ಪಿಎಂ ಕೇರ್ಸ್ ನಿಧಿಯಿಂದ ಖರೀದಿಸಲಾದ ವೆಂಟಿಲೇಟರ್‌ಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಅಸೂಕ್ಷ್ಮ ಹೇಳಿಕೆ ನೀಡಿದ ಮತ್ತು ವೆಂಟಿಲೇಟರ್ ಉತ್ಪಾದಕರನ್ನು ಸಮರ್ಥಿಸಲು ಮುಂದಾದ ಕೇಂದ್ರ ಸರ್ಕಾರದ ನಡತೆಗೆ ಬಾಂಬೆ ಹೈಕೋರ್ಟ್‌ನ ಔರಂಗಬಾದ್ ಪೀಠವು ಗಂಭೀರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.
ಸ್ವೀಕರಿಸುವಾಗ ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಔರಂಗಬಾದ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿರುವ (ಜಿಎಂಸಿಎಚ್) ವೈದ್ಯರಿಗೆ ಅವುಗಳ ಬಳಕೆಯ ಕುರಿತು ಸರಿಯಾದ ತರಬೇತಿ ಇರಲಿಲ್ಲ ಎಂಬ ಕೇಂದ್ರ ಸರ್ಕಾರದ ಸಮರ್ಥನೆಯನ್ನು ನ್ಯಾಯಮೂರ್ತಿಗಳಾದ ಆರ್ ವಿ ಘುಗೆ ಮತ್ತು ಬಿ ಯು ದೇಬದ್ವಾರ್ ಅವರಿದ್ದ ವಿಭಾಗೀಯ ಪೀಠ ನಿರಾಕರಿಸಿತು.
ವೆಂಟಿಲೇರ್‌ಗಳ ಉತ್ಪಾದಕರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುವ ಮೂಲಕ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಜಯ್ ತಲ್ಹಾರ್ ಅವರು ಸಮರ್ಥನೆಗೆ ಇಳಿದಿದ್ದಾರೆ ಎಂದು ಪೀಠ ಕಿಡಿಕಾರಿತು. “ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುವ ರೀತಿಯಲ್ಲಿದ್ದವು ಎಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸುವ ಮೂಲಕ ಉತ್ಪಾದಕರನ್ನು ಸಮರ್ಥಿಸಿಕೊಂಡಿದೆ. ಉತ್ಪಾದಕರ ಪರವಾಗಿ ಗೋಷ್ಠಿ ನಡೆಸುತ್ತಿದ್ದಾರೇನೋ ಎಂಬ ರೀತಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ನ್ಯಾಯಾಲಯದಲ್ಲಿ ವಾದಿಸಿದರು” ಎಂದಿತು.
ಕೆಸರೆರಚಾಟಕ್ಕೆ ಮುಂದಾಗದಿದ್ದರೆ ನಾವು ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತಿದ್ದೆವು ಎಂದೂ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. “ಸಮರ್ಥಿಸಿಕೊಳ್ಳುವುದರ ಬದಲಿಗೆ ರೋಗಿಗಳ ಆರೋಗ್ಯವನ್ನು ಸೂಕ್ಷ್ಮವಾಗಿ ನೋಡಿಕೊಳ್ಳುವುದು ಕಲ್ಯಾಣ ರಾಜ್ಯದ ಪ್ರಮುಖ ಉದ್ದೇಶವಾಗಿದೆ. ಜನರ ಆರೋಗ್ಯವೇ ಪ್ರಧಾನವಾಗಬೇಕು” ಎಂದಿದೆ.
ಪೂರೈಸಲಾದ 150 ವೆಂಟಿಲೇಟರ್‌ಗಳ ಪೈಕಿ 113 ವೆಂಟಿಲೇಟರ್‌ಗಳನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಳವಡಿಸಲಾಗಿದ್ದು, ಅವುಗಳ ದೂಷಪೂರಿತವಾಗಿವೆ ಎಂಬ ವಿಚಾರವನ್ನು ಪೀಠದ ಗಮನಕ್ಕೆ ತರಲಾಯಿತು. ಆಗ ನ್ಯಾಯಾಲಯವು ದೋಷಪೂರಿತ ವೆಂಟಿಲೇಟರ್‌ಗಳಿಗೆ ಸಂಬಂಧಿಸಿದಂತೆ ಯಾವ ಕ್ರಮಕೈಗೊಳ್ಳಲಾಗುವುದು ಎಂಬುದನ್ನು ಬಹಿರಂಗಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು.
