
ರಾಜ್ಯದಲ್ಲಿ ನಕಲಿ ವಕೀಲರ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಐವರು ನಕಲಿ ವಕೀಲರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್ ಎಸ್ ಮಿಟ್ಟಲಕೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ರಾಜ್ಯ ವಕೀಲರ ಪರಿಷತ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಕಲಿ ವಕೀಲರು ಹಾವಳಿ ಇತ್ತೀಚೆಗೆ ಜಾಸ್ತಿಯಾಗಿದೆ. ಅನೇಕರು ಹೊರ ರಾಜ್ಯಗಳಲ್ಲಿ ಕಾನೂನು ಪದವಿಯನ್ನು ಪಡೆಯಲಾಗಿದೆ ಎಂದು ತಿಳಿಸಿ ನಕಲಿ ಅಂಕಪಟ್ಟಿ ಸಲ್ಲಿಸಿ, ವಕೀಲಿಕೆ ನಡೆಸಲು ಸನ್ನದು ಕೋರಿ ಅರ್ಜಿ ಸಲ್ಲಿಸಿದ್ದರು. ಅಂತಹ ಅಂಕಪಟ್ಟಿಗಳನ್ನು ಪರಿಶೀಲನೆಗಾಗಿ ಸಂಬಂಧಪಟ್ಟ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗಿತ್ತು. ಪರಿಶೀಲನೆ ವೇಳೆ ಆ ಅಂಕಪಟ್ಟಿಗಳು ನಕಲಿ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ನಕಲಿ ವಕೀಲರ ವಿರುದ್ಧ ಬೆಂಗಳೂರಿನ ವಿಧಾನಸೌಧ ಸೌಧ, ಕಬ್ಬನ್ ಪಾರ್ಕ್, ಮತ್ತು ಬಸವೇಶ್ವರ ನಗರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಮತ್ತು ತುಮಕೂರು ಜಿಲ್ಲೆಯಲ್ಲಿ ಎರಡು ಎಫ್‌ಐಆರ್ ದಾಖಲಾಗಿವೆ. ಸುಳ್ಳು ಮಾಹಿತಿ ನೀಡಿ ಸನ್ನದು ಪಡೆದವರ ಬಗ್ಗೆ ಪರಿಷತ್ ವತಿಯಿಂದ ದೂರು ದಾಖಲಿಸಲಾಗುತ್ತಿದೆ. ಆದ್ದರಿಂದ ಸುಳ್ಳು ಮಾಹಿತಿ ಹಾಗೂ ದಾಖಲೆ ನೀಡಿ ಸನ್ನದು ಪಡೆದವರು ಆಗಸ್ಟ್ 30ರೊಳಗೆ ಸ್ವಯಂ ಪ್ರೇರಿತವಾಗಿ ಸನ್ನದು ಹಿಂದಿರುಗಿಸಬೇಕು ಎಂದು ಮಿಟ್ಟಲಕೋಡ ತಿಳಿಸಿದ್ದಾರೆ.