
ಆರೋಪಿಯೊಬ್ಬರು ಸಲ್ಲಿಸಿದ ಎಫ್‌ಐಆರ್‌ನಲ್ಲಿ ತಪ್ಪೊಪ್ಪಿಗೆ ಇದ್ದರೆ, ಅದನ್ನು ವಿಚಾರಣೆ ವೇಳೆ ಆರೋಪಿಯ ವಿರುದ್ಧದ ಸಾಕ್ಷ್ಯವಾಗಿ ಅವಲಂಬಿಸಬಾರದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ [ನಾರಾಯಣ್ ಯಾದವ್ ಮತ್ತು ಛತ್ತೀಸ್‌ಗಢ ಸರ್ಕಾರ ನಡುವಣ ಪ್ರಕರಣ].
ಅಂತಹ ಎಫ್‌ಐಆರ್‌ಗಳು ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 25 (ಪೊಲೀಸ್ ಅಧಿಕಾರಿಗೆ ತಪ್ಪೊಪ್ಪಿಗೆ) ಅಡಿಯಲ್ಲಿ ಬರಲಿದ್ದು ಅವುಗಳನ್ನು ದೃಢೀಕರಣದ ಉದ್ದೇಶಕ್ಕೂ ಬಳಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ತೀರ್ಪು ನೀಡಿತು.
ತನ್ನ ಉದ್ಯೋಗದಾತನ ಕೊಲೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯ ನಾರಾಯಣ ಯಾದವ್ ಎಂಬುವವರಿಗೆ ಶಿಕ್ಷೆ ವಿಧಿಸಿತ್ತು. ಛತ್ತೀಸ್‌ಗಢ ಹೈಕೋರ್ಟ್ ಸೆಕ್ಷನ್ 304ರ ಅಡಿ ಕೊಲೆಗೆ ಸಮನಲ್ಲದ ನರಹತ್ಯೆ ಎಂದು ಪರಿಗಣಿಸಿ ಶಿಕ್ಷೆಯನ್ನು ಮಾರ್ಪಡಿಸಿತ್ತು.
ಆದರೆ ಯಾದವ್ ಖುದ್ದು ಸಲ್ಲಿಸಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ತಪ್ಪಾಗಿ ಅವಲಂಬಿಸಿದೆ ಎಂದ ಸುಪ್ರೀಂ ಕೋರ್ಟ್ ಈ ದಾಖಲೆ ತಪ್ಪೊಪ್ಪಿಗೆಯ ಸ್ವರೂಪದ್ದಾಗಿದ್ದು ಕಾನೂನುಬದ್ಧವಾಗಿ ಸ್ವೀಕಾರಾರ್ಹವಲ್ಲ ಎಂದಿದೆ.
"ಮೇಲ್ಮನವಿ ಸಲ್ಲಿಸಿದ ಎಫ್‌ಐಆರ್ ತಪ್ಪೊಪ್ಪಿಗೆಗೆ ಸಮನಾಗಿರುತ್ತದೆ. ಆರೋಪಿಯು ಪೊಲೀಸರ ಮುಂದೆ ಮಾಡುವ ಯಾವುದೇ ತಪ್ಪೊಪ್ಪಿಗೆಯನ್ನು 1872ರ ಕಾಯಿದೆಯ ಸೆಕ್ಷನ್ 25ರ ಅಡಿಯಲ್ಲಿ ಪರಿಗಣಿಸಬೇಕು" ಎಂದು ನ್ಯಾಯಾಲಯ ಹೇಳಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿನ ವೈದ್ಯಕೀಯ ಸಾಕ್ಷ್ಯಗಳನ್ನು ಯಾದವ್ ಅವರ ಎಫ್‌ಐಆರ್‌ನ ವಿಷಯಗಳೊಂದಿಗೆ ಹೋಲಿಸಿದ ಹೈಕೋರ್ಟ್ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು.
"ಮೇಲ್ಮನವಿ ಸಲ್ಲಿಸಿದ ಎಫ್‌ಐಆರ್‌ನ ತಪ್ಪೊಪ್ಪಿಗೆ ಭಾಗದೊಂದಿಗೆ ದಾಖಲೆಯಲ್ಲಿರುವ ವೈದ್ಯಕೀಯ ಪುರಾವೆಗಳ ದೃಢೀಕರಣವನ್ನು ಹೈಕೋರ್ಟ್ ಕೋರುವುದರಲ್ಲಿ ಯಾವುದೇ ಅರ್ಥ ಇಲ್ಲ" ಎಂದು ನ್ಯಾಯಾಲಯ ಹೇಳಿದೆ.
