೇವೆಗಳನ್ನು ನೀಡುವುದಕ್ಕೆ ತಡೆಯಾಗುತ್ತಿದೆ ಎಂದು ಕಾನೂನು ವಿದ್ಯಾರ್ಥಿ ರಿಷಬ್ ಶರ್ಮಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮನವಿಯಲ್ಲಿ ವಿವರಿಸಿದ್ದರು.
ಈ ನಿಟ್ಟಿನಲ್ಲಿ ಯಾವುದೇ ಆದೇಶ ಹೊರಡಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಕೃಷಿ ತಜ್ಞರು ಮತ್ತು ಸ್ವತಂತ್ರ ವ್ಯಕ್ತಿಗಳನ್ನು ಒಳಗೊಂಡ ಸಮಿತಿ ರಚಿಸಿ, ಸಮಸ್ಯೆ ಬಗೆಹರಿಸಲು ಮುಂದಾಗುವ ಬಗ್ಗೆ ತಿಳಿಸಿತ್ತು.