Khaled Ka Shivaji
Khaled Ka Shivaji

ಬಲಪಂಥೀಯರ ಪ್ರತಿಭಟನೆಯಿಂದಾಗಿ 'ಖಾಲಿದ್ ಕಾ ಶಿವಾಜಿ' ಬಿಡುಗಡೆ ಸ್ಥಗಿತ: ಬಾಂಬೆ ಹೈಕೋರ್ಟ್ ಕದ ತಟ್ಟಿದ ನಿರ್ಮಾಪಕ

ಬಿಡುಗಡೆಗೆ ಒಂದು ದಿನ ಮೊದಲು ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಅಮಾನತುಗೊಳಿಸಿರುವುದು ನಿರಂಕುಶ, ಕಾನೂನುಬಾಹಿರ ಹಾಗೂ ರಾಜಕೀಯ ಒತ್ತಡದ ಫಲ ಎಂದು ಚಲನಚಿತ್ರ ನಿರ್ಮಾಪಕರು ಹೇಳಿದ್ದಾರೆ.
Published on

ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು  ಆರೋಪಿಸಿ ಬಲ ಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ತಮ್ಮ ಮರಾಠಿ ಚಿತ್ರ 'ಖಾಲಿದ್ ಕಾ ಶಿವಾಜಿ'ಯ ಸೆನ್ಸಾರ್ ಪ್ರಮಾಣಪತ್ರವನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ರಾಜ್ ಪ್ರೀತಮ್ ಮೋರ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ರಾಜ್ ಪ್ರೀತಮ್ ಮೋರ್ ಮತ್ತು ಸಿಬಿಎಫ್‌ಸಿ ಇನ್ನಿತರರ ನಡುವಣ ಪ್ರಕರಣ] .

ಬಿಡುಗಡೆಗೆ ಒಂದು ದಿನ ಮೊದಲು ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಅಮಾನತುಗೊಳಿಸಿರುವುದು ನಿರಂಕುಶ, ಕಾನೂನುಬಾಹಿರ ಹಾಗೂ ರಾಜಕೀಯ ಪ್ರೇರಿತ ಹಾಗೂ ತಮ್ಮ ಸಂವಿಧಾನದತ್ತ ವಾಕ್‌ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಅವರು ದೂರಿದ್ದಾರೆ.

Also Read
ಚಿತ್ರ ಶೀರ್ಷಿಕೆಯನ್ನು ಚಲನಚಿತ್ರ ಸಂಘದಲ್ಲಿ ನೋಂದಾಯಿಸಿದ್ದರೂ ಅದಕ್ಕೆ ಹಕ್ಕುಸ್ವಾಮ್ಯ ರಕ್ಷಣೆ ಇರದು: ಬಾಂಬೆ ಹೈಕೋರ್ಟ್

ಆದರೆ ಕೂಡಲೇ ಪರಿಹಾರ ಒದಗಿಸಲು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠ ಗುರುವಾರ ನಿರಾಕರಿಸಿತು. ಇದೇ ವೇಳೆ, ಹೆಚ್ಚಿನ ವಿಚಾರಣೆಗೆ ಅವಕಾಶ ನೀಡದೆ ಅಮಾನತು ಅವಧಿಯನ್ನು ವಿಸ್ತರಿಸಬಾರದು ಎಂದು ಕೂಡ ನ್ಯಾಯಾಲಯ ಮೌಖಿಕವಾಗಿ ನಿರ್ದೇಶಿಸಿತು.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ಅವಧಿ ವಿಸ್ತರಣೆ ಮಾಡುವ ಕನಿಷ್ಠ ಒಂದು ವಾರ ಮುಂಚಿತವಾಗಿ ನಿರ್ಮಾಪಕರಿಗೆ ತಿಳಿಸಿ ವಿಚಾರಣೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಅಮಾನತು ಅವಧಿ ಮುಗಿಯುವ ಮೊದಲು ಅರ್ಜಿದಾರರು ಸಲ್ಲಿಸುವ ಯಾವುದೇ ಮನವಿ ಕುರಿತು ನಿರ್ಧಾರ ಕೈಗೊಳ್ಳುವಂತೆ ನ್ಯಾಯಾಲಯ ಸಚಿವಾಲಯಕ್ಕೆ ನಿರ್ದೇಶನ ನೀಡಿತು. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 22ರಂದು ನಡೆಯಲಿದೆ.

