ಎಫ್ಐಆರ್ ವಿಶ್ವಕೋಶವಾಗಿರಬೇಕಿಲ್ಲ, ಅಪರಾಧದ ವರದಿ ಮಾತ್ರ ಅಗತ್ಯ: ಕರ್ನಾಟಕ ಹೈಕೋರ್ಟ್

ದಾಳಿಕೋರರ ಹೆಸರನ್ನು ಉಲ್ಲೇಖಿಸದೆ ಮೃತನ ಸಹೋದರಿ ತನ್ನ ಸಹೋದರನನ್ನು ಹತ್ಯೆಗೈದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದ ಮಾತ್ರಕ್ಕೆ ಅದುವೇ ನಂಬದಿರಲು ಪ್ರಮುಖ ಕಾರಣವಾಗಬೇಕಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ...
High Court of Karnataka
High Court of Karnataka

ಕೊಲೆ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್‌ ಪ್ರಥಮ ಮಾಹಿತಿ ವರದಿಯು (ಎಫ್‌ಐಆರ್‌) ಅಪರಾಧಕ್ಕೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಒಳಗೊಳ್ಳುವ ಅವಶ್ಯಕತೆ ಇಲ್ಲ, ಅಪರಾಧವನ್ನು ವರದಿ ಮಾಡಿದರೆ ಸಾಕು ಎಂದು ಹೇಳಿದೆ.

ಇದನ್ನು ಒತ್ತಿ ಹೇಳಿ ಆದೇಶ ಹೊರಡಿಸಿರುವ ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರು ಹೀಗೆ ಹೇಳಿದ್ದಾರೆ,

“ಪ್ರಥಮ ಮಾಹಿತಿಯು ವಿಶ್ವಕೋಶವಾಗಿರಬೇಕಿಲ್ಲ, ಅದು ಎಲ್ಲವನ್ನೂ ಒಳಗೊಳ್ಳಬೇಕಿಲ್ಲ. ಪೊಲೀಸರಿಗೆ ಅಪರಾಧದ ಮಾಹಿತಿ ನೀಡುವುದಷ್ಟೇ ಬೇಕಾಗಿರುವುದು.”
ಕರ್ನಾಟಕ ಹೈಕೋರ್ಟ್‌

2018ರ ನವೆಂಬರ್‌ 20 ರಂದು ಹೆಣ್ಣೂರು ಬಂಡೆಯ ಬಳಿ ತನ್ನ ಸಹೋದರ ಕೇಶವ ಎನ್ನುವರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿರುವುದಾಗಿ ತನ್ನ ಭಾವ ಗೋವಿಂದರಾಜು ತಿಳಿಸಿದರು ಎಂದು ಪೊಲೀಸರಿಗೆ ಕೊಲೆಯಾದ ಕೇಶವ್‌ ಸಹೋದರಿ ಮಾಹಿತಿ ನೀಡಿದ್ದರು. ಕೂಡಲೇ ಆಕೆ ಸ್ಥಳಕ್ಕೆ ಭೇಟಿ ನೀಡಿ ಸಹೋದರನ ಮೃತದೇಹವನ್ನು ಕಂಡಿದ್ದರು.

ಮಾರಕಶಾಸ್ತ್ರಗಳಿಂದ ತನ್ನ ಸಹೋದರನ ಮೇಲೆ 3-4 ಮಂದಿ ದಾಳಿ ನಡೆಸಿ, ಕೊಲೆ ಮಾಡಿದ್ದಾರೆ ಎಂಬುದು ಆಕೆ ಸ್ಥಳಕ್ಕೆ ಭೇಟಿ ನೀಡಿದ್ದಾಗ ಗೊತ್ತಾಗಿತ್ತು. ಈ ಮಾಹಿತಿ ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಇದನ್ನು ಆಧರಿಸಿ ಅರ್ಜಿದಾರರು ಮತ್ತು ಇತರರನ್ನು ಬಂಧಿಸಲಾಗಿದೆ.

ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಪ್ರತ್ಯಕ್ಷದರ್ಶಿಗಳು ಘಟನೆಯ ವಿವರವನ್ನು ಪೊಲೀಸರಿಗೆ ನೀಡದಂತೆ ಯಾರೂ ತಡೆದಿಲ್ಲ. ಈ ಕಾರಣದಿಂದ ಅವರನ್ನು (ಸಹೋದರಿ) ಘಟನೆಯ ಪ್ರತ್ಯಕ್ಷದರ್ಶಿ ಎಂದು ನಂಬಲಾಗದು. ಹಾಗಾಗಿ, ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧ ಯಾವುದೇ ಪ್ರಕರಣವಿಲ್ಲ, ಎಂದು ಅರ್ಜಿದಾರರ ಪರ ವಕೀಲರು ಜಾಮೀನಿಗಾಗಿ ಹೈಕೋರ್ಟ್‌ಗೆ ಮನವಿ ಮಾಡಿದರು.

"ಪ್ರತ್ಯಕ್ಷದರ್ಶಿ ಘಟನೆಯನ್ನು ಪೊಲೀಸರಿಗೆ ವಿವರಿಸಿಲ್ಲ ಎಂದಾಕ್ಷಣ ಮೇಲ್ನೋಟಕ್ಕೆ ಯಾವುದೇ ಪ್ರಕರಣ ಇಲ್ಲ ಎಂದು ಹೇಳಲಾಗದು. ಕೊಲೆಗೆ ಬಳಕೆ ಮಾಡಲಾದ ಚಾಕುವನ್ನು ಅರ್ಜಿದಾರರಿಂದ ವಶಪಡಿಸಿಕೊಳ್ಳಲಾಗಿದೆ” ಎಂದು ಆರೋಪಿಯ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲರು ವಾದಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೀಠವು ಸಂತ್ರಸ್ತನ ಸಹೋದರಿ ತನ್ನ ಸಹೋದರನ ಕೊಲೆಯಾಗಿದೆ ಎಂದು ಆರೋಪಿಗಳ ಹೆಸರನ್ನು ಉಲ್ಲೇಖಿಸಿದೇ ಮಾಹಿತಿ ನೀಡಿದ್ದರೆ ಅದನ್ನು ಆಧರಿಸಿ ಎಫ್‌ಐಆರ್‌ ಮೇಲೆ ಅಪನಂಬಿಕೆ ವ್ಯಕ್ತಪಡಿಸಲಾಗದು ಎಂದಿತು. ಘಟನಾ ಸ್ಥಳದಲ್ಲಿ ನಡೆದಿರುವ ಅಪರಾಧದ ಬಗ್ಗೆ ಇತರೆ ಸಾಕ್ಷಿದಾರರು ವಿಸ್ತೃತ ವಿವರಣೆ ನೀಡಿದ್ದು, ಈ ಸಂದರ್ಭದಲ್ಲಿ ಸಾಕ್ಷಿಗಳ ಹೇಳಿಕೆಯನ್ನು ತಳ್ಳಿಹಾಕಲಾಗದು ಎಂದು ಪೀಠ ಹೇಳಿದೆ.

Also Read
ಟೆಂಪಲ್ಟನ್‌ ಪ್ರಕರಣ: ಕರ್ನಾಟಕ ಹೈಕೋರ್ಟ್‌ ʼಜಾಲ ಕಲಾಪʼದ ಮೂಲಕ ನಡೆಸಿದ ಅತಿ ಸುದೀರ್ಘ ವಿಚಾರಣೆ?

“ಪ್ರತ್ಯಕ್ಷದರ್ಶಿಗಳು ಎನ್ನಲಾದ ಕಿರಣ್‌ ಮತ್ತು ಶರತ್‌ ಅವರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದಾಕ್ಷಣ ಈ ಸಂದರ್ಭದಲ್ಲಿ ಅವರ ಹೇಳಿಕೆಗಳ ಮೇಲೆ ಅಪನಂಬಿಕೆ ವ್ಯಕ್ತಪಡಿಸಲಾಗದು. ಅವರ ವರ್ತನೆಯನ್ನು ಪರೀಕ್ಷಿಸಲು ವಿಚಾರಣೆಯ ಸಂದರ್ಭದಲ್ಲಿ ಅವರನ್ನು ಪಾಟಿ ಸವಾಲಿಗೆ ಒಳಪಡಿಸಬಹುದು” ಎಂದಿತು.

ಅಪರಾಧದಲ್ಲಿ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿರುವುದರಿಂದ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡಲು ನ್ಯಾಯಾಲಯವು ನಿರಾಕರಿಸಿತು.

Related Stories

No stories found.
Kannada Bar & Bench
kannada.barandbench.com