ಎಫ್‌ಐಆರ್‌ನಲ್ಲಿನ ಹೇಳಿಕೆಗಳನ್ನು ರೂಪಿಸಿದವರು ಕಟಕಟೆಯೊಳಗೆ ಕಾಲಿಟ್ಟರೆ ಮಾತ್ರ ಅದನ್ನು ವಿರೋಧಿಸಲು ಅಥವಾ ಒಪ್ಪಲು ಬಳಸಬಹುದು ಎಂದು ಪೀಠ ಸ್ಪಷ್ಟಪಡಿಸಿತು. ಆರೋಪಿಯೊಬ್ಬರು ಎಫ್‌ಐಆರ್ ದಾಖಲಿಸಿದಾಗ ಮತ್ತು ಅದು ತಪ್ಪೊಪ್ಪಿಗೆಯ ಅಂಶಗಳನ್ನು ಹೊಂದಿದ್ದರೆ, ಅದನ್ನು ಸೆಕ್ಷನ್ 25ರ ಅಡಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ.
ಅಲ್ಲದೆ ಸತ್ಯದ ಆವಿಷ್ಕಾರಕ್ಕೆ ಕಾರಣವಾಗುವ ಯಾವುದೇ ಮಾಹಿತಿಯು ಸೆಕ್ಷನ್ 27 ರ ಅಡಿಯಲ್ಲಿ ಸೀಮಿತ ಮಟ್ಟಿಗೆ ಸ್ವೀಕಾರಾರ್ಹವಾಗಬಹುದು ಎಂದು ನ್ಯಾಯಾಲಯ ನುಡಿಯಿತು.
ಅಪರಾಧ ನಡೆದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ಯುವಲ್ಲಿ ಮೇಲ್ಮನವಿದಾರ ತಳೆದ ನಿಲುವಿನಿಂದಾಗಿ ಸೆಕ್ಷನ್ 8 ರ ಅಡಿಯಲ್ಲಿ ಎಫ್‌ಐಆರ್ ಅನ್ನು ಬಳಸಬಹುದು ಎಂಬ ಸರ್ಕಾರದ ವಾದವನ್ನು ನ್ಯಾಯಪೀಠ ತಿರಸ್ಕರಿಸಿತು.
ಅಲ್ಲದೆ ಹೈಕೋರ್ಟ್ ತಪ್ಪಾಗಿ ನಿಷೇಧಿತ ತಪ್ಪೊಪ್ಪಿಗೆಯ ಎಫ್‌ಐಆರ್ ಅನ್ನು ಅವಲಂಬಿಸಿದ್ದು ಆರೋಪಿಯನ್ನು ಅಪರಾಧದೊಂದಿಗೆ ನಂಟು ಕಲ್ಪಿಸಲು ಯಾವುದೇ ಕಾನೂನುಬದ್ಧ ಸ್ವೀಕಾರಾರ್ಹ ಪುರಾವೆಗಳು ಇಲ್ಲ ಎಂದ ನ್ಯಾಯಾಲಯ ಶಿಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿತು.
ಪ್ರಕರಣದ ಒಟ್ಟಾರೆ ದೃಷ್ಟಿಕೋನದಲ್ಲಿ, ಛತ್ತೀಸ್‌ಗಢ ಹೈಕೋರ್ಟ್ ನೀಡಿದ ತೀರ್ಪು ಕಾನೂನಿನಲ್ಲಿ ಸಮರ್ಥನೀಯವಲ್ಲ ಎಂದ ನ್ಯಾಯಾಲಯ ಎಲ್ಲಾ ಆರೋಪಗಳಿಂದ ಮೇಲ್ಮನವಿದಾರರನ್ನು ಮುಕ್ತಗೊಳಿಸಿತು. ತೀರ್ಪಿನ ಪ್ರತಿಗಳನ್ನು ಎಲ್ಲಾ ಹೈಕೋರ್ಟ್‌ಗಳಿಗೆ ವಿತರಿಸುವಂತೆ ನ್ಯಾಯಾಲಯದ ರಿಜಿಸ್ಟ್ರಿಗೆ ನಿರ್ದೇಶಿಸಿತು.
[ತೀರ್ಪಿನ ಪ್ರತಿ]