ಪಿಎಂ ಕೇರ್ಸ್‌ನಿಂದ 150 ವೆಂಟಿಲೇಟರ್‌ಗಳನ್ನು ಪೂರೈಸಲಾಗಿಲ್ಲ ಎಂದು ಎಎಸ್‌ಜಿ ಅಜಯ್ ತೆಲ್ಹಾರ್ ಹೇಳಿದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಲ್ಲಿಸಿರುವ ಅಫಿಡವಿಟ್ ಆಧರಿಸಿ ಸಮರ್ಥನೆಗೆ ಇಳಿದ ಎಎಸ್‌ಜಿ ಅವರು ರಾಜಕೋಟ್‌ನ ಜ್ಯೋತಿ ಸಿಎನ್‌ಸಿ ಆಟೊಮೇಷನ್ ಕಂಪೆನಿ ವೆಂಟಿಲೇಟರ್ ಉತ್ಪಾದಿಸಿದ್ದು, ಅವುಗಳನ್ನು ಜಾಗತಿಕ ಮಟ್ಟದ ಮಾನದಂಡಗಳನ್ನು ಆಧರಿಸಿ ತಪಾಸಣೆ ನಡೆಸಲಾಗಿದೆ ಎಂದರು.
“ವೆಂಟಿಲೇಟರ್‌ಗಳು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಹೇಳಲು ಕೇಂದ್ರ ಆರೋಗ್ಯ ಇಲಾಖೆಯ ಬಳಿ ಯಾವುದೇ ದಾಖಲೆಗಳು ಇಲ್ಲ. 113 ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲಾಗಿದೆ” ಎಂದರು. ಇದಲ್ಲದೆ, ಎಎಸ್‌ಜಿ ತೆಲ್ಹಾರ್ ಅವರು ಜಿಎಂಸಿಎಚ್‌ನಲ್ಲಿರುವ ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗೆ ವೆಂಟಿಲೇಟರ್ ಕಾರ್ಯನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಗಿರಲಿಲ್ಲ ಎಂದರು.
ಇದಕ್ಕೆ ಕೆರಳಿದ ನ್ಯಾಯಾಲಯವು, “ವೈದ್ಯಕೀಯ ತಜ್ಞರ ವರದಿಗಳನ್ನು ಪ್ರಶ್ನಿಸುವುದರ ಬದಲಿಗೆ ಸಮಾಜದ ಹಿತದೃಷ್ಟಿಯಿಂದ ವರದಿಯನ್ನು ಗೌರವಿಸಿ, ದೋಷಪೂರಿತ ಯಂತ್ರಗಳನ್ನು ಸರಿಪಡಿಸುವ ಯತ್ನ ಮಾಡಿದ್ದರೆ ನಾವು ಆರೋಗ್ಯ ಇಲಾಖೆಗೆ ಮೆಚ್ಚುಗೆ ಸೂಚಿಸುತ್ತಿದ್ದೆವು” ಎಂದು ನ್ಯಾಯಾಲಯ ಹೇಳಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಕೊರತೆ ಮತ್ತು ಬಳಕೆದಾರರ ಕೈಪಿಡಿಯನ್ನು ಸರಿಯಾಗಿ ಪಾಲಿಸದಿರುವುದರಿಂದ ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಜ್ಯೋತಿ ಸಿಎನ್‌ಸಿ ಅಫಿಡವಿಟ್‌ನಲ್ಲಿ ತಗಾದೆ ಎತ್ತಿದೆ. ಮಹಾರಾಷ್ಟ್ರದ ಇತರೆ ಕಡೆಗೆ ಪೂರೈಸಲಾಗಿರುವ 300 ವೆಂಟಿಲೇಟರ್‌ಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅದು ವಾದಿಸಿದೆ.
ವೆಂಟಿಲೇಟರ್‌ಗಳು ಸಮರ್ಥವಾಗಿ ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ ಹಾಗೂ ದೂಷಪೂರಿತ ಯಂತ್ರಗಳನ್ನು ಸರಿಪಡಿಸುವುದರ ಬಗ್ಗೆ ಆರೋಗ್ಯ ಇಲಾಖೆಯು ಪರಿಹಾರ ಕ್ರಮಕೈಗೊಳ್ಳಲಿದೆ ಎಂದು ಎಎಸ್‌ಜಿ ಪೀಠಕ್ಕೆ ತಿಳಿಸಿದರು.
ಔರಂಗಬಾದ್‌ನ ಜಿಎಂಸಿಎಚ್ ಆಸ್ಪತ್ರೆಗೆ ವೆಂಟಿಲೇಟರ್ ಪೂರೈಸುವಾಗ ಜ್ಯೋತಿ ಸಿಎನ್‌ಸಿ ಸಂಸ್ಥೆಯು ಆಸ್ಪತ್ರೆಯಲ್ಲಿ ಸೌಲಭ್ಯದ ಕುರಿತು ಹಾಗೂ ಯಂತ್ರಗಳನ್ನು ನಡೆಸುವ ತಂತ್ರಜ್ಞರಿಗೆ ತರಬೇತಿ ನೀಡಿರುವುದರ ಬಗ್ಗೆ ಮಾಹಿತಿ ಪಡೆದುಕೊಂಡಿತ್ತೇ ಎಂಬುದನ್ನು ತಿಳಿಸುವಂತೆ ಆರೋಗ್ಯ ಇಲಾಖೆಗೆ ನ್ಯಾಯಾಲಯ ನಿರ್ದೇಶಿದೆ. ಜೂನ್ 2ಕ್ಕೆ ವಿಚಾರಣೆ ಮುಂದೂಡಲಾಗಿದೆ.