
ಮಕ್ಕಳ ಪಾಲನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮಗುವಿನ ಆರೋಗ್ಯ, ಯೋಗಕ್ಷೇಮ ಬಲಿಕೊಟ್ಟು ಅದನ್ನು ಭೇಟಿಯಾಗುವುದು ತಂದೆಯ ಹಕ್ಕು ಎನ್ನಲಾಗದು ಎಂದು ಸುಪ್ರೀಂ ಕೋರ್ಟ್ ಈಚೆಗೆ ತಿಳಿಸಿದೆ.
ವಿಚ್ಛೇದಿತ ಪೋಷಕರ (ತಂದೆ ತಾಯಿ ಇಬ್ಬರೂ ವೃತ್ತಿಯಿಂದ ವೈದ್ಯರು) ನಡುವೆ ಮಗುವನ್ನು ವಶಕ್ಕೆ ಪಡೆಯುವ ಕಾನೂನು ವ್ಯಾಜ್ಯದಲ್ಲಿ ಸಿಲುಕಿದ ಮಗುವಿಗೆ ಸಂಬಂಧಿಸಿದಂತೆ ಮಾಡಲಾಗಿದ್ದ ಮಧ್ಯಂತರ ಭೇಟಿ ವ್ಯವಸ್ಥೆಯನ್ನು ಬದಲಿಸಿದ ವಿಕ್ರಮ್ ನಾಥ್ ಮತ್ತು ಪಿ ಬಿ ವರಾಳೆ ಅವರಿದ್ದ ಪೀಠ ಈ ವಿಚಾರ ತಿಳಿಸಿತು.
ಪ್ರತಿ ಭಾನುವಾರ ಮಗುವಿನೊಂದಿಗೆ ತಂದೆಯ ಭೇಟಿಗೆ ನಾಲ್ಕು ಗಂಟೆಗಳ ಅವಕಾಶ ಕಲ್ಪಿಸಿ ಮಧುರೈನಿಂದ ಕರೂರ್‌ಗೆ ಪ್ರತಿ ವಾರ ಕರೆತರುವಂತೆ ಮದ್ರಾಸ್ ಹೈಕೋರ್ಟ್ ಈ ಹಿಂದೆ ಮಗುವಿನ ತಾಯಿಗೆ ಆದೇಶ ನೀಡಿತ್ತು. ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ತಾಯಿ ಈ ಆದೇಶ ಪ್ರಶ್ನಿಸಿದ್ದರು.
ತಾಯಿ ಮತ್ತು ಮಗಳು ವಾಸಿಸುವ ಮಧುರೈಗೇ ಬಂದು ತನ್ನ ಮಗಳನ್ನು ಭೇಟಿಯಾಗುವಂತೆ ತಂದೆಗೆ ಹೇಳುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಮಾರ್ಪಡಿಸಿತು.
“ಅಪ್ರಾಪ್ತ ಮಗುವಿನ ಹಿತಾಸಕ್ತಿಯೇ ಅತ್ಯುನ್ನತವಾದುದು. ಪೋಷಕರ ಹಕ್ಕುಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡುವಾಗ ಮಗುವಿನ ಆರೋಗ್ಯದೊಂದಿಗೆ ರಾಜಿಯಾಗುವಂತಿಲ್ಲ. ಅಲ್ಲದೆ ಪ್ರತಿವಾದಿಗೆ ಮತುವನ್ನು ಭೇಟಿ ಮಾಡುವ ಹಕ್ಕು ಇದ್ದರೂ ಅದು ಮಗುವಿನ ಆರೋಗ್ಯ ಮತ್ತು ಯೋಗಕ್ಷೇಮವನ್ನು ಬಲಿಕೊಡುವಂತಿಲ್ಲ” ಎಂದು ನ್ಯಾಯಾಲಯ ವಿವರಿಸಿದೆ.
ಮಗುವಿನ ಪೋಷಕರು 2021ರಲ್ಲಿ ವಿವಾಹವಾಗಿದ್ದರು. ಮಗು ಹುಟ್ಟುವ ಒಂದು ವರ್ಷ ಮುನ್ನ ಅಂದರೆ 2023 ರಲ್ಲಿ ತಾಯಿ ವಿಚ್ಛೇದನ ಕೋರಿ ಮನವಿ ಸಲ್ಲಿಸಿದ್ದರು. ಪತಿ ಕ್ರೌರ್ಯ ಎಸಗುತ್ತಿದ್ದು ಕೌಟುಂಬಿಕ ಹಿಂಸೆ ಅನುಭವಿಸುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದರು.
ವಿಚ್ಛೇದನ ಪ್ರಕ್ರಿಯೆಗಳು ಬಾಕಿ ಇರುವಂತೆಯೇ ತಂದೆ ಸಲ್ಲಿಸಿದ್ದ ಮಗುವಿನ ಭೇಟಿ ಹಕ್ಕನ್ನು ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿತ್ತು. ಮತ್ತು ಪ್ರತಿ ಭಾನುವಾರ ಎರಡು ಗಂಟೆಗಳ ಕಾಲ ಮಗುವನ್ನು ಕರೂರ್‌ಗೆ ಕರೆತರುವಂತೆ ವಿಚ್ಛೇದಿತ ಪತ್ನಿಗೆ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಮಗುವಿನ ತಾಯಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಧುರೈನಿಂದ 150 ಕಿಲೋಮೀಟರ್ ದೂರ ಇರುವ ಕರೂರ್‌ಗೆ ಪ್ರತಿವಾರ ತನ್ನ ಮಗುವನ್ನು ಕರೆದೊಯ್ದರೆ ಅದು ಮಗುವಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಮಗುವಿನ ತಂದೆಯ ಹಿಂಸಾಪ್ರವೃತ್ತಿ ಕುರಿತಂತೆಯೂ ಆಕೆ ಆತಂಕ ವ್ಯಕ್ತಪಡಿಸಿದ್ದರು.
ಪುರುಷ ನೈಸರ್ಗಿಕ ರಕ್ಷಕನಾಗಿರುವುದರಿಂದ ಭೇಟಿಯ ಹಕ್ಕುಗಳಿಗೆ ಅರ್ಹನಾಗಿರುತ್ತಾನೆ ಎಂದ ಹೈಕೋರ್ಟ್ ಪ್ರತಿ ಭಾನುವಾರ ನಾಲ್ಕು ಗಂಟೆಗಳ ಭೇಟಿಗೆ ಅವಕಾಶ ನೀಡಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿತು. ಹೈಕೋರ್ಟ್ ಆದೇಶ ಮಗುವಿನ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂಬ ಕಾರಣಕ್ಕೆ ತಾಯಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.