![[ಕೃಷಿಕರ ಪ್ರತಿಭಟನೆ] ರೈತ ಸಂಘದ ಪ್ರತಿನಿಧಿಗಳನ್ನು ಸೇರ್ಪಡೆ ಮಾಡಿ ಸುಪ್ರೀಂಕೋರ್ಟ್ ಸಮಿತಿ ಪುನಾರಚಿಸಲು ಮನವಿ](https://gumlet.assettype.com/barandbench-kannada%2F2021-01%2F792ff0a2-7204-4671-8829-2d4848c9ae21%2Fbarandbench_2021_01_3a0f9660_2b9c_4f11_8325_bbfe1c02e304_Farmers_Protest.jpg?auto=format%2Ccompress&fit=max)
ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಲು ಸುಪ್ರೀಂಕೋರ್ಟ್ ನೇಮಕ ಮಾಡಿರುವ ಸಮಿತಿಯ ಮೂವರು ಸದಸ್ಯರನ್ನು ತೆಗೆದು ಹಾಕುವಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ವಕೀಲ ಎ ಪಿ ಸಿಂಗ್ ಅವರ ಮೂಲಕ ಭಾರತೀಯ ಕಿಸಾನ್ ಯೂನಿಯನ್ ಲೋಕಶಕ್ತಿ (ಬಿಕೆಯುಎಲ್) ಸಲ್ಲಿಸಿರುವ ಅರ್ಜಿಯಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಮತ್ತು ರೈತ ಸಂಘಗಳ ಪ್ರತಿನಿಧಿಗಳಂತಹ ನಿಷ್ಪಕ್ಷಪಾತ ವ್ಯಕ್ತಿಗಳನ್ನು ಸೇರ್ಪಡೆ ಮಾಡಿ ಸಮಿತಿಯನ್ನು ಪುನಾರಚಿಸಬೇಕು ಎಂದು ಕೋರಲಾಗಿದೆ.
ಜನವರಿ 12 ರಂದು ಸುಪ್ರೀಂ ಕೋರ್ಟ್ ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್, ಕೃಷಿ ತಜ್ಞ ಡಾ.ಪ್ರಮೋದ್ ಕುಮಾರ್ ಜೋಶಿ, ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ ಹಾಗೂ ʼಶೇತ್ಕರೀ ಸಂಘಟನಾʼದ ಅಧ್ಯಕ್ಷ ಅನಿಲ್ ಘನ್ವತ್ ನೇತೃತ್ವದ ನಾಲ್ಕು ಸದಸ್ಯರ ಸಮಿತಿ ರಚಿಸಿತ್ತು. ಪ್ರತಿಭಟನಾ ನಿರತ ರೈತರು ಮತ್ತಿತರ ಭಾಗೀದಾರರ ಅಹವಾಲುಗಳನ್ನು ಆಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಆದರೆ, ಭೂಪಿಂದರ್ ಸಿಂಗ್ ಮನ್ ನಂತರ ಸಮಿತಿಯಿಂದ ದೂರ ಉಳಿದಿದ್ದರು.
ಕೃಷಿ ಕಾನೂನುಗಳನ್ನು ರದ್ದುಪಡಿಸಬಾರದು ಎಂದು ಮನ್ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ ಎಂದು ಬಿಕೆಯುಎಲ್ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ. 2020 ರ ಡಿಸೆಂಬರ್ 15 ರಂದು ʼಫೈನಾನ್ಷಿಯಲ್ ಎಕ್ಸ್‌ಪ್ರೆಸ್ʼ ಪತ್ರಿಕೆಯಲ್ಲಿ ಪ್ರಕಟವಾದ ಬರಹವೊಂದರ ಸಹ ಲೇಖಕರಾದ ಪ್ರಮೋದ್ ಕುಮಾರ್ ಜೋಶಿ ಅವರು "ಕೃಷಿ ಕಾನೂನುಗಳಲ್ಲಿ ಯಾವುದೇ ಸಡಿಲಿಕೆ ಮಾಡಿದರೆ ಅದು ಉದಯೋನ್ಮುಖ ಜಾಗತಿಕ ಅವಕಾಶಗಳನ್ನು ಬಳಸಿಕೊಳ್ಳಲು ಭಾರತೀಯ ಕೃಷಿಗೆ ಅಡ್ಡಿಯಾಗುತ್ತದೆ ಎಂದಿದ್ದರು" ಎಂಬುದನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಅಶೋಕ್ ಗುಲಾಟಿ ಅವರು ಇಂಡಿಯನ್ ಎಕ್ಸ್‌ಪ್ರೆಸ್‌ನ ಲೇಖನವೊಂದರಲ್ಲಿ ಕೃಷಿ ಕಾನೂನುಗಳು ಸರಿಯಾದ ದಿಕ್ಕಿನಲ್ಲಿವೆ ಎಂದು ವಾದಿಸಿದ್ದರು. ʼದಿ ಹಿಂದೂ ಬ್ಯುಸಿನೆಸ್ ಲೈನ್ʼ ಪ್ರಕಟಿಸಿದ ಲೇಖನದಲ್ಲಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬಾರದು ಎಂದು ಮಹಾರಾಷ್ಟ್ರ ಮೂಲದ ಶೇತ್ಕರೀ ಸಂಘಟನೆಯ ನಾಯಕ ಅನಿಲ್ ಘನ್ವತ್ ಹೇಳಿದ್ದಾರೆ. ಹೀಗಾಗಿ ಈ ಮೂವರೂ ಸದಸ್ಯರು ಸಮಿತಿಯಲ್ಲಿ ಮುಂದುವರಿದರೆ ಸಹಜ ನ್ಯಾಯದ ತತ್ವಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಅಲ್ಲದೆ ಗಣರಾಜ್ಯೋತ್ಸವದಂದು ನಡೆಯಲಿರುವ ಟ್ರ್ಯಾಕ್ಟರ್ ಮೆರವಣಿಗೆಗೆ ತಡೆಯಾಜ್ಞೆ ನೀಡುವಂತೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಂತೆ ಕೂಡ ಮನವಿಯಲ್ಲಿ ಕೋರಲಾಗಿದೆ.