
ಆಪರೇಷನ್ ಸಿಂಧೂರ್ ಕುರಿತ ಕೆಲವು ಹೇಳಿಕೆಗಳಿಗೆ ಸಂಬಂಧಿಸಿದಂತೆ ಸೋನಿಪತ್‌ನ ಅಶೋಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಲಿ ಖಾನ್ ಮಹ್ಮುದಾಬಾದ್ ಅವರ ಬಂಧನ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅವರಿಗೆ ಬುಧವಾರ ಮಧ್ಯಂತರ ಜಾಮೀನು ನೀಡಿದೆ.
ಫೇಸ್‌ಬುಕ್ ಹೇಳಿಕೆಯಲ್ಲಿ , ಮಹ್ಮುದಾಬಾದ್ ಅವರು 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಮೂಲಕ ಭಾರತವು ಪಾಕಿಸ್ತಾನಕ್ಕೆ "ನೀವು ನಿಮ್ಮ ಭಯೋತ್ಪಾದನಾ ಸಮಸ್ಯೆಯನ್ನು ನಿಭಾಯಿಸದಿದ್ದರೆ ನಾವು ನಿಭಾಯಿಸಬೇಕಾಗುತ್ತದೆ!" ಎಂಬ ಸಂದೇಶವನ್ನು ನೀಡಿದೆ ಎಂದು ಬರೆದುಕೊಂಡಿದ್ದರು.
ಮುಂದುವರೆದು, ಯುದ್ಧವನ್ನು ಕುರುಡಾಗಿ ಬೆಂಬಲಿಸುವವರನ್ನು ಅವರು ಟೀಕಿಸಿದ್ದರು. ಅಲ್ಲದೆ, ಆಪರೇಷನ್ ಸಿಂಧೂರ್ ಕುರಿತು ಮಾಧ್ಯಮಗೋಷ್ಠಿಯ ನೇತೃತ್ವ ವಹಿಸಿದ್ದ ಕರ್ನಲ್ ಸೋಫಿಯಾ ಕುರೇಷಿಯನ್ನು ಹೊಗಳುತ್ತಿರುವ ಬಲಪಂಥೀಯ ಬೆಂಬಲಿಗರು, ಗುಂಪು ಹಲ್ಲೆ ಮತ್ತು ಆಸ್ತಿಗಳನ್ನು ಮನಸೋ ಇಚ್ಛೆಯಾಗಿ ಧ್ವಂಸಗೊಳಿಸುತ್ತಿರುವ ಪ್ರಕರಣಗಳ ಸಂತ್ರಸ್ತರ ಪರವಾಗಿಯೂ ಮಾತನಾಡುವಂತೆ ಕೋರಿದ್ದರು.
ಪ್ರೊ. ಅಲಿ ವಿರುದ್ಧ ಹರಿಯಾಣ ಪೊಲೀಸರು ದಾಖಲಿಸಿದ್ದ ಎರಡು ಎಫ್‌ಐಆರ್‌ಗಳಿಗೆ ತಡೆ ನೀಡಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಮಧ್ಯಂತರ ಜಾಮೀನಿನ ಮೇಲೆ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು.
ಖಾನ್ ತಮ್ಮ ಹೇಳಿಕೆಗಳಲ್ಲಿ ಬಳಿಸಿ ಭಾಷೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ ಅವು ದ್ವಂದ್ವಾರ್ಥಕ್ಕೆ ಎಡೆಮಾಡಿಕೊಡಬಹುದು ಎಂದಿತು. ತನಿಖೆಗೆ ತಡೆಯಾಜ್ಞೆ ನೀಡುವ ನಿಟ್ಟಿನಲ್ಲಿ ಪ್ರೊ ಅಲಿ ತಮ್ಮ ವಾದ ಮಂಡಿಸಿಲ್ಲ ಎಂದ ನ್ಯಾಯಾಲಯ ಆಪರೇಷನ್ ಸಿಂಧೂರ್ ಕುರಿತಂತೆ ಆನ್‌ಲೈನ್ ಹೇಳಿಕೆಯನ್ನಾಗಲಿ ಅಥವಾ ಭಾಷಣವನ್ನಾಗಲಿ ಮಾಡಬಾರದು ಎನ್ನುವುದೂ ಸೇರಿದಂತೆ ವಿವಿಧ ಜಾಮೀನು ಷರತ್ತುಗಳನ್ನು ವಿಧಿಸಿತು.