ಧರ್ಮಕ್ಕಾಗಿ ಕಿರುಕುಳಕ್ಕೊಳಗಾದ ನಂತರ ಶಿವಾಜಿ ಮಹಾರಾಜನ ಬಗ್ಗೆ ತಿಳಿದುಕೊಳ್ಳುವ ಯುವ ಮುಸ್ಲಿಂ ಹುಡುಗನ ಕಥೆ ಚಿತ್ರದ ಹಂದರ. ಮಂಡಳಿ  ಸೂಚಿಸಿದ ಮಾರ್ಪಾಡುಗಳನ್ನು ತಯಾರಕರು ಪಾಲಿಸಿದ ನಂತರ, ನವೆಂಬರ್ 12, 2024ರಂದು ಚಿತ್ರಕ್ಕೆ ಸಿಬಿಎಫ್‌ಸಿ ಪ್ರಮಾಣಪತ್ರ ನೀಡಿತ್ತು. ಚಿತ್ರ ಕ್ಯಾನೆ ಸೇರಿದಂತೆ ಹಲವು ಚಲನಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಮಹಾರಾಷ್ಟ್ರ ಸರ್ಕಾರದ ಅಧಿಕೃತ ಬೆಂಬಲ ದೊರೆತಿದೆ. ಆದರೂ ಟ್ರೇಲರ್‌ ಆನ್‌ಲೈನ್‌ನಲ್ಲಿ ಬಿಡುಗಡೆಯಾದ ಬಳಿಕ ಬಲಪಂಥೀಯ ಗುಂಪುಗಳು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದವು ಎಂದು ಅರ್ಜಿ ಹೇಳಿದೆ.

Also Read
ಚಿತ್ರೋತ್ಸವಕ್ಕೆ ಚಲನಚಿತ್ರ ಪರಿಗಣನೆಯಲ್ಲಿ ಪಕ್ಷಪಾತ ಆರೋಪ: ಸರ್ಕಾರ, ಅಕಾಡೆಮಿಗೆ ಹೈಕೋರ್ಟ್‌ ತುರ್ತು ನೋಟಿಸ್‌

ಶಿವಾಜಿ ಮಹಾರಾಜರ ಜಾತ್ಯತೀತತೆಯನ್ನು ಚಿತ್ರಿಸಿರುವುದನ್ನು ಹಾಗೂ ಅವರ ಸೈನ್ಯದಲ್ಲಿ ಮುಸ್ಲಿಮರ ಉಪಸ್ಥಿತಿ ಇತ್ತು ಎಂದು ಹೇಳಿರುವುದನ್ನು ಅವು ಆಕ್ಷೇಪಿಸಿವೆ.  ಐತಿಹಾಸಿಕವಾಗಿ ನಿಖರವಾಗಿರದ ಇಂತಹ ಅಂಶಗಳನ್ನು ತೋರಿಸಬಾರದು ಎಂದು ಹೇಳಿವೆ. ಈ ಆಕ್ಷೇಪಣೆಗಳ ಬಳಿಕ ಸಿಬಿಎಫ್‌ಸಿ ತನಗೆ ದಿಢೀರನೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅದೇ ದಿನ ಸಾರ್ವಜನಿಕ ಹಿತಾಸಕ್ತಿ ಮತ್ತು ಸಂಭಾವ್ಯ ಕಾನೂನು ಮತ್ತು ಸುವ್ಯವಸ್ಥೆ ಉಲ್ಲೇಖಿಸಿ ಸಚಿವಾಲಯ    ಸಿಬಿಎಫ್ಸಿ ಪ್ರಮಾಣಪತ್ರವನ್ನು ಒಂದು ತಿಂಗಳ ಅವಧಿಗೆ ಅಮಾನತುಗೊಳಿಸಿತು ಎಂದು ಮನವಿಯಲ್ಲಿ ವಿವರಿಸಲಾಗಿದೆ.

ತಮ್ಮ ವಾದವನ್ನು ಸರಿಯಾಗಿಆಲಿಸದೆ, ವಿಚಾರಣೆ ನಡೆಸಿದ ಒಂದು ಗಂಟೆ ಕಡಿಮೆ ಅವಧಿಯಲ್ಲಿ  ಪ್ರಮಾಣಪತ್ರ ತಡೆಹಿಡಿದಿರುವುದುಸ್ವಾಭಾವಿಕನ್ಯಾಯದಉಲ್ಲಂಘನೆ. ಅಮಾನತು ಆದೇಶ ಅಸ್ಪಷ್ಟವಾಗಿದ್ದು ಸಾಕ್ಷ್ಯಗಳನ್ನು ಆಧರಿಸಿಲ್ಲ. ವಿಚಾರಣೆ ವೇಳೆ ಉಪಸ್ಥಿತರಿದ್ದ ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತರು ಕೂಡ ಅಶಾಂತಿ ಉಂಟಾಗುತ್ತದೆ ಎಂಬುದನ್ನು ಸಮರ್ಥಿಸುವ ವರದಿ  ಸಲ್ಲಿಸಿಲ್ಲ. ಹೀಗಾಗಿ ಅಮಾನತು ಆದೇಶ ರದ್ದುಗೊಳಿಸಿ ಚಿತ್ರ ಬಿಡುಗಡೆಗೆ ಅವಕಾಶ ನೀಡಬೇಕು. ಅಮಾನತು ಆದೇಶಕ್ಕೆ ತಡೆ ನೀಡುವ ಹಾಗೂ ಚಿತ್ರ ಪ್ರದರ್ಶನ ಮತ್ತು ವಿತರಣೆಯಲ್ಲಿ ಮುಂದೆಯೂ ಹಸ್ತಕ್ಷೇಪ ಮಾಡದಂತೆ ಮಧ್ಯಂತರ ತಡೆ ನೀಡಬೇಕೆಂದು ಅವರು ಕೋರಿದ್ದಾರೆ.

Kannada Bar & Bench
kannada.barandbench.com