ಸುಪ್ರೀಂನಿಂದ ಐದನೇ ಸಾಂವಿಧಾನಿಕ ಪೀಠದ ರಚನೆ; ಒಟ್ಟು 29 ನ್ಯಾಯಮೂರ್ತಿಗಳಲ್ಲಿ 25 ಮಂದಿ ಸಾಂವಿಧಾನಿಕ ಪೀಠಗಳ ಭಾಗ

ಐದನೇ ಸಾಂವಿಧಾನ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ ಟಿ ರವಿಕುಮಾರ್ ಇರಲಿದ್ದಾರೆ.
ಸುಪ್ರೀಂನಿಂದ ಐದನೇ ಸಾಂವಿಧಾನಿಕ ಪೀಠದ ರಚನೆ; ಒಟ್ಟು 29 ನ್ಯಾಯಮೂರ್ತಿಗಳಲ್ಲಿ 25 ಮಂದಿ ಸಾಂವಿಧಾನಿಕ ಪೀಠಗಳ ಭಾಗ
Published on

ವಾಟ್ಸಾಪ್‌ ಗೌಪ್ಯತಾ ನೀತಿ, ಪಾರದರ್ಶಕ ರೀತಿಯಲ್ಲಿ ಚುನಾವಣಾ ಆಯೋಗದ ಸದಸ್ಯರ ನೇಮಕ, ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಿಕೆ ಪ್ರಶ್ನಿಸಿದ ಅರ್ಜಿ, ದಯಾಮರಣ ಸೇರಿದಂತೆ ಆರು ಪ್ರಕರಣಗಳ ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ ಐದನೇ ಸಾಂವಿಧಾನಿಕ ಪೀಠ ರಚಿಸಿದೆ.

ಐದನೇ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್, ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ ಟಿ ರವಿಕುಮಾರ್ ಇರಲಿದ್ದಾರೆ. ಪೀಠವು ಕೆಳಗಿನ ಪ್ರಕರಣಗಳನ್ನು ಆಲಿಸಲಿದೆ:

- ವಾಟ್ಸಾಪ್‌ ಗೌಪ್ಯತಾ ನೀತಿ ಮತ್ತು ಸಂವಿಧಾನದ 21ನೇ ವಿಧಿಯಡಿಯಲ್ಲಿ ಅದರ ಬಳಕೆದಾರರ ಗೌಪ್ಯತೆಯ ಹಕ್ಕಿಗೆ ಸಂಬಂಧಿಸಿದ ಅರ್ಜಿ [ಕರ್ಮಣ್ಯ ಸಿಂಗ್ ಸರೀನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ];

- ಚುನಾವಣಾ ಆಯೋಗದ ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ಮತ್ತಷ್ಟು ದೋಷರಹಿತ ವ್ಯವಸ್ಥೆ ಇರಬೇಕೆಂದು ಕೋರಿರುವ ಮನವಿ [ಅನೂಪ್ ಬರನ್ವಾಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ];

- ಸಾಂಸ್ಕೃತಿಕ ಹಕ್ಕಾಗಿ ಗೂಳಿ ಪಳಗಿಸುವ ಕ್ರೀಡೆ ನಡೆಸಲು ಅವಕಾಶ ನೀಡಬಹುದೇ ಎಂದು ಪ್ರಶ್ನಿಸಿರುವ ಮನವಿ. ಜಲ್ಲಿಕಟ್ಟಿಗೆ ಅನುಮತಿ ನೀಡಲು ತಮಿಳುನಾಡು ಸರ್ಕಾರ ಜಾರಿಗೆ ತಂದಿರುವ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ತಮಿಳುನಾಡು ತಿದ್ದುಪಡಿ) ಕಾಯಿದೆ- 2017ನ್ನು ಅರ್ಜಿಯನ್ನು ಪ್ರಶ್ನಿಸಲಾಗಿದೆ [ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ];

- ದಯಾಮರಣಕ್ಕೆ ಸಂಬಂಧಿಸಿದ ಪ್ರಕರಣ [ಕಾಮನ್‌ ಕಾಸ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ];

- ಅಧಿಕೃತವಲ್ಲದ ಒಪ್ಪಂದದಲ್ಲಿ ಅಂತರ್ಗತವಾಗಿರುವ ಮಧ್ಯಸ್ಥಿಕೆ ಒಪ್ಪಂದದ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಕರಣ [ಗ್ಲೋಬಲ್ ಮರ್ಕೆಂಟೈಲ್ ಪ್ರೈವೇಟ್ ಲಿಮಿಟೆಡ್. ಮತ್ತು ಇಂಡೋ ಯೂನಿಕ್ ಫ್ಲೇಮ್ ಲಿಮಿಟೆಡ್ ನಡುವಣ ಪ್ರಕರಣ];

- ವ್ಯಭಿಚಾರಕ್ಕೆ ಸಂಬಂಧಿಸಿದ ಪ್ರಕರಣ [ಜೋಸೆಫ್ ಶೈನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

Also Read
ಸುಪ್ರೀಂ ಕೋರ್ಟ್‌ನಿಂದ ನಾಲ್ಕನೆಯ ಸಾಂವಿಧಾನಿಕ ಪೀಠದ ರಚನೆ: 5 ಪ್ರಕರಣಗಳನ್ನು ಆಲಿಸಲಿರುವ ನ್ಯಾಯಾಲಯ

ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ನಾಲ್ಕು ಸಾಂವಿಧಾನಿಕ ಪೀಠಗಳು ಅಸ್ತಿತ್ವದಲ್ಲಿವೆ. ಐದನೇ ಸಾಂವಿಧಾನಿಕ ಪೀಠ ರಚನೆಯೊಂದಿಗೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಒಟ್ಟು 29 ನ್ಯಾಯಮೂರ್ತಿಗಳಲ್ಲಿ 25 ಮಂದಿ ವಿವಿಧ ಸಾಂವಿಧಾನಿಕ ಪೀಠಗಳ ಭಾಗವಾಗಿದ್ದಾರೆ.

Kannada Bar & Bench
kannada.barandbench.com